ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಸತೀಶ ಜಾರಕಿಹೊಳಿ ಅವರು ಇಂದು ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮುಚ್ಚಂಡಿ ಗ್ರಾಮದ ಸರ್ಕಾರಿ ಕನ್ನಡ, ಮರಾಠಿ ಶಾಲೆಗೆ 90 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಹಾಗೂ ಗ್ರಾಮದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಬದಿ ಫುಟ್ ಪಾಥ್ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಸತೀಶ ಭೂಮಿಪೂಜೆ ನೆರವೇರಿಸಿದರು.
ನಂತರ ಗ್ರಾಮದ ನಾಯಕ್ ಸ್ಟೂಡೆಂಟ್ ಫೆಡರೇಶನ್ ನ ಸಿದ್ದಾರೂಢ ಕನ್ನಡ ಪ್ರೌಢಶಾಲೆಯಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಸತೀಶ ಭೂಮಿಪೂಜೆ ನೆರವೇರಿಸಿದರು.
ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಮೈದಾನದಲ್ಲಿ ಚಿಕ್ಕೋಡಿ, ಬೆಳಗಾವಿ ಶೈಕ್ಷಣಿಕ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಮಾವೇಶ ಆಯೋಜಿಸಿ ಹಾಗೂ ಅಂತರಾಜ್ಯ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿ" ಎಂದು ಶಾಲೆಯ ಶಿಕ್ಷಕರು ಸತೀಶ ಜಾರಕಿಹೊಳಿಯವರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸತೀಶ, ಶೀಘ್ರವೇ ಇದಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ಟನವರ್, ಶಾಲೆಯ ಪ್ರಧಾನ ಶಿಕ್ಷಕರು, ಶಿಕ್ಷಕರು ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ವಿವಿಧ ಕಾಮಗಾರಿಗೆ ಚಾಲನೆ:
ಅಷ್ಟೆ ಹಾಗೂ ಚಂದಗಡ ಗ್ರಾಮಗಳಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಪರಿಮಿತಿ ಚರಂಡಿ (500 ಮೀ.) ನಿರ್ಮಾಣ, ಅಷ್ಟೆ ಗ್ರಾಮದಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ಕನ್ನಡ ಶಾಲೆ ಕೊಠಡಿ ನಿರ್ಮಾಣ ಹಾಗೂ 95 ಲಕ್ಷ ರೂ. ವೆಚ್ಚದಲ್ಲಿ ಹುದಲಿ ಬೈ ಪಾಸ್ 2 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಚಂದಗಡ ಹಾಗೂ ಮುಚ್ಚಂಡಿ ಗ್ರಾಮಗಳ ಪ್ರೌಢಶಾಲೆಯಲ್ಲಿ ರನ್ನಿಂಗ ಟ್ರ್ಯಾಕ್ ನಿರ್ಮಾಣ ಹಾಗೂ ಮುಚ್ಚಂಡಿ ಕನ್ನಡ, ಮರಾಠಿ ಶಾಲೆಯಲ್ಲಿ ಪುಟ್ ಪಾಥ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಇ ಸಂಜೀವಕುಮಾರ ಹುಲಕಾಯಿ, ಎಇಇ ಸುಭಾಷ ನಾಯಿಕ, ಎಇ ಮುಕುಂದ ವಾಳವೇಕರ್, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.