Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮತ್ತೆ ಲಾಕ್ ಡೌನ್ ಸಾಧ್ಯತೆ ನೋಡಿ ಲಾಕ್ ಡೌನ್ ಪರಿಣಾಮ

localview news

ರಾತ್ರಿ ಸುಮಾರು 11 ಗಂಟೆ
ನಮ್ಮ ರಸ್ತೆ ಬದಿ " ಊಟದ ಮನೆ " ತಳ್ಳುಗಾಡಿಯ ಆಹಾರವೆಲ್ಲ ಮುಗಿದು ಅಮ್ಮ ತಟ್ಟೆ ಲೋಟ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅಪ್ಪ ಗ್ಯಾಸ್ ಸ್ಟವ್ ಆರಿಸಿ, ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕುರ್ಚಿಗಳನ್ನು ಎತ್ತಿ ಗಾಡಿಯ ಮೇಲಿಡುತ್ತಿದ್ದರೆ. ಎಂದಿನಂತೆ ಅಂದಿನ ಸಂಪಾದನೆಯ ಗಲ್ಲಾ ಪೆಟ್ಟಿಗೆಯ ನೋಟು - ನಾಣ್ಯಗಳನ್ನು ಒಂದು ತಟ್ಟೆಯಲ್ಲಿ ಹಾಕಿ ನಾನು ಎಣಿಸುತ್ತಾ ಲೆಕ್ಕದ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಈಗ ಮೊದಲಿನಂತಿಲ್ಲ. ಕ್ಯಾಷ್ ಸ್ವಲ್ಪ ಕಡಿಮೆ. ಮೊಬೈಲ್ ಗೂಗಲ್ ಅಕೌಂಟಿಗೂ ಒಂದಷ್ಟು ಹಣ ಬರುತ್ತದೆ. ಅದನ್ನು ಮನೆಗೆ ಹೋಗಿ ಲೆಕ್ಕ ಹಾಕುತ್ತೇನೆ.

ನಾನು ಪಿಯುಸಿ ಸೇರಿದ ಮೇಲೆ ಕಳೆದ ಎರಡು ವರ್ಷದಿಂದ ನಮ್ಮ ತಳ್ಳುಗಾಡಿಯ ಲೆಕ್ಕವನ್ನು ಇಷ್ಟ ಪಟ್ಟು ನೋಡುತ್ತಿದ್ದೇನೆ.‌ ಅಮ್ಮನಿಗೆ ಲೆಕ್ಕ ಬರುವುದಿಲ್ಲ. ಅಪ್ಪನಿಗೆ ಸ್ವಲ್ಪ ಮಟ್ಟಿಗೆ ಬಂದರು ಕೆಲಸದ ದಣಿವಿನಿಂದ, ತುಂಬಾ ಸುಸ್ತಾಗುವುದರಿಂದ ಮಲಗಿಬಿಡುತ್ತಾರೆ. ಆದ್ದರಿಂದ ಖರ್ಚು ವೆಚ್ಚಗಳನ್ನು ನಾನೇ ನೋಡಿಕೊಳ್ಳುತ್ತೇನೆ.

ಅಂದು ಬಹುಶಃ ಮಾರ್ಚ್ 20 ಇರಬೇಕು. ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಎಂದಿನ 100 ರೂಪಾಯಿ ಮಾಮೂಲಿ ವಸೂಲಿಗೆ ಬಂದ ಪೋಲೀಸಪ್ಪ ನಾಳೆಯಿಂದ ಒಂದು ವಾರ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿದೆ. ನೀವು ಈ ವಾರ ವ್ಯಾಪಾರ ಮಾಡುವಂತಿಲ್ಲ. ಕೊರೋನಾ ವೈರಸ್ ನಿಯಂತ್ರಿಸಲು ಇದು ತುಂಬಾ ಅವಶ್ಯಕ. ಇಲ್ಲದಿದ್ದರೆ ಈ ರೋಗದಿಂದ ಜನ ಬೀದಿ ಬೀದಿಗಳಲ್ಲಿ ಹೆಣವಾಗುತ್ತಾರೆ. ಇದಕ್ಕೆ ಔಷಧಿಯೇ ಇಲ್ಲ " ಎಂದರು.

