ಡಾ.ದೇಬಪ್ರಸಾದ್ ಚಟ್ಟೋಪಾಧ್ಯಾಯ ಅವರಿಗೆ ಬೀಳ್ಕೊಡುಗೆ
ಬೆಳಗಾವಿ:ಬೆಳಗಾವಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಪಾರಂಪರಿಕ ಔಷಧಿ ಸಂಸ್ಥೆಯ ನಿರ್ದೇಶಕ ಡಾ.ದೇಬಪ್ರಸಾದ್ ಚಟ್ಟೋಪಾಧ್ಯಾಯ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ಡಾ.ದೇಬಪ್ರಸಾದ್ ಅವರನ್ನು ಸನ್ಮಾನಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಕೋವಿಡ್ ಸಂದರ್ಭದಲ್ಲಿ ಐಸಿಎಂಆರ್-ಎನ್ಐಟಿಎಂ ಕೇಂದ್ರದಲ್ಲಿ ಕೋವಿಡ್ ಪ್ರಯೋಗಾಲಯದ ಮೂಲಕ ತ್ವರಿತವಾಗಿ ವರದಿಗಳನ್ನು ನೀಡುವ ಮೂಲಕ ನಿಯಂತ್ರಣ ಕ್ರಮಗಳಿಗೆ ನೆರವಾಗಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಅತ್ಯಂತ ಒತ್ತಡದ ಮಧ್ಯೆಯೂ ಕೋವಿಡ್ ಪರೀಕ್ಷಾ ವರದಿಯನ್ನು ಸಕಾಲದಲ್ಲಿ ನೀಡಲು ಡಾ. ದೇಬಪ್ರಸಾದ ಚಟ್ಟೋಪಾಧ್ಯಾಯ ಸಹಕರಿಸಿದರು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ದೇಬಪ್ರಸಾದ ಚಟ್ಟೋಪಾಧ್ಯಾಯ ಅವರು, ತಮ್ಮ ಸೇವಾವಧಿಯಲ್ಲಿ ಕೋವಿಡ್ ಸೇರಿದಂತೆ ಎದುರಿಸಿದ ವಿವಿಧ ಸವಾಲುಗಳು ಹಾಗೂ ಅವುಗಳನ್ನು ನಿಭಾಯಿಸಲು ನಡೆಸಿದ ಪ್ರಯತ್ನಗಳ ಕುರಿತು ವಿವರಿಸಿದರು.ತಮ್ಮ ಸೇವಾವಧಿಯಲ್ಲಿ ಸಹಾಯ-ಸಹಕಾರ ನೀಡಿದ ಎಲ್ಲ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಮತ್ತಿತರರು ಉಪಸ್ಥಿತರಿದ್ದರು.