Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

15 ರಿಂದ 18 ವಯಸ್ಸಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕಾಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ ಚಾಲನೆ

localview news

ಬೆಳಗಾವಿ:ಬೆಳಗಾವಿ ಜಿಲ್ಲೆಯಲ್ಲಿ 298 ಲಸಿಕಾ ಕೇಂದ್ರ ಸ್ಥಾಪಿಸುವ ಮೂಲಕ ಜಿಲ್ಲೆಯ 2.47 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಕುರಿತು ಮಕ್ಕಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳ ಮನವೊಲಿಸಿ 15 ರಿಂದ 18 ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಕರೆ ನೀಡಿದರು.

ನಗರದ‌ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಸೋಮವಾರ 15 ರಿಂದ 18 ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕಾಕರಣ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಅವರು ಮಾತನಾಡಿದರು.

ಜಿಲ್ಲೆಯ 2.47 ಲಕ್ಷ ಮಕ್ಕಳಿಗೆ ಲಸಿಕೆಯನ್ನು ಒದಗಿಸಲು ಎಲ್ಲ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ವಿವರಿಸಿದರು.

ಸಂಭವನೀಯ 3ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ರೀತಿ ಜನವರಿ 10 ರಿಂದ ಬೂಸ್ಟರ್ ಡೋಸ್ ಕೂಡ ನೀಡಲಾಗುವುದು.

ಲಸಿಕಾಕರಣ ಕುರಿತು ಮಾಧ್ಯಮಗಳು ಕೂಡ ಮಕ್ಕಳು ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸುವ ಮೂಲಕ. ಲಸಿಕಾಕರಣ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಸಂಭವನೀಯ 3 ನೇ ಅಲೆಯ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲರೂ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಸೋಂಕು ಹರಡುವಿಕೆ ತಡೆಗಟ್ಟಲು ಸಹಕರಿಸಬೇಕು.

ದೇಶದಲ್ಲಿ 240 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ಕೆಲಸವನ್ನು ಪ್ರಧಾನಮಂತ್ರಿ ‌ನರೇಂದ್ರ ಮೋದಿ ಅವರು ಮಾಡಿದರು. ಇದಲ್ಲದೇ ಆಕ್ಸಿಜನ್ ಬೆಡ್, ಆಕ್ಸಿಜನ್ ಉತ್ಪಾದನೆ, ಪ್ರಯೋಗಾಲಯ ಸ್ಥಾಪನೆ ಸೇರಿದಂತೆ ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಿದರು. ಆಸ್ಪತ್ರೆಗಳನ್ನು ಮೇಲ್ದರ್ಜಗೇರಿಸುವ ಜತೆಗೆ ಪ್ರತಿ ಜಿಲ್ಲೆಗಳಲ್ಲಿ ಪ್ರಯೋಗಾಲಯ ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ‌ಕೂಡ ಸ್ಥಾಪಿಸಲು ಕ್ರಮಗಳನ್ನು ಕೈಗೊಂಡರು ಎಂದು ವಿವರಿಸಿದರು.

ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ರಾಜ್ಯದ ಸರಾಸರಿ ಶೇ.97 ಆದರೆ ಬೆಳಗಾವಿ ಜಿಲ್ಲೆಯ ಶೇ. 99ರಷ್ಟು ಸಾಧನೆ ಮಾಡಿದೆ. ಎರಡನೇ ಡೋಸ್ ರಾಜ್ಯದ ಸರಾಸರಿ ಶೇ.79ರಷ್ಟಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಶೇ. 83 ರಷ್ಟು ಲಸಿಕೆ ನೀಡಲಾಗಿದೆ. ಲಸಿಕೆ ನೀಡಿಕೆಯಲ್ಲಿ ಬೆಳಗಾವಿ ಜಿಲ್ಲೆ ಒಟ್ಟಾರೆ ಉತ್ತಮ ಸಾಧನೆಗೈದಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಸಂಸದರಾದ ಮಂಗಲ ಅಂಗಡಿ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೂ ಲಸಿಕೆಯನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ‌ ಸಾಬಣ್ಣ ತಳವಾರ ಅವರು ಮಾತನಾಡಿ, ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಇದನ್ನು ಅರಿತುಕೊಂಡು ‌ಮಕ್ಕಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದು ಮನವಿ ಮಾಡಿಕೊಂಡರು.ಸ್ವಾಗತಿಸಿ ಪ್ರಾಸ್ತಾವಿಕವಾಗಿ‌ಮಾತನಾಡಿದ ಆರ್.ಸಿ.ಎಚ್. ಅಧಿಕಾರಿ ಡಾ.ಐ.ಪಿ.ಗಡಾದ, ಜಿಲ್ಲೆಯಲ್ಲಿ 2.47 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಶಾಸಕ ಅನಿಲ್ ಬೆನಕೆ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಡಿಡಿಪಿಐ ಬಸವರಾಜ ನಾಲತವಾಡ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಮಕ್ಕಳಿಗೆ ಸಾಂಕೇತಿಕವಾಗಿ ಲಸಿಕೆಯನ್ನು ನೀಡುವ ಮೂಲಕ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.