ಅಪ್ಪ,‌. ಹೌದೆ, ಹೋಗಲಿ ಬಿಡಿ ಒಂದು ವಾರ ತಾನೆ ಎಂದು ನಿರ್ಲಕ್ಷಿಸಿದರು. ಅಮ್ಮ ಮಾತ್ರ ಥೋ ಇದೆಂತ ರೋಗ ಬಂತಪ್ಪ ನಮ್ಮ ಕರ್ಮ ಎಂದು ಗೊಣಗಿಕೊಂಡರು. ನನಗೆ ಏನೂ ಅನಿಸಲಿಲ್ಲ. ನನ್ನ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಏನಾಗುತ್ತದೆ ಎಂದು ಮಾತ್ರ ಒಮ್ಮೆ ಯೋಚನೆ ಮಾಡುತ್ತಾ ನಮ್ಮ ಗಾಡಿ ತಳ್ಳುತ್ತಾ ಮನೆಯತ್ತ ಸಾಗಿದೆವು.

ಎರಡು ದಿನ ಮನೆಯಲ್ಲಿ ಆರಾಮವಾಗಿ ಕಳೆಯುವಷ್ಟರಲ್ಲಿ ಮತ್ತೊಂದು ಸುದ್ದಿ ಬಂದಿತು. ಮುಂದಿನ 21 ದಿನ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಯಿತು.

ಆ ಸುದ್ದಿ ಕೇಳುತ್ತಿದ್ದಂತೆ ಅಮ್ಮ ಆಕಾಶವೇ ಕಳಚಿ ಬಿದ್ದಂತೆ ಆಡತೊಡಗಿದರು. ಬದುಕೇ ಮುಗಿಯಿತು ಎಂಬಂತೆ ಮಾತನಾಡತೊಡಗಿದರು. ಗಡಿಬಿಡಿಯಿಂದ ಇದ್ದ ಸ್ವಲ್ಪವೇ ಹಣದಲ್ಲಿ ದಿನಸಿ ಸಂಗ್ರಹಿಸಿಕೊಳ್ಳತೊಡಗಿದರು.

ಅಪ್ಪ ಗಾಬರಿಗೆ ಬಿದ್ದು ಊರಿಗೆ ಹೋಗೋಣ ಎಂದು ಹಠ ಮಾಡತೊಡಗಿದರು. ಅಮ್ಮ ಮಾತ್ರ ಯಾವುದೇ ಕಾರಣಕ್ಕೂ ಹಳ್ಳಿಗೆ ಹೋಗಲು ಒಪ್ಪಲಿಲ್ಲ. ಒಮ್ಮೆ ಕೆಟ್ಟು ಅವಮಾನಿಸಿಕೊಂಡು ನಗರ ಸೇರಿ ಹೇಗೋ ಕಷ್ಟ ಪಟ್ಟು ಬದುಕು ಕಟ್ಟಿಕೊಳ್ಳುತ್ತಿರುವಾಗ ಸತ್ತರೆ ಇಲ್ಲೇ ಸಾಯೋಣ. ಎಲ್ಲಿಗೂ ಹೋಗುವುದು ಬೇಡ ಎಂದರು. ಕೊನೆಗೆ ಅಮ್ಮನ ಮಾತೇ ಉಳಿಯಿತು.

ಆ 21 ದಿನಗಳು ನನಗಂತು ತುಂಬಾ ಉಲ್ಲಾಸದಾಯಕ ಮತ್ತು ಸಂತೋಷದ ದಿನಗಳು. ತುಂಬಾ ರುಚಿಯಾಗಿ ಅಡುಗೆ ಮಾಡುವ ಅಮ್ಮ ಬೆಳಗ್ಗೆ ಇಡ್ಲಿ ದೋಸೆ ಚಿತ್ರಾನ್ನ ಪಲಾವ್ ಚಪಾತಿ ವಡೆ ಪಲ್ಯ ಎಲ್ಲಾ ಮಾಡಿಕೊಡುತ್ತಿದ್ದರು. ಮಧ್ಯಾಹ್ನ ಮತ್ತು ರಾತ್ರಿ ಊಟವು ತುಂಬಾ ಆಸೆ ಪಟ್ಟು ಕೇಳಿ ಮಾಡಿಸಿ ತಿನ್ನುತ್ತಿದ್ದೆ. ಸುಮಾರು ನಾಲ್ಕು ಬಾರಿ ಹೋಳಿಗೆ ಕಜ್ಜಾಯ ಪಾಯಸ ಕೇಸರಿ ಬಾತ್ ಎಲ್ಲವನ್ನೂ ತಿಂದಿದ್ದೇನೆ.

