Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಿತ್ತೂರ್ ಉತ್ಸವ ವೀರ ಜ್ಯೋತಿ ಯಾತ್ರೆಗೆ ಅದ್ದುರಿ ಸ್ವಾಗತ

localview news

ಅಥಣಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೇ ಬಲಿದಾನಗೈದ ಕಿತ್ತೂರಿನ ವೀರರಾಣಿ ಚೆನ್ನಮ್ಮಳ ಧೈರ್ಯ, ಶೌರ್ಯ, ಸಾಹಸ ಮತ್ತು ದೇಶಪ್ರೇಮ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಯಾಗಿದೆ ಎಂದು ಶೆಟ್ಟರ ಮಠದ ಮರುಳಸಿದ್ಧ ಮಹಾಸ್ವಾಮೀಜಿ ಹೇಳಿದರು.

ಅವರು ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ  ತಾಲೂಕಾಡಳಿತದಿಂದ  ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮಳ ವೀರ ಜ್ಯೋತಿ ಯಾತ್ರೆಯ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ ಬ್ರಿಟಿಷರ ವಿರುದ್ಧ ದಿಟ್ಟತನ ತೋರಿದ ಮತ್ತು ಸ್ವಾತಂತ್ರ್ಯದ ಕಿಡಿಯನ್ನು ಹಚ್ಚಿದ ವೀರ ರಾಣಿ ಚೆನ್ನಮ್ಮಳ  ಬದುಕು ನಮ್ಮೆಲ್ಲರಿಗೆ  ಪ್ರೇರಣಾ ಶಕ್ತಿಯಾಗಿದೆ.  ಇಂದಿನ ಮಕ್ಕಳಿಗೆ ವೀರರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನಚರಿತ್ರೆಯನ್ನು ತಿಳಿಸುವ ಕಾರ್ಯ ಆಗಬೇಕು ಎಂದು ಹೇಳಿದರು. ತಹಶೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ  ಕಳೆದ ಎರಡು ವರ್ಷಗಳಿಂದ  ಕೊರೋನಾ ಹಿನ್ನೆಲೆಯಲ್ಲಿ ಚೆನ್ನಮ್ಮನ  ಕಿತ್ತೂರು ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಗಿದೆ. 

ಈ ಬಾರಿ 25ನೇ ವರ್ಷಾಚರಣೆಯನ್ನು ಬೆಳ್ಳಿಹಬ್ಬದ ಉತ್ಸವ ಎಂದು ರಾಜ್ಯ ಸರ್ಕಾರ ಮತ್ತು  ಜಿಲ್ಲಾಡಳಿತ  ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಇದೇ  ದಿ. 23 ಮತ್ತು 24ರಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಕಿತ್ತೂರು ಉತ್ಸವ ಅದ್ದೂರಿಯಾಗಿ ನಡೆಯಲಿದೆ. ಉತ್ಸವದ ಪೂರ್ವದಲ್ಲಿ ಈ ವೀರ ಜ್ಯೋತಿಯಾತ್ರೆ ರಥವು  ಎಲ್ಲೆಡೆ ಸಂಚರಿಸಿ ಜನತೆಗೆ ಆಹಾರ ನೀಡುವುದರ ಜೊತೆಗೆ  ಚನ್ನಮ್ಮನ  ಇತಿಹಾಸವನ್ನು ಜನತೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತ್  ಪ್ರಾಸ್ತಾವಿಕವಾಗಿ ಮಾತನಾಡಿ ಚನ್ನಮ್ಮಳ ಜೀವನವೇ ನನಗೊಂದು ಸಂದೇಶವಾಗಿದೆ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ತಾಲೂಕ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ಪಿಎಸ್ಐ  ಕುಮಾರ್ ಹಾಡಕರ್ ಅವರು ಮಾತನಾಡಿದರು. ಈ ವೇಳೆ ತಾಪಂ ಅಧಿಕಾರಿ ಶೇಖರ್ ಕರಬಸಪ್ಪಗೋಳ್, ಸಮಾಜಸೇವಕ ರಾಮನಗೌಡ ಪಾಟೀಲ, ಅರುಣ ಯಲಗುದ್ರಿ, ಮಲ್ಲಿಕಾರ್ಜುನ ಕನಶಟ್ಟಿ, ರಮೇಶ್ ಸಿಂದಗಿ, ಜಗನ್ನಾಥ ಬಾಮನೆ, ಶಂಕರ್ ಮಗದುಮ, ಅಪ್ಪಾಸಾಹೇಬ್ ಅಲಿಬಾದಿ, ಬಸವರಾಜ್ ಠಕ್ಕಣ್ಣವರ್, ಅವಿನಾಶ್ ನಾಯಕ್, ಸುನಿಲ್ ಸಂಕ, ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಅಧಿಕಾರಿಗಳು, ಕನ್ನಡಪರ ಹೋರಾಟಗಾರರು,  ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 ತಾಲೂಕಾಡಳಿತದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ  ಬಹುತೇಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸದೆ ಇರುವುದು  ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರದಿಂದ ನಡೆಯುವ ಇಂತಹ ಉತ್ಸವಗಳಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು  ಸಮಾಜ ಸೇವಕ  ರಾಮನಗೌಡ ಪಾಟೀಲ  ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ಆಗ್ರಹಿಸಿದರು.