Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಇದು ಹೈ ಟೆಕ್ ಶೌಚಾಲಯನಾ...?

localview news

ಅಥಣಿ : ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸ್ವಚ್ಛ ಭಾರತ್‌, ನಿರ್ಮಲ ಭಾರತ್‌ ಅಭಿಯಾನ ಸೇರಿದಂತೆ ನಾನಾ ಯೋಜನೆಗಳ ಮೂಲಕ ಶೌಚಾಲಯಗಳ ಮಹತ್ವ ಸಾರುವ ಮೂಲಕ ಸಾರ್ವಜನಿಕರಿಗೆ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುತ್ತಿರುವ ಇಂದಿನ ದಿನಗಳಲ್ಲಿ ಪಟ್ಟಣದ ಹಲ್ಯಾಳ ವೃತ್ತದ ಹತ್ತಿರ, ಐತಿಹಾಸಿಕ‌ ಕೆರೆಯ ಪಕ್ಕದ ಹೈಟೆಕ್ ಮಾದರಿಯ ಸಾರ್ವಜನಿಕ ಶೌಚಾಲಯ ನಿರ್ವಹಣೆ ಇಲ್ಲದೆ ಹಾಗೂ ಉಪಯೋಗಿಸದ ಕಾರಣ ಕಸ ಎಸೆಯುವ ತೊಟ್ಟಿಯಾಗಿ‌ ಬದಲಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಅಥಣಿ ಪುರಸಭೆ ವ್ಯಾಪ್ತಿಯ ವಾರ್ಡ ನಂ 15 ರ ಹಲ್ಯಾಳ ವೃತ್ತದ ಹತ್ತಿರ ಇರುವ ಖಾಲಿ ಜಾಗದಲ್ಲಿ ಹೈಟೆಕ್ ಮಾದರಿ ಸಾರ್ವಜನಿಕ ಶೌಚಾಲಯವನ್ನು ಸನ್ 2016-17 ನೇ ಸಾಲಿನ 14 ನೇ ಹಣಕಾಸು ಆಯೋಗದ ಮೂಲ ಅನುದಾನಡಿಯಲ್ಲಿ 07 ಲಕ್ಷ ರೂ ಪುರುಷರ ಶೌಚಾಲಯಕ್ಕಾಗಿ ಮತ್ತೆ 07 ಲಕ್ಷ ರೂ ಮಹಿಳೆಯರ ಶೌಚಾಲಯಕ್ಕಾಗಿ ಎಂದು ಒಟ್ಟು 14 ಲಕ್ಷ ರೂ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದು ಇಂದು‌ಅದು ಬಳಕೆ ಹಾಗೂ ಸರಿಯಾ್ ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿದೆ.

ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪುರಸಭೆ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗಿತ್ತು. ಈ ಕಾರ್ಯವು ಅಂದಿನ ದಿನಗಳಲ್ಲಿ ಸಾರ್ವಜನಿಕರ ಪ್ರಶಂಸೆಗೆ ಕೂಡ ಕಾರಣವಾಗಿತ್ತು. ಆದರೆ ದಿನ ಕಳೆದಂತೆ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಶೌಚಾಲಯವು 03 ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ.

ಶೌಚಾಲಯದ ಅಕ್ಕಪಕ್ಕದಲ್ಲಿರುವ ಅಂಗಡಿಯಲ್ಲಿ ಉಳಿದಂತ ತ್ಯಾಜ್ಯ ಹಾಗೂ ಕಸ ಕಡ್ಡಿ ಪ್ಲಾಸ್ಟಿಕ್ ಶೌಚಾಲಯದ ಬಳಿಗೆ ಹಾಕುವುದರಿಂದ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದೆ.‌ ವಿಶೇಷ ಎಂದರೆ 14 ಲಕ್ಷ ರೂ ಖರ್ಚು ಮಾಡಿದ ಈ ಶೌಚಾಲಯಕ್ಕೆ ನೀರಿನ ಸಂಪರ್ಕ ಒದಗಿಸದೆ ಇರುವುದರಿಂದ ಸಾರ್ವಜನಿಕರ ಬಳಕೆಗೆ ಬಾರದೆ ನಿರುಪಯುಕ್ತವಾಗಿದೆ.

ಶೌಚಾಲಯದ ಸುತ್ತಲೂ ಗಿಡಗಂಟಿ ಬೆಳೆದು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸದಿರುವುದರಿಂದ ರಸ್ತೆ ಬದಿ ಹಾಗೂ ಸಾರ್ವಜನಿಕ ಶೌಚಾಲಯಗಳ ಸುತ್ತು ಮುತ್ತ ಅನೈರ್ಮಲ್ಯ ಉಂಟಾಗಿ ಸುತ್ತಮುತ್ತಲಿನ ನಿವಾಸಿಗಳು ರೋಗ ರುಜಿನಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರ ಅನಿಸಿಕೆಯಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಚಗೊಳಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ‌ ಮಾಡಿಕೊಡಬೇಕೆಂದು ಜನಸ್ಪಂದನ ಸುದ್ದಿವಾಹಿನಿಯ ಆಶಯವಾಗಿದೆ.