ಅಪ್ಪನೂ ಮನೆಯಲ್ಲೇ ಟಿವಿ ನೋಡುತ್ತಾ ಇರುತ್ತಿದ್ದರು. ಮಧ್ಯಾಹ್ನ ಊಟವಾದ ಮೇಲೆ ನಾವು ಮೂವರು ಚೌಕಾಬಾರ, ಹಾವು ಏಣಿಯಾಟ ಆಡುತ್ತಾ, ಕಾಫಿ ಕುಡಿಯುತ್ತಾ, ಅವರಿಬ್ಬರಿಗೂ ನಾನು ಮೋಸ ಮಾಡಿ ಆಟದಲ್ಲಿ ಗೆಲ್ಲುತ್ತಾ ಇದ್ದೆನು. ಓದುವುದು ಇರಲಿಲ್ಲ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.

ರಾತ್ರಿ ಮಲಗುವಾಗ ಮಾತ್ರ ಅಪ್ಪ ಟಿವಿಯಲ್ಲಿ ಬರುತ್ತಿದ್ದ ಸುದ್ದಿಗಳಿಂದ ಬಹಳ ಆತಂಕ ಪಡುತ್ತಿದ್ದರು. ಬಹುಶಃ ಈ ಜಗತ್ತು ಕೊರೋನಾದಿಂದ ನಾಶವಾಗುತ್ತದೆ ಎಂದು ಅಮ್ಮನ ಬಳಿ ಹೇಳುತ್ತಿದ್ದರು. ಅಮ್ಮ ಎಲ್ಲರಿಗೂ ಆಗಿದ್ದು ನಮಗೂ ಆಗುತ್ತದೆ ಎಂದು ಧೈರ್ಯದಿಂದಲೇ ಇದ್ದರು.

21 ದಿನ ಮುಗಿಯಲು ಇನ್ನು ಎರಡೇ ದಿನವಿತ್ತು. ಅಪ್ಪ ಮತ್ತೆ ತಳ್ಳುಗಾಡಿಯ " ನಮ್ಮನೆ ಊಟ " ವ್ಯಾಪಾರ ಮಾಡಲು ತಯಾರಿ ಮಾಡಿಕೊಳ್ಳ ತೊಡಗಿದರು. ಆಗ ಬರ ಸಿಡಿಲಿನಂತೆ ಮತ್ತೊಂದು ಸುದ್ದಿ ಬಂದಿತು. ಮತ್ತೆ 19 ದಿನಗಳ ಲಾಕ್ ಡೌನ್. ಬೀದಿ ಬದಿ ಯಾವುದೇ ಊಟದ ವ್ಯಾಪಾರ ಮಾಡುವಂತಿಲ್ಲ.ಯಾಕೋ ಈ ಬಾರಿ ಅಪ್ಪ ಕುಸಿದು ಹೋದರು.

ನಾವು ವಾಸವಿದ್ದಿದ್ದು ಒಂದು ಚಿಕ್ಕ ವಠಾರದಲ್ಲಿ. ಮನೆ ಬಾಡಿಗೆ ಎರಡು ಸಾವಿರ. ವಿದ್ಯುತ್ ನೀರಿನ ಬಿಲ್ಲು 300 ರೂಪಾಯಿ. ನಾನು ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದೆ. ಅನ್ನಭಾಗ್ಯದ ಉಚಿತ ಅಕ್ಕಿ ಮತ್ತು ಕೊರೋನಾ ಕಾರಣದಿಂದ ಸ್ಥಳೀಯ ಜನರು ನೀಡಿದ ದಿನಸಿಗಳು ನಮಗೆ ಸಿಕ್ಕಿದ್ದರಿಂದ ಊಟದ ಸಮಸ್ಯೆ ಏನೂ ಆಗಲಿಲ್ಲ. ಅಮ್ಮ ಒಬ್ಬ ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಬೆಳಗಿನ ಸಮಯ ಮನೆಗೆಲಸ ಸಹ ಮಾಡುತ್ತಿದ್ದರು. ಆದರೂ ಅಪ್ಪ ತುಂಬಾ ನಿರಾಸೆಗೆ ಒಳಗಾದರು. ಅಮ್ಮ ಮತ್ತು ನಾನು ಎಷ್ಟು ಧೈರ್ಯ ಹೇಳಿದರು ಕೇಳಲಿಲ್ಲ. ಊಟ ತಿಂಡಿ ಸಹ ಸರಿಯಾಗಿ ಮಾಡಲಿಲ್ಲ. ಟಿವಿ ನೋಡುವುದನ್ನು ನಿಲ್ಲಿಸಿದರು. ನಮ್ಮ ಬಳಿಯು ಸರಿಯಾಗಿ ಮಾತನಾಡುತ್ತಿರಲಿಲ್ಲ. ಮನೋರೋಗಿಯಂತೆ ಮೌನಕ್ಕೆ ಜಾರಿದರು.

