Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಿಕ್ಷಕ‌ ವೃತ್ತಿ ಪವಿತ್ರವಾದದ್ದು: ಕಾಡಯ್ಯ ಸ್ವಾಮೀಜಿ

localview news

ಮೂಡಲಗಿ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಶಿಕ್ಷಕರು ತಮ್ಮ ವೃತ್ತಿ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕು ಎಂದು ಅಥಣಿಯ ಕಾಡಸಿದ್ಧೇಶ್ವರ ಆಶ್ರಮದ ಕಾಡಯ್ಯ ಸ್ವಾಮಿಜಿ ಹೇಳಿದರು.

ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಮೈಸೂರಿನ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಚಿಕ್ಕೋಡಿ ಜಿಲ್ಲಾ ಘಟಕದಿಂದ ಆಯೋಜಿಸಿದ ವಾರ್ಷಿಕೋತ್ಸವ ಹಾಗೂ 2021ನೇ ಸಾಲಿನ ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಸಮಾಜ ಮತ್ತು ರಾಷ್ಟ್ರ ನಿರ್ಮಿಸುವ ಶಕ್ತಿ ಶಿಕ್ಷಕರಿಗಿದೆ ಎಂದರು.ಶಿಕ್ಷಕರ ಪ್ರತಿಭಾ ಪರಿಷತ್‍ವು ಉತ್ತಮ ಶಿಕ್ಷಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸಮಾಜದಲ್ಲಿ ಇಂಥ ಕಾರ್ಯಗಳು ನಿರಂತವಾಗಿ ನಡೆಯಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಬರವಣಿಗೆ ಹೀಗೆ ವಿವಿಧ ಆಯಾಮದಲ್ಲಿ ಪ್ರತಿಭೆ ತೋರುವ ಶಿಕ್ಷಕರನ್ನು ಇಲಾಖೆಯಿಂದ ಗುರುತಿಸುವ ಕಾರ್ಯಮಾಡುವ ಬಗ್ಗೆ ಪರಿಷತ್‍ವು ಪ್ರೇರಣೆ ನೀಡಿದೆ ಎಂದರು. ಶಿಕ್ಷಕರಾದವರು ಉತ್ತಮ ಪರಿವರ್ತನೆಗೆ ದಿಕ್ಸೂಚಿಯಾಗಬೇಕು. ಮಕ್ಕಳ ಕಷ್ಟ, ನಷ್ಟಗಳ ಬಗ್ಗೆ ಗಮನವಿಟ್ಟುಕೊಂಡು ಪಾಠ, ಮಾರ್ಗದರ್ಶನ ಮಾಡಿದರೆ ಉತ್ತಮ ಪರಿವರ್ತನೆಗೆ ದಾರಿಯಾಗುತ್ತದೆ ಎಂದರು.ಶಿಕ್ಷಕರ ಪ್ರತಿಭಾ ಪರಿಷತ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಚವ್ಹಾನ ಮಾತನಾಡಿ ಪರಿಷತ್‍ವು ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿದೆ. ಪ್ರತಿಭಾವಂತ ಶಿಕ್ಷಕರನ್ನು ಗುರುತಿಸುವಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತಲಿದ್ದು, ಪರಿಷತ್‍ವು ಬೆಳೆಯುವಲ್ಲಿ ಎಲ್ಲರ ಸಹಕಾರ ಅವಶ್ಯವಿದೆ ಎಂದರು.

ಡಾ. ರವೀಂದ್ರ ಭಟ್ ಸೂರಿ ಅವರು ಮಾತನಾಡಿ ಜೀವನದಲ್ಲಿ ಪ್ರಾಪ್ತವಾಗಿರುವ ಶಿಕ್ಷಕ ವೃತ್ತಿಯ ಅವಕಾಶವನ್ನು ಸಮರ್ಪಕವಾಗಿ ನಿಭಾಯಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ವ್ಯಕ್ತಿತ್ವ ಬೆಳವಣಿಗೆಗೆ ಪ್ರಶಸ್ತಿಗಳು ಮಾನದಂಡವಾಗಿರಬಾರದು ಪ್ರಶಸ್ತಿಗಳಿಗಾಗಿ ಕಾರ್ಯಮಾಡದೆ ಪ್ರಶಸ್ತಿಗಳಿಗೆ ಬೆನ್ನು ಹತ್ತದೆ, ಪ್ರಶಸ್ತಿಗಳೇ ನಮ್ಮ ಬೆನ್ನು ಹಿಂದೆ ಬರಬೇಕು. ಶಿಕ್ಷಕರ ಪ್ರತಿಭಾ ಪರಿಷತ್‍ವು ಪಾರದರ್ಶಕವಾದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಮೂಡಲಗಿಯ ಬಿಐಇಆರ್‍ಟಿ ವೈ.ಬಿ. ಪಾಟೀಲ ಮಾತನಾಡಿ ಪರಿಷತ್‍ವು ಮಾಡುವ ಎಲ್ಲ ಕಾರ್ಯಗಳಿಗೆ ಚೈತನ್ಯ ಸಂಸ್ಥೆಯು ನಿರಂತರ ಸಹಕಾರ ನೀಡುತ್ತದೆ ಎಂದರು. ಅತಿಥಿಗಳಾಗಿ ಪ್ರೊ.ಎಸ್.ಎಂ. ಕಮದಾಳ, ಸಿದ್ರಾಮ್ ದ್ಯಾಗಾನಟ್ಟಿ, ಎಲ್.ಎಂ. ಬಡಕಲ್ಲ, ಶಿಕ್ಷಕರ ಸಂಘದ ಎ.ಪಿ. ಪರಸನ್ನವರ ಭಾಗವಹಿಸಿದ್ದರು.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ಶೈಕ್ಷಣಿಕ ವಲಯದಲ್ಲಿ ಎಂಟು ಶಿಕ್ಷಕರಿಗೆ 2021ನೇ ಸಾಲಿನ ‘ಗುರುಶ್ರೇಷ್ಠ’ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದರುರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಉಪಾಧ್ಯಕ್ಷ ಶಂಕರ ಕ್ಯಾಸ್ತಿ ಪ್ರಾಸ್ತಾವಿಕ ಮಾತನಾಡಿದರು, ಚಂದ್ರು ಹಾಲಳ್ಳಿ ಸ್ವಾಗತಿಸಿದರು, ವಿಜಯ ಹುದ್ದಾರ ನಿರೂಪಿಸಿದರು, ಪರಿಷತ್ ಜಿಲ್ಲಾಧ್ಯಕ್ಷ ಲಕ್ಷ್ಮಣ ಚೌರಿ ವಂದಿಸಿದರು.

ಪ್ರಶಸ್ತಿ ಪುರಸ್ಕತರು : ಎ.ಡಿ. ಖಾತೇದಾರ (ಕಾಗವಾಡ ವಲಯ), ಎ.ವೈ. ಹೈಬತ್ತಿ (ಅಥಣಿ), ಎಸ್.ಕೆ. ನಣದಿ (ರಾಯಬಾಗ), ಹನುಮೇಶ ಪಂಚಾಳ (ಮೂಡಲಗಿ), ಪ್ರೊ. ಸುರೇಶ ಮುದ್ದಾರ (ಗೋಕಾಕ), ಬಿ.ಡಿ. ರಾಜಗೋಳಿ (ಚಿಕ್ಕೋಡಿ), ಆರ್.ಎಸ್. ಕುಲಕರ್ಣಿ (ನಿಪ್ಪಾಣಿ), ಬಿ.ಬಿ. ಶಿವಣ್ಣಗೋಳ (ಹುಕ್ಕೇರಿ).