Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚೆನ್ನಮ್ಮನ ನಾಡಿನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಹೆಮ್ಮೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

localview news

ಬೆಳಗಾವಿ:ಕಿತ್ತೂರು ಚೆನ್ನಮ್ಮನಲ್ಲಿರುವ ದೇಶ ಪ್ರೇಮವನ್ನು ಶಾಲೆಯ ಪಾಠದಲ್ಲಿ ಕೇಳಿದ‌ ನಾವು ದೇಶಾಭಿಮಾನವನ್ನು ಬೆಳಿಸಿಕೊಂಡೆವು. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಮಹಿಳೆ ಕಿತ್ತೂರು ಚೆನ್ನಮ್ಮನ ನಾಡಿನಲ್ಲಿ ಹುಟ್ಟಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ . ಹಿರೇಮಠ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ-2021 ಅಂಗವಾಗಿ ಶನಿವಾರ ಕಾಕತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚೆನ್ನಮ್ಮ ಮೂರ್ತಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚಿಕ್ಕಂದಿನಿಂದಲೂ ಶಾಲೆಗಳಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಂಡು ರಾಷ್ಟ್ರಾಭಿಮಾನ ಬೆಳೆಸಿಕೊಂಡಿದ್ದೇವೆ ಎಂದು ಹೇಳಿದರು.

ಕೊರೋನ ಕಾರಣದಿಂದ ಕಳೆದ ವರ್ಷ ಕಿತ್ತೂರು ಚನ್ನಮ್ಮನ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಮಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕೊರೋನಾ ಮಹಾಮಾರಿ ಅತ್ಯಂತ ಕಡಿಮೆ ಆಗಿದೆ ಆದರೂ ಕೆಲ ದಿನ ಮುನ್ನೆಚ್ಚರಿಕೆ ಕ್ರಮ ಅಗತ್ಯ ಹಾಗೂ ನಮ್ಮ ಜಿಲ್ಲೆಯಲ್ಲಿ 80 ಪ್ರತಿಷತದಷ್ಟು ಕೋವಿಡ್ ಲಸಿಕೆಯನ್ನು ಈಗಾಗಲೇ ನೀಡಲಾಗಿದ್ದು, ಇನ್ನೂ ಯಾರು ಲಸಿಕೆ ಹಾಕಿಸಿಲ್ಲ ಅಂತವರಿಗೆ ಶೀಘ್ರ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.

ಅರಮನೆ ಸ್ಥಳದಲ್ಲಿ ಮ್ಯೂಸಿಯಂ ನಿರ್ಮಾಣ:
ಕಿತ್ತೂರಿನಲ್ಲಿ ಜಿಲ್ಲಾಡಳಿತ ವತಿಯಿಂದ ಕಿತ್ತೂರು ಚೆನ್ನಮ್ಮ ಸಂಸ್ಥಾನದ ಅರಮನೆಯ ಪ್ರತಿರೂಪ ಮರು ಸ್ಥಾಪಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಕಿತ್ತೂರು ಸಂಸ್ಥಾನದ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಸಾರ್ವಜನಿಕರು ವೀಕ್ಷಿಸಬಹುದಾದಂತಹ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಅಣ್ಣಾಸಾಬ್ ಜೊಲ್ಲೆ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನ ತವರೂರು ಕಾಕತಿಯನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಿದರೆ ಅದು ರಾಣಿ ಚೆನ್ನಮ್ಮನಿಗೆ ಸಲ್ಲಿಸುವ ಗೌರವವಾಗುತ್ತದೆ ಹಾಗೂ ಸ್ವಾತಂತ್ರ ಹೋರಾಟದಲ್ಲಿ ರಾಣಿ ಚೆನ್ನಮ್ಮನ ಕೊಡುಗೆ ಅಪಾರ ಎಂದು ಹೇಳಿದರು.ಪುರುಷ ಪ್ರಧಾನ ರಾಷ್ಟ್ರವಾದರೂ ಅಂದಿನ ಕಾಲದಲ್ಲಿ ಕಿತ್ತೂರು ಚೆನ್ನಮ್ಮ ವೀರವನಿತೆ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದು. ಇಂದಿನ ಯುವಕರಿಗೆ ಅವರ ದೇಶಪ್ರೇಮ ಸ್ಪೂರ್ತಿದಾಯಕವಾಗಬೇಕು ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮನನ್ನು ಕೇವಲ ಉತ್ಸವದಲ್ಲಿ ನೆನೆಯದೆ ಅವರು ನೀಡಿದ ಬಲಿದಾನವನ್ನು ಮತ್ತು ದೇಶ ಪ್ರೇಮವನ್ನು ಸದಾ ಸ್ಮರಿಸಬೇಕು.