ಮೊದಲು ಏನೋ ಸ್ವಲ್ಪ ಗಾಬರಿಯಾಗಿರಬೇಕೆಂದು ನಿರ್ಲಕ್ಷಿಸಿದ್ದ ಅಮ್ಮ ಎರಡು ವಾರದ ನಂತರವೂ ಅಪ್ಪ ಸರಿಯಾಗದಿದ್ದಾಗ ಗಾಬರಿಗೆ ಒಳಗಾದರು. ಅಪ್ಪನ ಆಸೆಯಂತೆ ಊರಿಗೆ ಹೋಗೋಣ ಎಂದರೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ನೆಂಟರು, ಸಂಬಂಧಿಕರು, ಗೆಳೆಯರು ಯಾರು ಬಂದು ಹೋಗುವಂತಿರಲಿಲ್ಲ. ಅಪ್ಪನ ಆರೋಗ್ಯ ದಿನೇ ದಿನೇ ಹದಗೆಡತೊಡಗಿತು.

ಖಾಸಗಿ ಆಸ್ಪತ್ರೆಗೆ ಹೋಗುವಷ್ಟು ಹಣ ನಮ್ಮಲ್ಲಿರಲಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗೋಣ ಎಂದರೆ ಕೊರೋನಾ ಕಾರಣದಿಂದ ಅಪ್ಪ ಭಯಪಡುತ್ತಿದ್ದರು. ಏನೂ ಆಗುವುದಿಲ್ಲ. ನಾನು ಆಸ್ಪತ್ರೆಗೆ ಬರುವುದಿಲ್ಲ ಎಂದು ಹಠ ಮಾಡಿದರು. ಕೆಲವೊಂದು ರಾತ್ರಿಗಳಲ್ಲಿ ಉಸಿರು ಕಟ್ಟಿದಂತಾಗಿ ಬೆಚ್ಚಿಬೀಳುತ್ತಿದ್ದರು.

ಅಮ್ಮ ಮತ್ತು ನಾನು ಇಬ್ಬರೇ ಇರುವುದು. ನಮಗೆ ಏನು ಮಾಡಲು ತೋಚಲಿಲ್ಲ. ಪಕ್ಕದ ಮನೆಯವರು ಜ್ವರ ಎಂದರೆ ದೂರ ಸರಿಯುತ್ತಿದ್ದರು. ಯಾರು ಮಾತನಾಡುತ್ತಿರಲಿಲ್ಲ. ಇನ್ನು ಉಸಿರಾಟದ ತೊಂದರೆ ಎಂದರೆ ಮನೆ ಖಾಲಿ ಮಾಡಿಸಬಹುದು ಎಂಬ ಭಯ ಅಮ್ಮನಿಗೆ.

ಲಾಕ್ ಡೌನ್ ಆಗಿ ಸರಿಯಾಗಿ 35 ನೇ ದಿನ ಬೆಳಗಿನ ಜಾವ, ನಾನಿನ್ನು ನಿದ್ದೆಯ ಮಂಪರಿನಲ್ಲಿದ್ದೆ. ಜೋರಾಗಿ ಅಮ್ಮ ಕಿಟಾರನೆ ಕಿರುಚಿದ ಶಬ್ದ ಕೇಳಿ ಬೆಚ್ಚಿಬಿದ್ದು ಕಣ್ಣು ಬಿಟ್ಟೆ.

