Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಜಿಲ್ಲೆ ಒಂದು ಐತಿಹಾಸಿಕ ನಗರ್ : ಗೋವಿಂದ ಕಾರಜೋಳ

localview news

ಬೆಳಗಾವಿ ಜಿಲ್ಲೆಯ ಮಹಾಜನತೆಗೆ 66ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸುವ ಮೂಲಕ ರಾಜ್ಯೋತ್ಸವಕ್ಕೆ ಗೋವಿಂದ ಕಾರಜೋಳ ಚಾಲನೆ ನೀಡಿದರು.

ರಾಜ್ಯೋತ್ಸವದ ಇಂದಿನ ಸಂಭ್ರಮದಲ್ಲಿ ಭಾಗಿಯಾಗಿರುವ ನಾಡಿನ ಹಿರಿಯ ಜೀವಿಗಳಿಗೆ, ಏಕೀಕರಣಕ್ಕೆ ದುಡಿದ ಮಹನೀಯರಿಗೆ, ವಿದ್ವಾಂಸರು, ಕವಿ-ಸಾಹಿತಿಗಳಿಗೆ, ಚಿಂತಕರು, ಜಿಲ್ಲೆಯ ಶಾಸಕ ಮಿತ್ರರು, ಸಂಸದರು, ಹಾಗೂ ಎಲ್ಲ ಜನಪ್ರತಿನಿಧಿಗಳು, ನಾಗರಿಕ ಬಂಧುಗಳು, ಸಹೋದರ-ಸಹೋದರಿಯರು ಮತ್ತು ಮಾಧ್ಯಮದ ಸ್ನೇಹಿತರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಬೆಳಗಾವಿ ಜಿಲ್ಲೆ ಅಥಣಿಯ ಸಮಾಜಸೇವಕ ಶ್ರೀ ಬಿ.ಎಲ್.ಪಾಟೀಲ ಅವರು ಸೇರಿದಂತೆ ಎಲ್ಲರಿಗೂ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಇತಿಹಾಸದಲ್ಲಿ ವೇಣುಗ್ರಾಮ ವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿ ಸ್ಥಳೀಯವಾಗಿ ಲಭ್ಯವಿರುವ ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ.

6ನೇ ಶತಮಾನದಿಂದ ಕ್ರಿ.ಶ 760ರ ವರೆಗೂ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ 875ರ ಅವಧಿಯಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು.

ದೆಹಲಿಯ ಸುಲ್ತಾನರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿ, ಕ್ರಿ.ಶ 1347ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿದ್ದ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ. ಚಾರಿತ್ರಿಕವಾಗಿ ಪಾರತಂತ್ರ್ಯವನ್ನು ವಿರೋಧಿಸಿ ಬ್ರಿಟೀಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ ಎಂಬುದು ಸರ್ವವಿದಿತ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿವೇಶನವು 1924ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ನಡೆದಿತ್ತು ಎಂಬುದು ಬೆಳಗಾವಿಯ ಹಿರಿಮೆ.

ಅದೇ ರೀತಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು, ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರು. 1950ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ 1956ರ ನವೆಂಬರ್ 1 ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.

ಚಂಪಾಬಾಯಿ ಭೋಗಲೆ, ಅಕ್ಕನ ಬಳಗದ ಬಸಲಿಂಗಮ್ಮ ಬಾಳೆಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಮೊದಲಾದ ಮಹಿಳೆಯರೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿರುವುದು ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ 65 ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ 66ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ ಎಂದರು.