Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಇಥೇನಾಲ್ ನೀತಿಗೆ ಕ್ರಮ: ಸಚಿವ ಶಂಕರ ಪಾಟೀಲ

localview news

ಬೆಳಗಾವಿ:ರಾಜ್ಯದಲ್ಲಿ ಇಥೇನಾಲ್ ಉತ್ಪಾದಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ನೀತಿ ರೂಪಿಸುವ ಕುರಿತಂತೆ ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಕೈಮಗ್ಗ ಮತ್ತು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭರವಸೆ ನೀಡಿದರು.

ವಿಧಾನ ಪರಿಷತ್ನಲ್ಲಿಂದು ಸದಸ್ಯರಾದ ಮಹಾಂತೇಶ ಕವಟಗಿಮಠ ಅವರ ಗಮನ ಸೆಳೆಯುವ ಪ್ರಶ್ನೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು ಇಥೇನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳಿಗೆ ಯಾವ ರೀತಿಯ ಪ್ರೋತ್ಸಾಹ ನೀಡಬೇಕು ಎಂಬುವುದನ್ನು ಚರ್ಚಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ ಎಂದರು.

ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಕಬ್ಬು ಬೆಳೆಯನ್ನು ಸೇರ್ಪಡೆಗೊಳಿಸಬೇಕು. ರೈತರ ವಿಮಾ ಕಂತುಗಳ ಶೇಕಡಾವಾರು ಪಾಲನಾ ಸರ್ಕಾರದ ವತಿಯಿಂದ ತುಂಬಲು ಕ್ರಮಕೈಗೊಳ್ಳಬೇಕೆಂಬ ಮನವಿಗೆ ಸ್ಪಂದಿಸಿದ ಸಚಿವರಾದ ಮುನೇನಕೊಪ್ಪ ಅವರು ಬೆಳೆ ವಿಮೆ ಪಾಲಿಸಿ ಕುರಿತಂತೆ ರೈತರಿಗೆ ಅನುಕೂಲಕರವಾದ ನೀತಿಯನ್ನು ಸರ್ಕಾರ ಪಾಲಿಸುತ್ತಾ ಬಂದಿದೆ. ಈಗಾಗಲೇ ಹೋಬಳಿ ಮಟ್ಟದಿಂದ ಗ್ರಾಮ ಮಟ್ಟಕ್ಕೆ ಇದೀಗ ಆ್ಯಪ್ ಮೂಲಕ ರೈತನೇ ತನ್ನ ಹೊಲದ ವಿಮೆ ಭರ್ತಿ ಅವಕಾಶ ಮಾಡಿಕೊಡಲಾಗಿದೆ. ಕಬ್ಬಿನ ಬೆಳೆಯನ್ನು ಫಸಲ ಬಿಮಾ ಯೋಜನೆಯಡಿ ಸೇರ್ಪಡೆ ಮಾಡುವ ಕುರಿತಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಿರಿಯ ಸದಸ್ಯರಾದ ಎಸ್.ಆರ್. ಪಾಟೀಲ ಅವರು ಕಬ್ಬು ಬೆಳೆಗಾರರು ತೂಕದ ವಂಚನೆಯಿಂದ ಮುಕ್ತಗೊಳಿಸಲು ಸರ್ಕಾರ ವತಿಯಿಂದಲೇ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಅತ್ಯಾಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ ಕುರಿತು ಸಲಹೆಗೆ ಮನ್ನಣೆ ನೀಡಿದ ಸಚಿವರು ಈ ಕುರಿತು ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಹಿರಿಯ ಸದಸ್ಯರಾದ ಸಿದ್ದು ಸವದಿ ಅವರು ಹಲವು ಕಾರ್ಖಾನೆಗಳು ಕಬ್ಬು ಪೂರೈಸಿದ ಬೆಳೆಗಾರರ ಬಾಕಿ ಹಣ ಪಾವತಿ ಮಾಡಿರುವುದಿಲ್ಲ. ತಕ್ಷಣ ಬಾಕಿ ಪಾವತಿಗೆ ಕ್ರಮ ವಹಿಸಬೇಕು. ಕೇಂದ್ರ ಸರ್ಕಾರ ಈಗಾಗಲೇ ಇಥೇನಾಲ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಕೆಲವು ರಾಜ್ಯಗಳು ಕೇಂದ್ರ ಸರ್ಕಾರದ ನೆರವಿನ ಜೊತೆಗೆ ಹಲವು ರಾಜ್ಯ ಸರ್ಕಾರಗಳು ಪ್ರತ್ಯೇಕ ನೀತಿ ರೂಪಿಸಿ ಪ್ರೋತ್ಸಾಹ ನೀಡುತ್ತಿವೆ. ಕರ್ನಾಟಕ ಸರ್ಕಾರವು ಪ್ರತ್ಯೇಕವಾದ ಎಥೇನಾಲ್ ಉತ್ಪಾದನಾ ಪ್ರೋತ್ಸಾಹ ನೀತಿ ರೂಪಿಸುವಂತೆ ಸಚಿವರ ಗಮನ ಸೆಳೆದರು.

ಸಚಿವರ ಮುನೇನಕೊಪ್ಪ ಅವರು ಮಾಹಿತಿ ನೀಡಿ ರಾಜ್ಯದಲ್ಲಿ 88 ಸಕ್ಕರೆ ಕಾರ್ಖಾನೆಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 65 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ. 2016-17 ಹಾಗೂ 2017-18ನೇ ಸಾಲಿನಲ್ಲಿ ಯಾವುದೇ ಬಾಕಿಯನ್ನು ಕಾರ್ಖಾನೆಗಳು ಉಳಿಸಿಕೊಂಡಿಲ್ಲ. 2018-19ನೇ ಸಾಲಿನಲ್ಲಿ 8.93 ಕೋಟಿ, 2019-20ನೇ ಸಾಲಿನಲ್ಲಿ 5.80 ಕೋಟಿ ಬಾಕಿ ಉಳಿಸಿಕೊಂಡಿವೆ. 2020-21ನೇ ಸಾಲಿನಲ್ಲಿ ಯಾವುದೇ ಬಾಕಿ ಇರುವುದಿಲ್ಲ. 2016-17 ರಿಂದ 2020-21ನೇ ಹಂಗಾಮುಗಳಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್.ಆರ್.ಪಿ. ದರಕ್ಕಿಂತ ಹೆಚ್ಚಿನ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಿವೆ ಎಂದು ಮಾಹಿತಿ ನೀಡಿದರು. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ವಸೂಲಾತಿ ಪ್ರಮಾಣಪತ್ರವನ್ನು ಹೊರಡಿಸಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.