ಅಪ್ಪ ರಾತ್ರಿಯ ಯಾವುದೋ ಹೊತ್ತಿನಲ್ಲಿ ಹೃದಯಾಘಾತದಿಂದ ಕಣ್ಣುಮುಚ್ಚಿದ್ದರು. ಅಮ್ಮನ ಜೊತೆ ನಾನು ಜೋರಾಗಿ ಗೋಳಾಡಿದೆ. ಅಪ್ಪನನ್ನು ಎದೆಗವುಚಿಕೊಂಡು ಮಾತನಾಡುವಂತೆ ಪೀಡಿಸಿದೆ.

ಆ ಇಕ್ಕಟ್ಟಾದ ಮನೆಯ ಸೆಕೆಯಲ್ಲೂ ಅಪ್ಪನ ‌ದೇಹ ಕೊರೆಯುವ ಚಳಿಯಂತೆ ತಣ್ಣಗಾಗಿತ್ತು. ನಮ್ಮನ್ನು ಸಮಾಧಾನಿಸುವುದು ಇರಲಿ ಮಾತನಾಡಿಸಲು ಸಹ ಯಾರು ಬರಲಿಲ್ಲ. ಪಾಪ ಅವರಿಗು ಕೊರೋನಾ ಭಯ.

ಏನು ಮಾಡಬೇಕೆಂದು ತೋಚದೆ ಮಧ್ಯಾಹ್ನದ ವರೆಗೂ ನಾನು ಅಮ್ಮ ಅಳುತ್ತಾ ಕುಳಿತಿದ್ದೆವು. ಆಗ ಯಾರು ಮಾಹಿತಿ ನೀಡಿದರೋ ಗೊತ್ತಿಲ್ಲ. ಒಂದು ಶವ ಸಂಸ್ಕಾರದ ವಾಹನ ಮತ್ತು ಇನ್ನೊಂದು ಆಂಬುಲೆನ್ಸ್ ನಮ್ಮ ಮನೆಯ ಬಳಿ ಬಂದಿತು. ನೋಡ ನೋಡುತ್ತಿದ್ದಂತೆ ಸಂಪೂರ್ಣ ಮಾಸ್ಕ್ ಹಾಕಿದ ಸಿಬ್ಬಂದಿ ನಮ್ಮ ಅನುಮತಿಯನ್ನು ಪಡೆಯದೆ ಅಪ್ಪನ‌ ಶವವನ್ನು ಶವದ ವಾಹನಕ್ಕೆ ಸಾಗಿಸಿ ಅಮ್ಮ ಮತ್ತು ನನ್ನನ್ನು ಆಂಬುಲೆನ್ಸ್ ವಾಹನಕ್ಕೆ ಹತ್ತಿಸಿ ಒಂದು ಸರ್ಕಾರಿ ಆಸ್ಪತ್ರೆಗೆ ದಾಖಸಿದರು.

ಇದು ನಡೆದು ಈಗ ಸುಮಾರು ಒಂದು ವರ್ಷ ಕಳೆದಿದೆ. ಅಮ್ಮ ಈಗಲೂ ಸಿಕ್ಕ ಸಿಕ್ಕವರನ್ನು ಕೇಳುತ್ತಿದ್ದಾಳೆ ಅಪ್ಪನ‌ ದೇಹ ಏನಾಯಿತು ಎಲ್ಲಿ ಸಂಸ್ಕಾರ ಮಾಡಿದಿರಿ ಎಂದು. ಉತ್ತರಿಸುವವರು ಯಾರೂ ಇಲ್ಲ. ನಾವೀಗ ಊರ ಹೊರಗಿನ ಗುಡಿಸಲಿನಲ್ಲಿ ಇದ್ದೇವೆ. ಆ ಹದಿನೆಂಟು ದಿನಗಳ ಆಸ್ಪತ್ರೆಯ ವಾಸ ಮುಗಿಸಿ ಬಂದಾಗ ಆ ವಠಾರದ ಜನ ನಮ್ಮನ್ನು ಮನೆಗೆ ‌ಸೇರಿಸಲಿಲ್ಲ. ಮನೆಯ ಯಜಮಾನ ನಮ್ಮ ವಸ್ತುಗಳನ್ನು ಮೂಟೆ ಕಟ್ಟಿ ಮನೆಯ ಹೊರಗೆ ಇಟ್ಟಿದ್ದ. ನಾವು ಬರುತ್ತಿದ್ದಂತೆ ‌ಸ್ವಲ್ಪ ಹಣ ನೀಡಿ ಎಲ್ಲಿಗಾದರೂ ಹೋಗಿ ಬಿಡಿ. ಇಲ್ಲಿ ಮಾತ್ರ ಸೇರಿಸುವುದಿಲ್ಲ ಎಂದು ಹೇಳಿದ. ನನ್ನ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದನ್ನು ನೋಡಿ ಅಮ್ಮ ಇನ್ನು ನಾವು ಬದುಕಿರುವುದು ಬೇಡ. ಆತ್ಮಹತ್ಯೆ ಮಾಡಿಕೊಳ್ಳೋಣ ಬಾ ಎಂದು ಆಳುತ್ತಾ ನನ್ನ ಕೈಹಿಡಿದು ಎಳೆದರು.

