Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಡಿಸೆಂಬರ್ ಎರಡನೇ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ: ಸಭಾಪತಿ ಹೊರಟ್ಟಿ

localview news

ಬೆಳಗಾವಿ:ಡಿಸೆಂಬರ್ ಎರಡನೇ ವಾರದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

ಸೋಮವಾರ ಸುವರ್ಣ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ವಿಧಾನಮಂಡಳ ಚಳಿಗಾಲದ ಅಧಿವೇಶನ 2018 ರ ನಂತರ ಬೆಳಗಾವಿಯಲ್ಲಿ ನಡೆದಿರಲಿಲ್ಲ. ಈ ಬಾರಿ ವಿಧಾನಮಂಡಳದ ಕಲಾಪಗಳ ನೇರಪ್ರಸಾರ ವ್ಯವಸ್ಥೆ ಮಾಡಲಾಗುತ್ತಿದೆ.ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪೂರ್ವಸಿದ್ಧತೆ ಸಭೆ ನಡೆಸಲಾಯಿತು ಎಂದರು.

ಇ-ಗವರ್ನನ್ಸ್, ಲೋಕೋಪಯೋಗಿ, ವಾರ್ತಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಬಾರಿ ಅಧಿವೇಶನದ ಕಲಾಪವನ್ನು ನೇರಪ್ರಸಾರ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ನ.20 ರೊಳಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಧಿವೇಶನ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ ಮಾಹೆಯಲ್ಲಿ ಅಧಿವೇಶನ ನಡೆಯುವುದು ಖಚಿತವಾಗಿದೆ. ದಿನಾಂಕವನ್ನು ಸರಕಾರ ನಿರ್ಧರಿಸಲಿದೆ ಎಂದರು.

ಶಾಸಕರ ಭವನ ನಿರ್ಮಾಣ ಬಹುಜನರ ಬೇಡಿಕೆಯಾಗಿದೆ. ಇದನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದ ಅವರು, ಅಧಿವೇಶನದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಜಿಸಲಾಗುವುದು. ಶಾಸಕರ ಹಾಜರಾತಿ ಕಡ್ಡಾಯಗೊಳಿಸಲು ಅವಕಾಶಗಳಿರುವುದಿಲ್ಲ. ಆದರೆ ಬೆಳಗಾವಿ ಅಧಿವೇಶನದ ಕಲಾಪಗಳಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರಶ್ನೋತ್ತರ, ಶೂನ್ಯ ವೇಳೆ, ಗಮನಸೆಳೆಯುವ ಸೂಚನೆ ಸೇರಿದಂತೆ ತುರ್ತು ವಿಷಯಗಳ ಚರ್ಚೆಗೆ ನಿಯಮಾವಳಿ ಪ್ರಕಾರ ಅವಕಾಶವನ್ನು ಕಲ್ಪಿಸಲಾಗುವುದು.ಆಯಾ ದಿನದ ವಿಷಯಸೂಚಿಯ ಪ್ರಕಾರ ಕಲಾಪವನ್ನು ನಡೆಸಲಾಗುವುದು. ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ವಿಧಾನಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಸೇರಿದಂತೆ ಮೊದಲಾದವರು ಹಾಜರಿದ್ದರು.