ಪುಂಡರ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ: ನೂರಾರು ಕಾರ್ಯಕರ್ತರ ಬಂಧನ
ಬೆಳಗಾವಿ: ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿದ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನೂರಾರು ಕರವೇ ಕಾರ್ಯಕರ್ತರು ಪೀರನವಾಡಿಯ ವೈ ಜಂಕ್ಷನ್ ನಲ್ಲಿರುವ ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ಜಮೆಗೊಂಡು ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬೆಳಗಾವಿಯಲ್ಲಿ ನಾಡು, ನುಡಿಯ ವಿಚಾರದಲ್ಲಿ ಪದೇ ಪದೇ ಕನ್ನಡಿಗರನ್ನು ಕೆಣಕಿ ಪುಂಡಾಟ ಮರೆಯುತ್ತಿರುವ ನಾಡದ್ರೋಹಿ ಎಂಇಎಸ್ ಕೈವಾಡ ಇರುವುದರಿಂದ ಅವರ ಮೇಲೆ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡರಿಗರ ಸಾಮರಸ್ಯ ಕದಡುತ್ತಿರುವ ನಾಡದ್ರೋಹಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು.
ಹಿಂದಿನ ಸರಕಾರದ ವಿರುದ್ಧವೇ ಶವಯಾತ್ರೆ ಮಾಡುವುದಾಗಿ ಹೇಳಿಕೆ ನೀಡಿದ ಪುಂಡರ ವಿರುದ್ಧ ಸರಕಾರ ಕ್ರಮ ಕೈಕೊಂಡು ನಿಷೇಧ ಮಾಡಬೇಕೆಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು. ನೂರಾರು ಕರವೇ ಕಾರ್ಯಕರ್ತರು ಜಮಾವಣೆ ಹಿನ್ನೆಲೆ ಪೀರನವಾಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನೂರಾರು ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ರ್ಯಾಲಿ ಮಾರ್ಗ ಮಧ್ಯದಲ್ಲಿ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.