Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನನ್ನ ಮುಂದಿನ ಜೀವನ ಸಮಾಜಸೇವೆಗೆ ಮೀಸಲು: ಯುವ ನಾಯಕ ರಾಹುಲ್ ಜಾರಕಿಹೊಳಿ

localview news

ಹುಕ್ಕೇರಿ:ನನ್ನ ಮುಂದಿನ ಜೀವನ ಸಮಾಜಸೇವೆಗೆ ಮೀಸಲು ಎಂದು‌ ಯುವ ನಾಯಕ ರಾಹುಲ್ ಜಾರಕಿಹೊಳಿ ಘೋಷಿಸಿದರು.

ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ಅಭಿಮಾನಿ‌ ಬಳಗದಿಂದ ಆಯೋಜಿಸಿದ್ದ ತಮ್ಮ 22ನೇ ಜನ್ಮದಿನ ಸಂಭ್ರಮಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ಇತ್ತೀಚೆಗೆ ಏರೊನಾಟಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದೇನೆ. ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇ‌ನೆ ಎಂದು ಹೇಳಿದರು.

ತಂದೆ ಸತೀಶ ಜಾರಕಿಹೊಳಿ ಅವರೊಂದಿಗೆ ಚಿಕ್ಕಂದಿನಿಂದಲೂ ಕೂಡ ನಮಗೆ ಸರಿಯಾಗಿ ಸಮಯ ಕಳೆಯಲು ಆಗಿಲ್ಲ. ಏಕೆಂದರೇ ಅವರು ತಮ್ಮ ಬಹುತೇಕ ‌ಸಮಯವನ್ನು ಸಮಾಜಸೇವೆಯಲ್ಲಿಯೇ ಕಳೆಯುತ್ತಾರೆ. ಆದರೆ,‌ ಈ ಭಾಗದ ಜನ ಅವರನ್ನು ದೇವರಂತೆ ಕಾಣುವುದರಿಂದ ನಮಗೆ ನಮ್ಮ ತಂದೆಯವರ ಬಗ್ಗೆ ಹೆಮ್ಮೆಯಾಗುತ್ತದೆ. ಅವರಿಂದ ಪ್ರೇರಣೆಗೊಂಡು ನಾನು ಕೂಡ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂದರು.

ಇನ್ನು ಮುಂದೆ ಅದ್ದೂರಿ ಜನ್ಮದಿನ ಆಚರಣೆ ಬೇಡ:

ಅನೇಕರು ಅಭಿಮಾನದಿಂದ ಕೇಕ್ ಗಳನ್ನು ಮಾಡಿಸಿಕೊಂಡು ಬಂದಿದ್ದೀರಿ, ಬೃಹತ್ ಕಾರ್ಯಕ್ರಮ ಆಯೋಜಿಸಿದ್ದೀರಿ. ಇದರಿಂದ ನನಗೆ ಸಂತಸವಾಗಿದೆ. ಆದರೆ, ಮುಂದಿನ ಬಾರಿಯಿಂದ ನನ್ನ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ‌ ಆಚರಿಸುವುದು ಬೇಡ.‌ ಮುಂದಿನ ಬಾರಿ ಯಾರು ಕೂಡ ಕೇಕ್ ತರಬೇಡಿ, ಕಾರ್ಯಕ್ರಮ ಆಯೋಜಿಸಬೇಡಿ. ಅದೇ ಹಣದಲ್ಲಿ ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಆಹಾರ ವಿತರಣೆ ಸೇರಿ‌ ಇನ್ನಿತರೇ ಸಾಮಾಜಿಕ ಕಾರ್ಯಗಳನ್ನು ಮಾಡೋಣ ಎಂದು‌ ಅಭಿಮಾನಿಗಳಿಗೆ ರಾಹುಲ್ ಮನವಿ ಮಾಡಿದರು.

ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ನಾನು ಯುವಕರಿಗೆ ಸದಾ ಪ್ರೋತ್ಸಾಹ ನೀಡುತ್ತೇವೆ. ಮಹಿಳಾ ಸಂಘಟನೆಗೆ‌ ಒತ್ತು ಕೊಡುತ್ತೇವೆ. ಬಡವರ ಏಳ್ಗೆಗೆ ಶ್ರಮಿಸುತ್ತೇವೆ. ಜನರ ಸಮಸ್ಯೆಗಳ ಸ್ಪಂದನೆಗೆ ನಾವು ಸದಾ ಸಿದ್ದರಿದ್ದೇವೆ ಎಂದು ರಾಹುಲ್ ಹೇಳಿದರು.

ಇದೇ ಸಂದರ್ಭದಲ್ಲಿ ರಾಹುಲ್ ಅವರು ಹುಟ್ಟುಹಬ್ಬದ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿದ ಎಲ್ಲ ಅಭಿಮಾನಿಗಳು, ಸಂಘಟಕರು, ಮುಖಂಡರು ಹಾಗೂ ಸ್ವಾಮೀಜಿಗಳಿಗೆ ಧನ್ಯವಾದ ಸಲ್ಲಿಸಿದರು.

ಅಭಿಮಾನದ ಹೊಳೆ: ಸೆಲ್ಫೀಗೆ ಮುಹಿಬಿದ್ದ ಫ್ಯಾನ್ಸ್

ಕಾರ್ಯಕ್ರಮದಲ್ಲಿ ರಾಹುಲ್‌ ಅವರ ಮೇಲೆ ಜನರ ಅಭಿಮಾನದ ಹೊಳೆಗೇ ಹರಿದುಬಂತು. ಯಮಕನಮರಡಿ, ಗೋಕಾಕ, ಮೂಡಲಗಿ ಹಾಗೂ ಬೆಳಗಾವಿ ಗ್ರಾಮೀಣ, ಸವದತ್ತಿ‌ ಮತಕ್ಷೇತ್ರ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಅಭಿಮಾನಿಗಳು, ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿ ರಾಹುಲ್ ಗೆ ಶುಭಾಶಯ ಕೋರಿದರು. ಅನೇಕರು ತಂಡೋಪತಂಡವಾಗಿ ಕೇಕ್ ತಂದಿದ್ದರು. ರಾಹುಲ್ ಅವರು ಅಭಿಮಾನಿಗಳು ತಂದ ಎಲ್ಲ ಕೇಕ್ ಗಳನ್ನು ಕತ್ತರಿಸಿ, ಸಂಭ್ರಮಿಸಿದರು. ರಾಹುಲ್ ಅವರೊಂದಿಗೆ ಅಭಿಮಾನಿಗಳು ಫೋಟೋ ಹಾಗೂ ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದರು.