Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸುವ್ಯವಸ್ಥಿತವಾದ ಕನ್ನಡ ಭವನ ಸ್ಥಾಪನೆಯ ಭರವಸೆ : ಶಾಸಕ ಕುಮಠಳ್ಳಿ

localview news

ಅಥಣಿ: ಕನ್ನಡಪರ ಹೋರಾಟಗಾರರು, ಸಾಹಿತಿಗಳು, ರಂಗಭೂಮಿ ಕಲಾವಿದರು, ರೈತರು ಮತ್ತು ಅನೇಕ ಸಂಘ ಸಂಸ್ಥೆಗಳು ನಡೆಸುವ ಕನ್ನಡ ಚಿಂತನೆ,ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಥಣಿ ಪಟ್ಟಣದಲ್ಲಿ ಸುವ್ಯವಸ್ಥಿತವಾದ ಕನ್ನಡ ಭವನ ಸ್ಥಾಪನೆ ಮಾಡಲಾಗುವದು ಎಂದು ಶಾಸಕ ಹಾಗೂ ರಾಜ್ಯ ಕೊಳಗೇರಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.

ಅವರು ಸೋಮವಾರ ಇಲ್ಲಿನ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ಮತ್ತು ಸಹಾಯ ಪೌಂಡೇಶನ್ ಸಹೋಗದಲ್ಲಿ 66ನೇ ಕನ್ನಡ ರಾಜ್ಯೋತ್ಸವ ನಿಮಿತ್ಯ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಮುಕ್ತ ಆನಲೈನ್ ಭಾಷಣ ಸ್ಫರ್ಧೆಯ ಬಹುಮಾನ ವಿತರಣೆ ಹಾಗೂ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2021 ಪ್ರಧಾನ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದರು.

ಕನ್ನಡ ನಮ್ಮ ಬದುಕಿನ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಾಭಿಮಾನಿದಿಂದ ಕೆಲಸ ಮಾಡುವದು ಅಗತ್ಯವಿದೆ. ಕನ್ನಡಪರ ಸಂಘಟನೆಗಳು ನಮ್ಮ ಅಥಣಿಯ ಗಡಿಭಾಗದಲ್ಲಿ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಬಲಪಡಿಸಬೇಕು. ಕನ್ನಡಪರ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಉತ್ತಮ ಕಾರ್ಯವಾಗಿದೆ. ಅಥಣಿ ಮತಕ್ಷೇತ್ರದ ಅಭಿವೃದ್ದಿಯ ಜೊತೆಗೆ ಅಥಣಿ ಪಟ್ಟಣದಲ್ಲಿ ಜೋಡಿ ಕೆರೆಗಳ ಅಭಿವೃದ್ದಿ ಜೊತೆಗೆ ಕನ್ನಡಪರ ಇಂತಹ ವಿವಿಧ ಕಾರ್ಯಕ್ರಮಗಳಿಗೆ ಅಗತ್ಯವಿರುವ ಕನ್ನಡ ಭವನಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಸುಂದರವಾದ ಕನ್ನಡ ಭವನ ಸ್ಥಾಪಿಸಲಾಗುವದು ಎಂದು ಭರವಸೆ ನೀಡಿದರು.

ಸಾನಿಧ್ಯ ವಹಿಸಿದ್ದ ಕಾಡಯ್ಯಾ ಸ್ವಾಮೀಜಿ ಮಾತನಾಡಿ ಕನ್ನಡ ನಾಡಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಮ್ಮ ಭಾಷೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಕನ್ನಡಪರ ಸಂಘಟನೆಗಳು ಗಡಿಭಾಗದಲ್ಲಿ ಕನ್ನಡಪರ ಜಾಗ್ರತಿ ಕಾರ್ಯಕ್ರಮ ಮಾಡಬೇಕು. ಕಲಾವಿದರನ್ನು, ಕನ್ನಡ ಸೇವಕರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಕೂಡಾ ಕನ್ನಡ ಕೆಲಸವಾಗಿದೆ.ಅಂತಹ ಕಾರ್ಯ ಇಂದಿನ ಕಾರ್ಯಕ್ರಮದಲ್ಲಿ ನಡೆದಿರುವದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಕನ್ನಡ ನಾಡಿನ ಪಂರಂಪರೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಿಗರು ಕನ್ನಡದ ಹಬ್ಬ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಎಇಎಸ್ ಪುಂಡರು ವಿನಾಕಾರಣ ಗಡಿವಿವಾದ ಮಾಡುತ್ತಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕಿಡಿಗೇಡಿಗಳಿಗೆ ಸರಕಾರ ಕಡಿವಾಣ ಹಾಕಬೇಕು.

ಕರವೇ ಸಂಘಟನೆ ಕನ್ನಡಿಗರಿಗೆ ಅನ್ಯಾಯವಾದಾಗ ಹೋರಾಟ ಮಾಡುದಲ್ಲದೇ ಅನೇಕ ಕನ್ನಡಪರ ಕಾರ್ಯಗಳನ್ನು ಮಾಡುತ್ತಿದೆ. ರಾಜ್ಯೋತ್ಸವದ ಅಂಗವಾಗಿ ನಾವು ನಡೆಸಿದ ಆನಲೈನ್ ಭಾಷಣ ಸ್ಫರ್ಧೆಗೆ ಉತ್ತಮ ಸ್ಪಂದನೆ ಬಂದಿದೆ. 84 ಜನ ಭಾಗವಹಿಸಿದವರಲ್ಲಿ 10 ಜನರಿಗೆ ಬಹುಮಾನ ನೀಡಲಾಗಿದೆ. ಮೊದಲ ಹಂತವಾಗಿ ಕನ್ನಡಪರ ಸೇವೆಯಲ್ಲಿ ತೊಡಗಿದ 9 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಮುಂದಿನ ದಿನಗಳಲ್ಲಿ ಕರವೇ ಸಂಘಟನೆಯಿಂದ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುವದು ಎಂದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಕರವೇ ರಾಜ್ಯ ಕಾರ್ಯದರ್ಶಿ ರವಿ ಪೂಜಾರಿ ಮಾತನಾಡಿ ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಬೇಕಾದರೆ ಕನ್ನಡಪರ ಹೋರಾಟಗಾರರ ಪಾತ್ರ ಬಹಳ ಮುಖ್ಯವಾಗಿದೆ.

ಸರಕಾರ ಕೂಡಾ ಗಡಿಭಾಗದಲ್ಲಿ ಕಾಟಾಚಾರದ ಕಾರ್ಯಕ್ರಮಗಳನ್ನು ಮಾಡದೇ ಅರ್ಥಪೂರ್ಣವಾಗಿ ಅನುಷ್ಠಾನ ಮಾಡಬೇಕು. ರಾಜ್ಯೋತ್ಸವ ಅದ್ದೂರಿ ಮಾಡುವ ವಿಚಾರವನ್ನು ಈ ಬಾರಿ ಕೈಬಿಟ್ಟು  ಕರವೇಯಿಂದ ಸರಳ ರೀತಿಯಲ್ಲಿ ಸರಳವಾಗಿ ಆಚರಣೆ ಮಾಡಿದರೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಈ ವೇಳೆ ಸಮಾಜ ಸೇವಕರಾದ ರಾವಸಾಬ ಐಹೊಳೆ, ಗಿರೀಶ ಬುಟಾಳಿ ಮಾತನಾಡಿದರು. ನಾಟಕಕಾರ ಎ.ಎಂ ಖೋಬ್ರಿ, ಸೈಕ್ಲಿಂಗಪಟು ಪೂಜಾ ಮಠಪತಿ, ಸಮಾಜ ಸೇವಕ ಧರೆಪ್ಪ ಠಕ್ಕಣ್ಣವರ, ಶಿಕ್ಷಕ ಅಣ್ಣಪ್ಪ ಹೈಭತ್ತಿ, ಕಲಾವಿದ ಗುಂಡುರಾವ್ ಕೋರೆ, ಸಮಾಜ ಸೇವಕ ಅಪ್ಪಾಸಾಬ ನಾಯಿಕ, ಹೋರಾಟಗಾರ ಪ್ರಶಾಂತ ತೊಡಕರ, ಬಾಲನಟ ಆಕಾಶ ಭಜಂತ್ರಿ, ವೈಧ್ಯಕೀಯ ಸೇವೆಯಲ್ಲಿ ಲಕ್ಷ್ಮೀಬಾಯಿ ಚಿಮ್ಮಡ ಅವರಿಗೆ 2021 ರ ಸಾಲಿನ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಭಾಷಣ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ  ಸಮಾಜ ಸೇವಕ ಆನಂದ ಟೋಣಪಿ, ಶಿಕ್ಷಣ ತಜ್ಞ ಸದಾಶಿವ ಚಿಕ್ಕಟ್ಟಿ, ಸಹಾಯ ಪೌಂಡೇಶನ ಕಾರ್ಯದರ್ಶಿ ಸಂತೋಷ ಬಡಕಂಬಿ, ಜಗನ್ನಾಥ ಬಾಮನೆ, ವಿಜಯ ಹುದ್ದಾರ, ಸಿದ್ದು ಹಂಡಗಿ, ವಿನಾಯಕ, ಕುಮಾರ ಬಡಿಗೇರ, ವಿನಯ ಪಾಟೀಲ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.