ಅದನ್ನು ನೋಡಿದ ಅಲ್ಲಿನ ಸ್ಥಳೀಯರು ಅಮ್ಮನಿಗೆ ಗದರಿ ಅದೆಲ್ಲಾ ಬೇಡ. ಮುತ್ತಿನಂತ ಮಗು ಇದೆ. ಸದ್ಯಕ್ಕೆ ಇರಲು ಊರ ಹೊರಗಿನ ಪರಿಚಿತರ ಗುಡಿಸಲು ಇದೆ. ಯಾವುದೇ ಬಾಡಿಗೆ ಇಲ್ಲ. ಅಲ್ಲಿಗೆ ನಿಮ್ಮ ಸಾಮಾನು ಸಮೇತ ಕರೆದುಕೊಂಡು ಹೋಗಿ ಬಿಡುತ್ತೇನೆ. ಮುಂದೆ ಆ ದೇವರ ಇಚ್ಚೆ ಏನಿದೆಯೋ‌ ಹಾಗೆಯೇ ಆಗಲಿ ಎಂದು ಅಮ್ಮನನ್ನು ಒಪ್ಪಿಸಿ ಈ ಗುಡಿಸಲಿನಲ್ಲಿ ಬಿಟ್ಟು ಹೋದರು. ನನ್ನ ದ್ವೀತಿಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಸಹ ಬರೆಯಲು ಸಾಧ್ಯವಾಗಲ್ಲಿಲ್ಲ.

ದುರಂತ ನೋಡಿ ಕೊರೋನಾ ನಮಗೆ ಏನೂ ಮಾಡಲಿಲ್ಲ. ಆದರೆ ಲಾಕ್ ಡೌನ್ ನನ್ನ ಅಪ್ಪನನ್ನು ನುಂಗಿತು. ನಮ್ಮ ಬದುಕನ್ನು ಪ್ರಪಾತಕ್ಕೆ ತಳ್ಳಿದೆ. ಅಮ್ಮ ಮನೆಗೆಲಸದ ಹುಡುಕಾಟದಲ್ಲಿದ್ದಾರೆ. ನಾನು ಹೋಟೆಲ್ ಸಪ್ಲೆಯರ್ ಕೆಲಸದ ಹುಡುಕಾಟದಲ್ಲಿದ್ದೇನೆ. ಅದೂ ಸಿಗುತ್ತಿಲ್ಲ. ನೋಡೋಣ ಹುಟ್ಟಿಸಿದ ದೇವರು ಹುಲ್ಲನ್ನಾದರು ಮೇಯಿಸದಿರುವನೇ.

ಕೊರೋನಾಗಿಂತ ಲಾಕ್ ಡೌನ್ ಅಪಾಯಕಾರಿಯಾದ ನತದೃಷ್ಟ ಬದುಕು ನಮ್ಮದು.
ಲಾಕ್ ಡೌನ್ ಇಲ್ಲದ ಪರ್ಯಾಯ ಕ್ರಮಗಳ ಬಗ್ಗೆ ಯೋಚಿಸಿದರೆ ಉತ್ತಮ.
ವೈರಸ್‌ಗಳೊಂದಿಗೆ ಬದುಕು ಅಥವಾ ವೈರಸ್ ಭಯದ ಸಾವು ಅಥವಾ ಎರಡು ವರ್ಷಗಳ ದೀರ್ಘ ಅನುಭವದ ಆಧಾರದ ಮೇಲೆ ಹೊಸ ಮಾರ್ಗಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.