Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಗೌರವಯುತ ಕಾಯಕ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ : ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

localview news

ಬೆಳಗಾವಿ: ರಾಜ್ಯದ ಪ್ರತಿಯೊಬ್ಬರು ಗೌರವಯುತ ಕಾಯಕದ ಜೊತೆಗೆ ಜೀವನ ನಡೆಸಲು ಅಗತ್ಯದ ಅವಕಾಶಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು ಇದಕ್ಕಾಗಿ ಇಚ್ಛಾಶಕ್ತಿ ಹೊಂದುವದು ಅತೀ ಮುಖ್ಯವಾಗಿದೆ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನುಡಿದರು.

ನಗರದ ಸರ್ದಾರ ಹೈಸ್ಕೂಲ ಮೈದಾನದಲ್ಲಿಂದು (ಡಿ.15) ಜರುಗಿದ ರಾಷ್ಟ್ರೀಯ್ ಗ್ರಾಮೀಣ, ಹಾಗೂ ನಗರ ಜೀವನೋಪಯ ಅಭಿಯಾನ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವ ಸಹಾಯ ಗುಂಪಿನ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ಗಾದೆಯಂತೆ ಇಂದು ಪ್ರತಿಯೊಬ್ಬರು ಹೊಟ್ಟೆ ತುಂಬಿಸಿಕೊಳ್ಳಲು ಒಂದಿಲೊಂದು  ಕಾಯಕ ಮಾಡುತ್ತಿದ್ದಾರೆ. ತಲಾ ಆದಾಯದಲ್ಲಿ ಮೂರನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಅವಕಾಶ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸ್ವಾವಲಂಬಿಗಳನ್ನಾಗಿಸಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವದು ಎಂದರು.

ಗ್ರಾಮೀಣ ಭಾಗದ ಮಹಿಳೆಯರು ಸಾಮೂಹಿಕ ಹಾಗೂ ವೈಯಕ್ತಿಕ ಚಟುವಟಿಕೆಗಳನ್ನು ಕೌಶಲ್ಯಭರಿತವಾಗಿ ಮಾಡಬೇಕಾಗಿದೆ. ಇದಕ್ಕಾಗಿಯೇ ಅಗತ್ಯದ ತರಬೇತಿ ನೀಡುವದರ ಜೊತೆಗೆ ಉತ್ತಮ ಮಾರುಕಟ್ಟೆ ಒದಗಿಸಿ ಕೊಡಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವದು. ಸ್ವ ಸಹಾಯ ಗುಂಪುಗಳಿಂದ  ಉತ್ಪಾದಿಸುವ ಉತ್ಪನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕ್ಲಸ್ಟರಗಳನ್ನು ರೂಪಿಸಲಾಗುವದು ಎಂದು ಹೇಳಿದರು.

ಮಹಿಳೆಯರು ಪ್ರಾಮಾಣಿಕ ಹಾಗೂ ತುಂಬ ಶ್ರಮ ಜೀವಿಗಳಾಗಿದ್ದು ಸ್ವ ಸಹಾಯ ಗುಂಪಿನಿಂದ ಉತ್ಪಾದಿಸುವ ಎಲ್ಲ ಉತ್ಪನ್ನಗಳನ್ನು ರಾಷ್ಟ್ರೀಯ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಲು ಸರ್ವ ಪ್ರಯತ್ನ ನಡೆಸಲಾಗುವದು. ಸ್ವಾತಂತ್ರೋತ್ಸವದ ದಿನದಂದು 7500 ಸ್ತ್ರೀ ಶಕ್ತಿ ಸಂಘಗಳಿಗೆ ಮೈಕ್ರೋ ಸಾಲವನ್ನು ನೀಡಲಾಗಿದ್ದು ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಎಲ್ಲ ಸ್ತ್ರೀ  ಶಕ್ತಿ ಸಂಘಗಳಿಗೂ ಇದನ್ನೂ ವಿಸ್ತರಿಸಲಾಗುವದು ಎಂದು ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ರಾಜ್ಯ ಉನ್ನತ ಶಿಕ್ಷಣ, ಐಟಿ, ಬಿಟಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವರಾದ ಡಾ. ಅಶ್ವತ್ಥನಾರಾಯಣ ಸಿ.ಎನ್ ಅವರು ಮಾತನಾಡಿ ಸ್ವ ಸಹಾಯ ಸಂಘಗಳು ರಾಜ್ಯದ ಉದ್ದಗಲಕ್ಕೂ ಬೆಳೆದಿದ್ದು ಇವುಗಳ ಮೂಲಕ ಹಲವಾರು ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ.

ಇಲ್ಲಿಯ ಉತ್ಪನ್ನಗಳು ರಾಷ್ಟ್ರೀಯ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸ್ವ ಸಹಾಯ ಸಂಘಗಳಿAದ ತಯಾರಿಸಲಾಗುವ ಉತ್ಪನ್ನಗಳ ಮಾರಾಟಕ್ಕೆ ಅಗತ್ಯದ ಕಟ್ಟಡ ನಿರ್ಮಾಣಕ್ಕೆ ಶೀಘ್ರವೆ ಕ್ರಮ ಕೈಗೊಳ್ಳಲಾಗುವದು.

ಅಲ್ಲದೇ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯಿಂದ ಉತ್ಪಾದಿಸುವ ಉತ್ಪನ್ನಗಳನ್ನು ಇತರೆ ಇಲಾಖೆಗಳಿಗೆ ಮಾರಾಟ ಮಾಡಲು ಸುಲಭವಾಗುವಂತಹ ಎಲ್ಲ ಕ್ರಮಗಳನ್ನು ಜರುಗಿಸಲಾಗುವದು ಎಂದರು. ಪ್ರಧಾನ ಮಂತ್ರಿ ದೀನ ದಯಾಳ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಗ್ರಾಮೀಣ ಮಹಿಳೆಯು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತರಬೇತಿ ನೀಡಲಾಗುತ್ತಿದ್ದು ಇದರಿಂದಾಗಿ ಗ್ರಾಮ ಸ್ವರಾಜವಾಗುವದನ್ನು ಕಾಣಬಹುದಾಗಿದೆ ಎಂದರು.

ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಕೋಟಿ ಉದ್ಯೋಗ ನಿರ್ಮಾಣ ಮಾಡುವ ಯೋಜನೆ ಜಾರಿಗೆ ತರಲಾಗುವದು ಎಂದು ಸಚಿವ ಅಶ್ವತ್ಥ ನಾರಾಯಣ ನುಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕರಾದ ಅನೀಲ ಬೆನಕೆ, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲಾನ ಬಿಸ್ವಾಸ, ಜಿಲ್ಲಾಧಿಕಾರಿ ಆರ್,  ವೆಂಕಟೆಶಕುಮಾರ , ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ದರ್ಶನ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ರಾಷ್ಟ್ರೀಯ್ ಜೀವನೋಪಾಯ್ ಅಭಿಯಾನದ ಅಭಿಯಾನ ನಿರ್ದೇಶಕರಾದ ಮುಂಜುಶ್ರೀ ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಮಾರಿ ಸ್ವಾತಿ ನಾಡಗೀತೆ ಪ್ರಸ್ತುತಿಸಿದರು.