Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಜೆಪಿ ಆಡಳಿತದಲ್ಲಿ ಒಂದೂ ಮನೆಯೂ ಆಗಿಲ್ಲ: ಸತೀಶ

localview news

ಬೈಲಹೊಂಗಲ : ಬಿಜೆಪಿ ಸರ್ಕಾರಕ್ಕೆ ಮೂರು ವರ್ಷದಲ್ಲಿ ಒಂದೇ ಒಂದು ಮನೆ ನಿರ್ಮಾಣ ಮಾಡಲಿಕ್ಕೆ ಆಗಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ, ಸಾವಿರಾರು ಮನೆಗಳನ್ನು ನೀಡಿದ್ದೇವೆಂದು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ವಿಧಾನಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೈಲಹೊಂಗಲ ಮತಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, " ಈಗಿರುವ ರಸ್ತೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಒಂದೇ ಒಂದು ಮನೆ, ರಸ್ತೆಯನ್ನು ಮಾಡಿಲ್ಲ" ಎಂದರು.

ಬಿಜೆಪಿಯವರು ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾರೆ. ದಿಲ್ಲಿಯ, ಅವರ ಬಾಸ್ ( ಪ್ರಧಾನಿ ಮೋದಿ) ಸುಳ್ಳು ಹೇಳಿದ ತಕ್ಷಣವೇ, ಇಲ್ಲಿನ ನಾಯಕರು, ಮುಖಂಡರು ಸಹ ಸುಳ್ಳುಗಳನ್ನು ಹೇಳಲಿಕ್ಕೆ ಪ್ರಾರಂಭ ಮಾಡುತ್ತಾರೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಡವರು ಪರಿಹಾರಕ್ಕಾಗಿ ಅಲೆದು ಸುಸ್ತಾಗಿದ್ದಾರೆಂದು" ಕಳವಳ ವ್ಯಕ್ತಪಡಿಸಿದರು.

ನಮ್ಮ ಕಡೆ ಗೆಲ್ಲುವಷ್ಟು ಮತದಾರರು ಇದ್ದಾರೆ : ಈಗಾಗಲೇ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಿಂದ ಗೊಂದಲ ಆಗಿದೆ. ನಮ್ಮ ಕಡೆ ಗೆಲ್ಲುವಷ್ಟು ಮತದಾರರು ಇದ್ದಾರೆ. ಆತಂಕ ಪಡುವ ಅಗತ್ಯವಿಲ್ಲವೆಂದರು.

"ಪಕ್ಷೇತರ ಅಭ್ಯರ್ಥಿಗಳು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ, ಗೆಲ್ಲುವ ತಂತ್ರ ಮಾಡುತ್ತಿದ್ದಾರೆ. ಆದ್ದರಿಂದ ಸದಸ್ಯರು ಹುಷಾರ್ ಆಗಿರಿ, ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯ್ತಿ ಬಾಗಿಲು ತೆಗೆಯಬೇಡಿ. ಇಲ್ಲದಿದ್ದರೆ ನಿಮ್ಮನ್ನು ಎತ್ತಿಕೊಂಡು ಹೋಗುತ್ತಾರೆ " ಎಂದು ಲೇವಡಿ ಮಾಡಿದರು.

" ಬಿಜೆಪಿಯಲ್ಲಿ ವ್ಯಕ್ತಿಗತ ಲಾಭಕ್ಕಾಗಿ ಚುನಾವಣೆ ಮಾಡುತ್ತಾರೆ. ಆದರೆ ನಾವು ಹಾಗಲ್ಲ, ಪಕ್ಷದ ಅಭ್ಯರ್ಥಿ ಗೆದ್ದರೆ ಪಕ್ಷಕ್ಕೆ ಶಕ್ತಿ ಬರಲಿದೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಗೆ ಮತ ನೀಡಿ ಆಶೀರ್ವಾದ ಮಾಡಿ, ನಿಮ್ಮ ಕೆಲಸ ಮಾಡಲು ಅವಕಾಶ ನೀಡಬೇಕು " ಎಂದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬೈಲಹೊಂಗಲ ಕ್ಷೇತ್ರ ಸಂಪೂರ್ಣ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಇಲ್ಲಿ ಕಾಂಗ್ರೆಸ್ ನ ಪ್ರಾಬಲ್ಯ ಹೆಚ್ಚಾಗಿದೆ. ಬೈಲಹೊಂಗಲ ನಾಡು ಕಾಂಗ್ರೆಸ್ ನ ಬೀಡಾಗಿದ್ದು, ಇಂದಿರಾ ಗಾಂಧಿಯವರ ಕಾಲದಿಂದಲೂ ಬೈಲಹೊಂಗಲದಲ್ಲಿ ಕಾಂಗ್ರೆಸ್ ಪಕ್ಷ ಆಳವಾಗಿ ನೆಲೆಯೂರಿದೆ, ಇಂತಹ ಪುಣ್ಯಭೂಮಿಯಲ್ಲಿ ವೀರವನಿತೆ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರಿನ ಬಾಳಪ್ಪ ಮೊದಲಾದ ಮಹನೀಯರನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಣದಲ್ಲಿರುವ ಕೆಲವರು ಸುಮ್ಮನೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಅದಕ್ಕೆಲ್ಲ ಮರುಳಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಚನ್ನರಾಜ ಹಟ್ಟಿಹೊಳಿಯವರನ್ನು ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಅಧ್ಯತೆಯ ಮತ ನೀಡಿ ಪ್ರಚಂಡ ಬಹುಮತಗಳಿಂದ ಆರಿಸಿ ತನ್ನಿರಿ ಎಂದು ವಿನಂತಿಸಿದರು.

ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಹೋದೆಡೆಯಲ್ಲೆಲ್ಲ ನಮಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ನನಗೆ ಕೆಲಸ ಮಾಡುವ ಹುಮ್ಮಸ್ಸಿದೆ. ವಿಕೇಂದ್ರೀಕರಣ ವ್ಯವಸ್ಥೆಯ ಕುರಿತು ಸಾಕಷ್ಟು ತಿಳಿದುಕೊಂಡಿದ್ದೇನೆ. ನಿಜವಾದ ಪ್ರತಿನಿಧಿಯಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೈಲಹೊಂಗಲದ ಎಲ್ಲ ಮುಖಂಡರು, ಕ್ಷೇತ್ರದ ಶಾಸಕರಾದ ಮಹಾಂತೇಶ ಕೌಜಲಗಿ, ವಿನಯ ನಾವಲಗಟ್ಟಿ, ಕಿರಣ ಸಾಧುನವರ, ಮಹಾಂತೇಶ ಮತ್ತಿಕೊಪ್ಪ, ಈರಣ್ಣ ಬೆಟಗೇರಿ, ಶಿವರುದ್ರ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಬಾಬು ಕುಡಸೊಮಣ್ಣವರ, ಬಸವರಾಜ ಜನ್ಮಟ್ಟಿ, ರಾಜಶೇಖರ ಮೂಗಿ, ಚಂದ್ರು ಕಡೆಮನಿ, ಈರಣ್ಣ ಸಂಪಗಾವಿ, ಜಗದೀಶ ತೋಟಗಿ, ಮಲ್ಲಪ್ಪ ಮುರಗೋಡ್, ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಮಹಿಳೆಯರು ಉಪಸ್ಥಿತರಿದ್ದರು.