Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

localview news

ಸಿಂದಗಿ:ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ. ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಭಾನುವಾರ ಸಿಂದಗಿ ಮತಕ್ಷೇತ್ರದ ಕೊಕಟನೂರು ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಉಣ್ಣೆ ಕಂಬಳಿಯನ್ನು ಯಾರು ಬೇಕಾದರೂ ಹಾಕಿಕೊಂಡರೆ ಯೋಗ್ಯತೆ ಬರುವುದಿಲ್ಲ. ಹಾಲುಮತದ ಸಮಾಜಕ್ಕೆ ಸರಿಯಾದ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಪ್ರಾಪ್ತವಾಗುತ್ತದೆ. ದಾಸಶ್ರೇಷ್ಠರಾದ ಕನಕದಾಸರ ಜನ್ಮಸ್ಥಳ ಬಾಡ ಹಾಗೂ ಅವರ ಕರ್ಮಭೂಮಿ ಕಾಗಿನೆಲೆಯನ್ನು ಬಿ.ಜೆ.ಪಿ.ಅಧಿಕಾರದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಉ ಕ ಅಭಿವೃದ್ಧಿಗೆ ಸರಕಾರ ಬದ್ಧ
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಈ ಭಾಗದಲ್ಲಿ ನೀರಾವರಿ, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಹಾಗೂ ವಸತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರವು ಈ ವರ್ಷ ಹೆಚ್ಚುವರಿಯಾಗಿ 5ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಿದ್ದು, ಸಿಂದಗಿ ಕ್ಷೇತ್ರಕ್ಕೆ 5ಸಾವಿರ ಮನೆ ನೀಡಲಾಗುತ್ತದೆ. ಅಮೃತ ಯೋಜನೆಯಡಿಯಲ್ಲಿ 2 ಸಾವಿರ ಮನೆ ನಿರ್ಮಿಸಲಾಗುವುದು ಲಾಗುವುದು. ಹೀಗೆ ಒಟ್ಟು 1ವರ್ಷದಲ್ಲಿ ಸಿಂದಗಿ ಕ್ಷೇತ್ರದಲ್ಲಿ 7ಸಾವಿರ ಮನೆ ನಿರ್ಮಿಣ ಮಾಡಲಾಗುವುದು ಎಂದರು.

ಚಿಮ್ಮಲಗಿ ಏತ ನೀರಾವರಿ ಅಡಿ ಬರುವ ಕೋರವಾರ್ ಉಪಕಾಲುವೆ ಟೆಂಡರ್ ಈಗಾಗಲೇ ಪೂರ್ಣಗೊಂಡಿದೆ. ಇದರಿಂದ ಎಂಬತ್ತು ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿ ಸಲಾಗುತ್ತದೆ. ಇಂಡಿ ಮತ್ತು ಗುತ್ತಿ ಬಸವಣ್ಣ ಯೋಜನೆಗಳ ಪುನಃಶ್ಚೇತನ ಮಾಡಲಾಗುತ್ತಿದೆ ಎಂದು ಕೇಳಿದರು.

ಎಲ್ಲಿದೆ ಸಾಮಾಜಿಕ ನ್ಯಾಯ
ಸಾಮಾಜಿಕ ನ್ಯಾಯದ ಹರಿಕಾರರಾದ ಕಾಂಗ್ರೆಸ್ ಪಕ್ಷ ಯಾರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ಸಂವಿಧಾನ ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಗೆ ದೇಶ ಸದಾ ಋಣಿಯಾಗಿರಬೇಕು. ಆದರೆ ಅವರ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಚುನಾವಣೆಯಲ್ಲಿ ಸೋಲಿಸಲಾಯಿತು. ಹಾಲುಮತ ಸಮಾಜ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಸಣ್ಣ ಸಣ್ಣ ಕಸುಬುಗಳನ್ನು ಮಾಡುವವರು ಸಹ ಅದೇ ಸ್ಥಿತಿಯಲ್ಲಿದ್ದಾರೆ. ಅಲ್ಪಸಂಖ್ಯಾತರಿಗೆ ಈ ಹಿಂದಿನ ಸರ್ಕಾರಗಳು ಕೇವಲ ಚುನಾವಣೆಗೆ ಬಳಸಿಕೊಂಡರು ಅವರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ ಎಂದು ತಿಳಿಸಿದ ಅವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮಕ್ಕಳು ಮುಂದಕ್ಕೆ ಬಂದು ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಯಿಂದ ಮಾತ್ರ ಸಾಧ್ಯ. ಕಾರಣ ಮತದಾರರು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಗಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಗೋವಿಂದ್ ಕಾರಜೋಳ, ಸಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.