Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪೂರ್ಣ ನಿಷೇಧ: ಸಚಿವ ಕೋಟಾ ಶ್ರೀನಿವಾಸ್

localview news

ಬೆಳಗಾವಿ:ರಾಜ್ಯದಲ್ಲಿ ಹಸ್ತಚಾಲಿತ ಮಲ ಹೋರುವ ಪದ್ಧತಿಯನ್ನು ಪೂರ್ಣವಾಗಿ ನಿಷೇಧಿಸಲಾಗುವುದು. ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ರಾಜ್ಯದಲ್ಲಿರುವ ಮ್ಯಾನ್ಯುವೆಲ್ ಸ್ಕ್ವಾವೆಂಜರ್ಗಳ ಬದುಕು ಹಸನ ಮಾಡಲು ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿದೆ. ಈ ಕುರಿತಂತೆ ಜನವರಿ 10ರೊಳಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರ ಅವರು ಸೋಮವಾರ ಮೇಲ್ಮನೆಗೆ ತಿಳಿಸಿದರು.

ಸದಸ್ಯ ಬಿ.ಕೆ. ಹರಿಪ್ರಸಾದ ಅವರು ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿ ಕುರಿತಂತೆ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಸರ್ಕಾರವು 2013ರಲ್ಲಿ ಮ್ಯಾನ್ಯುಯಲ್ ಸ್ಕ್ವಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಈ ಪದ್ಧತಿಯನ್ನು ಅನುಸರಿಸುವವ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಕಾನೂನಿನ ಅರಿವು ಮೂಡಿಸುವ ಮತ್ತು ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಂದು ಕ್ರಮಗಳ ಕುರಿತಂತೆ ತಿಳಿಸಿದರು. ರಾಜ್ಯ ಮಟ್ಟದಲ್ಲಿ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಸಫಾಯಿ ಕರ್ಮಚಾರಿಗಳ ಸಮುದಾಯದ ಪ್ರತಿನಿಧಿಗಳನ್ನು ಹಾಗೂ ಅನುಷ್ಠಾನ ಇಲಾಖೆಗಳು ಒಳಗೊಂಡಂತೆ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸದರಿ ಸಮಿತಿಯು 6 ತಿಂಗಳಿಗೊಮ್ಮೆ ಸಭೆ ಸೇರಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿ ಆಯೋಗದಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಬಾಕಿ 18 ಜಿಲ್ಲೆಗಳಲ್ಲಿ ಬರುವ ಫೆಬ್ರವರಿ 22 ಮಾಹೆಯೊಳಗಾಗಿ ಸಮೀಕ್ಷೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ನಲ್ಲಿ ತೊಡಗಿರುವವರನ್ನು ಕಾಯಿದೆಗಳ ನಿಯಮಾನುಸಾರ 5080 ಜನರನನ್ನು ಗುರುತಿಸಲಾಗಿದೆ. ಇವರಿಗೆ ಪುನರ್ವಸತಿ ಕಾರ್ಯಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಒಂದು ಬಾರಿಗೆ ನಗದು ಸಹಾಯಧನವಾಗಿ 40,000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಮತ್ತು ಸಹಾಯಧನ ನೀಡಲಾಗುತ್ತಿದೆ. ಈಗಾಗಲೇ ಗುರುತಿಸಲ್ಪಟ್ಟ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡುವ ಕೆಲಸ ನಡೆದಿದೆ ಎಂದು ತಿಳಿಸಿದರು.

ಮ್ಯಾನ್ಯುವೆಲ್ ಸ್ವಚ್ಛಗೊಳಿಸುವಾಗ ಮೃತಪಟ್ಟಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುತ್ತವೆ. ಮೃತಪಟ್ಟ ಕುಟುಂಬದ ಅವಲಂಬಿತರಿಗೆ 10 ಲಕ್ಷ ರೂ.ಗಳ ಪರಿಹಾರ ಹಣವನ್ನು ನೀಡಲಾಗಿದೆ. ಕಳೆದ 1995 ರಿಂದ ಈವರೆಗೆ 88 ಕುಟುಂಬಗಳಿಗೆ ಪರಿಹಾರಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮ್ಯಾನ್ಯುವೆಲ್ ಸೆಫ್ಟಿಕ್ ಟ್ಯಾಂಕ್ ಹಾಗೂ ತೆರೆದ ಚರಂಡಿ ಗಟಾರಗಳನ್ನು ಸ್ವಚ್ಛಗೊಳಿಸಲು ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಲಾಗುತ್ತದೆ. ಈವರೆಗೆ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸ್ವಚ್ಛತೆಗಾಗಿ ಆಧುನಿಕ ತಂತ್ರಜ್ಞಾನ ಆಧಾರಿತ 177 ಸಕ್ಕಿಂಗ್ ಮಿಷಿನ್, 255 ಜಟ್ಟಿಂಗ್ ಮಶೀನ್, 50 ಡೀಸಾಟ್ಟಿಂಗ್, 28 ರಾಡರಿಂಗ್ ಯಂತ್ರ, 132 ಸಕ್ಕಿಂಗ್ ಕಮ್ ಜಟ್ಟಿಂಗ್ ಮಶೀನ್ , 13 ಇತರ ಸ್ವಚ್ಛತೆಯ ಯಂತ್ರಗಳನ್ನು ಖರೀದಿಸಲಾಗಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ 30,341 ಅನೈರ್ಮಲ್ಯ ಶೌಚಾಲಯಗಳನ್ನು ತೆರವುಗೊಳಿಸಿ ನೈರ್ಮಲ್ಯ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಚರ್ಚೆಯಲ್ಲಿ ಸದಸ್ಯರಾದ ಧರ್ಮಸೇನ, ತಿಪ್ಪೇಸ್ವಾಮಿ, ರಮೇಶ ಅವರು ಭಾಗವಹಿಸಿ ಹಸ್ತ ಚಾಲಿತ ಸ್ವಚ್ಛತಾ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೆಲಸಗಾರರಿಗೆ ಸುರಕ್ಷಾ ಸಾಮಗ್ರಿಗಳು ಆಧುನಿಕ ಸ್ವಚ್ಛತಾ ಯಂತ್ರೋಪಕರಣಗಳನ್ನು ಒದಗಿಸಬೇಕು. ಈ ಪದ್ಧತಿ ಅನುಸರಿಸುವವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.