Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾಜಕೀಯ ಸಾಕು: ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚಿಸಿ

localview news

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಯಲಿ

ಬೆಳಗಾವಿ:ಕಳೆದ ಎರಡೂ ವರ್ಷಗಳ ಬಳಿಕ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವುದು ಯಾವಾಗ ಎಂದು ಇಲ್ಲಿನ ಜನರ ಯಕ್ಷ ಪ್ರಶ್ನೆಯಾಗಿದೆ.

ಬೆಳಗಾವಿಯಲ್ಲಿ ಪ್ರವಾಹ ಬಂದ ಸಾಕಷ್ಟು ನೆರೆಯ ಸಂತ್ರಸ್ತರ ಬೀದಿಗೆ ಬಿದಿದ್ದಾರೆ. ವಿಪಕ್ಷಗಳು ಇದನ್ನೇ ಅಸ್ತçವನ್ನಾಗಿಸಿಕೊಂಡು ಸರಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸುವ ಲೆಕ್ಕಾಚಾರ ಹಾಕಿಕೊಂಡಿವೆ. ಆದರೆ ಸರಕಾರ ಮಾತ್ರ ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಸರಿಯಾಗಿ ಸ್ಪಂಧಿಸದೆ ಇರುವುದು ಈ ಭಾಗದ ಜನರ ಆಶೋತ್ತರಗಳು ಹಾಗೆ ಉಳಿದುಕೊಂಡಿವೆ.


ವಿಶೇಷ ಲೇಖನ: ಶಿವರಾಜ ಬಂಡಗಿ

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕೈಗಾರಿಕೆಯ ಕಂಪನಿಗಳು ಬರಬೇಕಿದೆ. ಆದರೆ ಸರಕಾರದ ಇಚ್ಚಾಶಕ್ತಿ ಇಲ್ಲ. ಬೆಳಗಾವಿ ಜಿಲ್ಲೆಯ ಉದ್ಯಮಭಾಗದಲ್ಲಿರುವ ಕೈಗಾರಿಕೆಯ ಕಂಪನಿಗಳಿಗೆ ಹೋಗಿ ಬರಲು ಸಮರ್ಪಕವಾದ ರಸ್ತೆಯೇ ಇಲ್ಲ. ಆದರೆ ಈ ಭಾಗದ ಉದ್ಯಮಿಗಳು ಸರಕಾರಕ್ಕೆ ಸಾಲು ಸಾಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಬೆಳಗಾವಿಯಲ್ಲಿಯೇ ಸರಕಾರ ಇರುವುದರಿಂದ ಸಂಬಂಧಿಸಿದ ಸಚಿವರು, ಅಧಿಕಾರಿಗಳು ಉಧ್ಯಮಭಾಗಕ್ಕೆ ಬಂದು ಇಲ್ಲಿನ ಉದ್ಯಮಿಗಳ ಸಮಸ್ಯೆಯ ಕುರಿತು ಆಲಿಸಬೇಕೆಂಬುದು ಇಲ್ಲಿನ ಉದ್ಯಮಿಗಳ ಒತ್ತಾಯವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಕಿತ್ತೂರು ಕಲ್ಯಾಣ ಕರ್ನಾಟಕ ಘೋಷಣೆ ಮಾಡಿದರು. ಆದರೆ ವೀರರಾಣಿ ಕಿತ್ತೂರು ಚನ್ನಮ್ಮನ ಮಾನಸ ಪುತ್ರನಂತಿದ್ದ ಸಂಗೊಳ್ಳಿ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಮನಸ್ಸು ಮಾಡಿಲ್ಲ. ಇದು ರಾಯಣ್ಣನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸರಕಾರ ಬೆಳಗಾವಿಯ ಸುವರ್ಣ ವಿಧಾನಸೌಧದ ಒಳಗಡೆ ಸದನ ನಡೆಸುತ್ತಿದ್ದರೂ ಈ ಭಾಗದಲ್ಲಿನ ಯಾವೊಂದು ಸಮಸ್ಯೆಯ ಬಗ್ಗೆ ಚರ್ಚೆಯಾಗಿಲ್ಲ. ಕೇವಲ ರಾಜಕೀಯ ಆರೋಪ ಪ್ರತ್ಯೋರೋಪಗಳು ನಡೆಯುತ್ತಿವೆಯೇ ವಿನಃ ಯಾವುದೊಂದು ಅಭಿವೃದ್ಧಿ ಪರವಾದ ಚರ್ಚೆಗಳು ನಡೆದಿಲ್ಲ.

ಕೃಷ್ಣಾ ಮೆಲ್ದಂಡೆ ಯೋಜನೆಗೆ ಅನುದಾನ ಮೀಸಲಿಡಬೇಕಿದೆ. ಅಲ್ಲದೆ, ಬಾಗಲಕೋಟೆಗೆ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಸ್ಥಾಪನೆಗೆ ಘೋಷಣೆ ಮಾಡಿದರೂ ಇಲ್ಲಿಯವರೆಗೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಸರಕಾರದ ನಡೆಯ ವಿರುದ್ಧ ಬೇಸರಗೊಂಡಿರುವ ಬಾಗಲಕೋಟೆಯ ಕರ್ನಾಟಕ ರಕ್ಷಣಾ ಕಾರ್ಯಕರ್ತರು ಬೂಟ್ ಪಾಲೀಸ್ ಮಾಡುವುದರ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ನಡೆದ ಬೆಳಗಾವಿಯ ಅಧಿವೇಶನದಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಸಮಗ್ರ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿಲ್ಲ. ಈ ಭಾಗದ ಶಾಸಕರು, ಸಚಿವರು ಸದನದಲ್ಲಿ ಧ್ವನಿ ಎತ್ತಿ ಈ ಭಾಗದ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ.

ಸದನದಲ್ಲಿ ಎರಡು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಎರಡು ದಿನಗಳ ಕಾಲ ಯಾವುದಕ್ಕೂ ಸಾಲುವುದಿಲ್ಲ. ಸುವರ್ಣ ವಿಧಾನಸೌಧದ ಹೊರಗಡೆ ಸಾಲು ಸಾಲು ಪ್ರತಿಭಟನೆಗಳನ್ನು ನಡೆಯುತ್ತಿವೆ. ಅವರಿಗೆ ಭರವಸೆಗಳು ಸಿಗುತ್ತಿವೆ ಹೊರತು ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ. ಸರಕಾರ ಇನ್ನಾದರೂ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲಿ ಎನ್ನುವುದು ಎಲ್ಲರ ಕಳಕಳಿ.