Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬುಡಾ ಸಭೆಗೆ ಎಲ್ಲ ಸದಸ್ಯರು ಹಾಜರಾಗಿ: ವಿವಿಧ ಪಕ್ಷಗಳ ಪ್ರತಿಭಟನೆ

localview news

ಬೆಳಗಾವಿ :ನಗರಾಭಿವೃದ್ಧಿ ಪ್ರಾಧಿಕಾರ ( ಬುಡಾ) ಅಕ್ಟೋಬರ್ 25ರಂದು ಕರೆಯಲಾದ ಸಭೆಯಲ್ಲಿ ಸಂಬಂಧಿಸಿದ ಎಲ್ಲ ಶಾಸಕರು, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಾಗಿ ನನೆಗುದಿಗೆ ಬಿದ್ದ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಪಕ್ಷಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 15 ವರ್ಷಗಳಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ಹೊಸ ಬಡಾವಣೆಯಾಗಿಲ್ಲ. ಬುಡಾ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಕಾಮಗಾರಿಗಳು ಸಾಕಷ್ಟಿವೆ. ಸಕಾಲಕ್ಕೆ ಅದನ್ನು ಅನುಷ್ಠಾನಗೊಳಿಸಬೇಕಿದ್ದ ಸ್ಥಳೀಯ ಶಾಸಕ, ಸದಸ್ಯರು ಹಾಗೂ ಅಧಿಕಾರಿಗಳು ಎರಡೂ ಸಭೆಗೆ ಹಾಜರಾಗದೆ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳುವಂತಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಕಣಬರಗಿಯಲ್ಲಿ ಬುಡಾದ ಸ್ಕೀಮ್ ನಂಬರ್ 61 ಹೊಸ ಬಡಾವಣೆ ಮಾಡಲು ಸರಕಾರದಿಂದ ಅನುಮೋದನೆ ಸಿಕ್ಕರೂ ಸ್ಥಳೀಯ ಶಾಸಕರು, ಬುಡಾ ಸದಸ್ಯ ಹಾಗೂ ಅಧಿಕಾರಿಗಳು ಸಭೆಗೆ ಹಾಜರಾಗದೆ ಬುಡಾ ವ್ಯಾಪ್ತಿಯ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಅಲ್ಲದೆ ನಗರದಲ್ಲಿ ಹಾಕಿ ಕ್ರೀಡಾ ಪಟುಗಳಿಗಾಗಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕಿದೆ. ಬರುವ ಅಕ್ಟೋಬರ್ 25ರ ಬುಡಾ ಸಭೆಗೆ ಎಲ್ಲ ಜನಪ್ರತಿನಿಧಿಗಳು, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಾಗಿ ಜಿಲ್ಲೆಯ ಜನರ ಹಿತ ಕಾಪಾಡಬೇಕು. ಈಗಾಗಲೇ ಹೊಸ ಬಡಾವಣೆಗೆ ಸಾರ್ವಜನಿಕರು ಲಕ್ಷಾಂತರ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಹಿತ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿದ್ರಾಯಿ ಸಿಗಿಹಳ್ಳಿ, ರಾಜಕುಮಾರ ಟೋಪಣ್ಣವರ, ಸುಜೀತ ಮುಳಗುಂದ, ಮುಕ್ತಾರ ಇನಾಮದಾರ, ಎನ್.ಆರ್.ಲಾತೂರ, ಆರ್.ಪಿ‌.ಪಾಟೀಲ, ವಿಜಯ ಪಾಟೀಲ, ಮಲ್ಲೇಶ ಚೌಗುಲೆ, ಸರಳಾ ಸಾತ್ಪುತೆ, ಸಾಗರ ಚೌಗುಲೆ, ಜಯಶ್ರೀ ಸೂರ್ಯವಂಶಿ ಹಾಕಿ ಕ್ರೀಡಾಪಟುಗಳು ಸೇರಿದಂತೆ ಇನ್ನಿತರರು.