Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಿತ್ತೂರು ಉತ್ಸವ-2021 ಸಿದ್ಧತೆ ಪೂರ್ಣ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

localview news

ಬೆಳಗಾವಿ:ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ವೀರರಾಣಿ‌ ಚನ್ನಮ್ಮನ ಕಿತ್ತೂರು ಉತ್ಸವದ ಬೆಳ್ಳಿಹಬ್ಬಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಡೀ ಕಿತ್ತೂರು ಪಟ್ಟಣದಲ್ಲಿ ಹಬ್ಬದ ಸಡಗರ-ಸಂಭ್ರಮ ಕಂಡುಬರುತ್ತಿದೆ.

ಅ.23 ಹಾಗೂ 24 ರಂದು ಎರಡು ದಿನಗಳ ಕಾಲ ಕೋಟೆ ಆವರಣದಲ್ಲಿ ಉತ್ಸವ ನಡೆಯಲಿದೆ. ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವವನ್ನು ಉದ್ಘಾಟಿಸಲಿರುವುದರಿಂದ ಸಂಭ್ರಮ ಇಮ್ಮಡಿಗೊಂಡಿದೆ.ಸಮಾರಂಭದ ಪ್ರಧಾನ ವೇದಿಕೆ‌ ಹಾಗೂ ಕೋಟೆ ಆವರಣವು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಸಿದ್ಧತೆ ಪರಿಶೀಲಿಸಿದ‌ ಜಿಲ್ಲಾಧಿಕಾರಿ:
ಕಿತ್ತೂರು ಉತ್ಸವದ ಮುಖ್ಯ ವೇದಿಕೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪರಿಶೀಲಿಸಿದರು.

ಜನರಿಗೆ ಸೂಕ್ತ ಆಸನಗಳ ವ್ಯವಸ್ಥೆ, ಕುಡಿಯುವ ನೀರು ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅದೇ ರೀತಿ ಬೇರೆ ಬೇರೆ ಊರುಗಳಿಂದ ಆಗಮಿಸುವ ಕಲಾವಿದರಿಗೆ ಊಟ ಹಾಗೂ ಸಾರಿಗೆ ಸೌಕರ್ಯ ಒದಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.ಹೆಚ್ಚಿನ ಜನರು ಸೇರುವ ನಿರೀಕ್ಷೆ ಇರುವುದರಿಂದ ಅಗತ್ಯ ಆಸನ ವ್ಯವಸ್ಥೆ ಮಾಡುವಂತೆ ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ತಿಳಿಸಿದರು.

ಮಾಧ್ಯಮ ಕೇಂದ್ರ ಉದ್ಘಾಟನೆ:
ಉತ್ಸವದ ಮುಖ್ಯ ವೇದಿಕೆ ಹಿಂಭಾಗದಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಶಾಸಕ ಮಹಾಂತೇಶ ದೊಡ್ಡಗೌಡ್ರ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ಈ ಬಾರಿ ಕಲ್ಮಠದ ಆವರಣದಲ್ಲಿರುವ ಶ್ರೀ ಗುರುಸಿದ್ಧೇಶ್ವರ ಪ್ರೌಢಶಾಲಾ ಮೈದಾನದಲ್ಲಿ ವಸ್ತುಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸರಕಾರದ ವಿವಿಧ ಇಲಾಖೆಗಳು, ಮಹಿಳಾ ಸ್ವ-ಸಹಾಯ ಸಂಘಗಳು ಸೇರಿದಂತೆ ಅನೇಕ ಸಂಸ್ಥೆಗಳು ಮಳಿಗೆಗಳನ್ನು ಸ್ಥಾಪಿಸಿವೆ.ಸಮಾರಂಭದ ಮುಖ್ಯ ವೇದಿಕೆ, ಮಾಧ್ಯಮ ಕೇಂದ್ರ, ವಸ್ತುಪ್ರದರ್ಶನ ಮಳಿಗೆ ಮತ್ತಿತರ ವ್ಯವಸ್ಥೆಯನ್ನು ಪರಿಶೀಲಿಸಿದರು.

ಭದ್ರತಾ ವ್ಯವಸ್ಥೆ ಪರಿಶೀಲನೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು, ಭದ್ರತಾ ವ್ಯವಸ್ಥೆ ಕುರಿತು ‌ಪರಿಶೀಲಿಸಿದರು.ಮುಖ್ಯ ವೇದಿಕೆ, ಪಾರ್ಕಿಂಗ್, ಮಾಧ್ಯಮ ಗ್ಯಾಲರಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು, ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಯಾವುದೇ ರೀತಿಯ ಅನಾನುಕೂಲಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ತಹಶಿಲ್ದಾರ ಸೋಮಲಿಂಗಪ್ಪ ಹಾಲಗಿ ಮತ್ತಿತರ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.