ಕಾಕತಿಯಲ್ಲಿ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭ:
ಕಿತ್ತೂರು ಹಾಗೂ ಕಾಕತಿಯಲ್ಲಿ ಅಭಿವೃದ್ಧಿ ಕಾಮಗಾರಿ ಆಗಬೇಕಾಗಿದೆ. ಕಿತ್ತೂರಿನಲ್ಲಿ ಅಭಿವೃದ್ಧಿ ಕೆಲಸ ಈಗಾಗಲೇ ಆರಂಭವಾಗಿದ್ದು, ಕಾಕಾತಿಯಲ್ಲಿಯೂ ಕೂಡ ಅತಿ ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಅಣ್ಣಾಸಾಬ್ ಜೊಲ್ಲೆ ತಿಳಿಸಿದರು.

ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟ ರಾಣಿ ಚೆನ್ನಮ್ಮನ ಹುಟ್ಟೂರು ಎಂಬ ಫಲಕವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುವಂತೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದಗೌಡ ಸುಣಗಾರ ಮನವಿ ಮಾಡಿದರು.

ಸುಮಾರು 30 ವರ್ಷದಿಂದ ಗ್ರಾಮ ಪಂಚಾಯಿತಿ ವತಿಯಿಂದ ರೂ. 1 ಲಕ್ಷದಷ್ಟು ಹಣವನ್ನು ಕಿತ್ತೂರಿನ ಉತ್ಸವಕ್ಕೆ ಮೀಸಲಿಡಲಾಗುತ್ತಿತ್ತು, ಆದರೆ ಈಗಿನ ಸಂದರ್ಭದಲ್ಲಿ 20 ಲಕ್ಷದವರೆಗೆ ಮೊತ್ತವನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶಿವಪೂಜಾಮಠದ ಕಾಕತಿಯ ಶ್ರೀ ರಾಚಯ್ಯ ಮಹಾಸ್ವಾಮಿಗಳು ಮಾತನಾಡಿ ವೀರ ಮಾತೆ ಚೆನ್ನಮ್ಮನ ಉತ್ಸವದ ದ್ವಾರ ಬಾಗಿಲು ನೋಡಿದರೆ ರಾಷ್ಟ್ರಾಭಿಮಾನ ಬೆಳೆಸುವಂತೆ ಮಾಡಬೇಕು ಮತ್ತು ಮಹಾತ್ಮ ಮತ್ತು ವೀರಪುರುಷರು, ವೀರ ಮಾತೆಯ ಜಯಂತಿಯ ದಿನವನ್ನು ಆಚರಿಸುತ್ತಾ ಅವರ ತ್ಯಾಗ ಬಲಿದಾನ ನೆನೆಯಬೇಕು ಎಂದು ರಾಚಯ್ಯ ಮಹಾಸ್ವಾಮಿ ಕರೆ ನೀಡಿದರು.

ಕಾಕತಿ ಉತ್ಸವಕ್ಕೆ ಚಾಲನೆ:
ರಾಣಿ ಚನ್ನಮ್ಮನ ತವರೂರು ಕಾಕತಿಯಲ್ಲಿ ಬೆಳಿಗ್ಗೆ 8:30 ಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಕಾಕತಿ ಉತ್ಸವಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ್ ಸಿ.ಇ.ಓ ದರ್ಶನ್ ಹೆಚ್.ವಿ, ಪೋಲಿಸ್ ಆಯುಕ್ತರಾದ ಡಾ .ಕೆ.ತ್ಯಾಗರಾಜನ್, ಕಾಕತಿಯ ಉದಯ ಮಹಾಸ್ವಾಮಿಗಳು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಎಸ್.ಎಮ್ ಗಂಗಾಧರಯ್ಯ, ಕಾಕತಿಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಡಿ.ಪಾಟೀಲ, ಕಾಕತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸುನೀಲ ಸುಣಗಾರ, ಮಾಜಿ ಸಚಿವರಾದ ಶಶಿಕಾಂತ ನಾಯಕ ಸೇರಿದಂತೆ ಕಾಕತಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.ಬೆಳಗಾವಿ ಉಪ ವಿಭಾಗಾಧಿಕಾರಿರವೀಂದ್ರ ಕರಲಿಂಗಣ್ಣವರ ಸ್ವಾಗತಿಸಿದರು, ರಮೇಶ.ವಿ. ಗೋಣಿ ನಿರೂಪಿಸಿದರು.