Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಚಿತ್ರಪಟಗಳ ದುರುಪಯೋಗ ಮತ್ತು ಅಸಭ್ಯ ವರ್ತನೆಗೆ ಕಡಿವಾಣ ಹೇಗೆ...?

localview news

ಬಹುಶಃ ಆಧುನಿಕ ತಂತ್ರಜ್ಞಾನದ ಬಹುದೊಡ್ಡ ಸವಾಲು ಎಂದರೆ ಆ ತಂತ್ರಜ್ಞಾನದ ನಿಯಂತ್ರಣ ಮತ್ತು ಅದರ ದುರುಪಯೋಗ ತಡೆಯುವುದೇ ಆಗಿದೆ. ತಂತ್ರಜ್ಞಾನ ತನ್ನ ಮಿತಿ ಮೀರಿ ದುಷ್ಟರ ಕೈಗೆ ದೊರೆತು ಒಳ್ಳೆಯವರಿಗೆ ಮಾರಕವಾಗುವ ಹಂತ ತಲುಪಿದೆ.

ಮುಖ್ಯವಾಗಿ ಸಮೂಹ ಸಂಪರ್ಕ ಕ್ರಾಂತಿ ಇಡೀ ವ್ಯವಸ್ಥೆಯನ್ನು ಆಕ್ರಮಿಸಿ ಕೆಲವೇ ಕ್ರಿಮಿನಲ್ ಗಳಿಂದಾಗಿ ಉಳಿದವರ ಪಾಲಿಗೆ ಕೆಟ್ಟ ಪರಿಣಾಮ ಬೀರುತ್ತಿದೆ.

ಯಾರೋ‌ ಕಿರಾತಕರು ಹೆಣ್ಣು ಮಕ್ಕಳ ಫೋಟೋ ಶಾಪ್ ಎಡಿಟ್ ಮಾಡಿ ದುರುದ್ದೇಶದಿಂದ ವಿಕೃತ ರೂಪಗೊಳಿಸಿ ಸಾರ್ವಜನಿಕವಾಗಿ ಅದನ್ನು ಪ್ರಸಾರ ಮತ್ತು ಪ್ರಚಾರ ಮಾಡುತ್ತಾರೆ. ಧಾರ್ಮಿಕ ದ್ವೇಷದ ಈ ರೀತಿಯ ವೈರಲ್ ಗಳು ಇನ್ನೂ ಆತಂಕಕಾರಿ.

ಇದಕ್ಕೆ ಸಂಪೂರ್ಣ ಪರಿಹಾರ ತುಂಬಾ ಕಷ್ಟ. ಬೇರೆ ಬೇರೆ ರೀತಿಯಲ್ಲಿ ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಎಲ್ಲೋ ಕೆಲವರನ್ನು ಶಿಕ್ಷೆಗೆ ಗುರಿಪಡಿಸಬಹುದೇ ಹೊರತು ಇದಕ್ಕೆ ನಿರ್ದಿಷ್ಟ ಪರಿಹಾರ ಅಸಾಧ್ಯ.

ಆದರೆ ಪ್ರಬುದ್ಧ ಮನಸ್ಸುಗಳ ಜವಾಬ್ದಾರಿಯುತ ನಾಗರಿಕರು ಈ ರೀತಿಯ ವಿಕೃತಗಳನ್ನು ನಮ್ಮದೇ ಶೈಲಿಯಲ್ಲಿ ತಡೆಯುವ ಸಾಧ್ಯತೆಗಳ ಬಗ್ಗೆ ಒಂದು ಚಿಂತನೆ.

ಸೈಬರ್ ಅಪರಾಧಗಳಲ್ಲಿ ಹಲವಾರು ವಿಧಗಳು ತಂತ್ರಗಳು ಜನ ಸಾಮಾನ್ಯರ ಅರಿವಿಗೆ ನಿಲುಕದ ಅನೇಕ ರೀತಿಗಳಿವೆ. ಅದನ್ನು ನಿಭಾಯಿಸಲು ಸೈಬರ್ ಕ್ರೈಮ್ ಪೋಲಿಸ್ ವ್ಯವಸ್ಥೆಯೂ ಇದೆ. ಆದರೆ ಈ ಮಹಿಳಾ ಪೀಡಕ ಮನೋಭಾವ ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅದಕ್ಕೆ ಮುಖ್ಯ ಕಾರಣ ಮಹಿಳೆಯರ ಮಾನ ಅವರ ದೇಹದಲ್ಲಡಗಿದೆ ಎಂಬ ಸಮಾಜದ ಒಟ್ಟು ಮನಸ್ಥಿತಿ, ಮಹಿಳೆಯರು ಭೋಗದ ವಸ್ತು ಎಂಬ ಧಾರ್ಮಿಕ ಕಟ್ಟುಪಾಡುಗಳು.

ಹೌದು ನೇರವಾಗಿ ಹೆಣ್ಣನ್ನು ಹೀಗಳೆಯುವುದಿಲ್ಲ ಮತ್ತು ಪೂಜನೀಯ ಸ್ಥಾನವನ್ನು ಕೊಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಅದಕ್ಕೆ ವಿರುದ್ಧ ನಡವಳಿಕೆಗಳನ್ನು ಕಾಣಬಹುದು. ತಾಯಿ ತಂಗಿ ಅಕ್ಕ ಹೆಂಡತಿ ಎಂಬ ಸಂಬಂಧಗಳು ಅತಿಹೆಚ್ಚು ಭಾವುಕತೆಯನ್ನು ಸೃಷ್ಟಿಸುತ್ತದೆ. ಅದು ಕೇವಲ ಒಡಹುಟ್ಟಿದವರಿಗೆ ಮಾತ್ರ ಎಂಬುದು ಆಚರಣೆಯಲ್ಲಿದೆ. ಇತರರನ್ನು ಸಾಮಾನ್ಯವಾಗಿ ಬೇರೆ ರೀತಿಯಲ್ಲಿ ನೋಡುವುದು ಇದ್ದೇ ಇದೆ.

ಮಹಿಳೆ ಎಂಬ ಪರಿಕಲ್ಪನೆಯನ್ನು ಬದಲಾಯಿಸುವ ಸಾಧ್ಯತೆ ಇದೆಯೇ.
ಗಹಗಹಿಸಿ ನಗುತ್ತದೆ ಈ ಆತ್ಮವಂಚಕ ಸಮಾಜ. ಸ್ವಲ್ಪ ದುಡ್ಡು ಹಣ ಅಧಿಕಾರ ಅವಕಾಶ ಸನ್ನಿವೇಶ ಅಸಹಾಯಕತೆ ಸಿಕ್ಕರೆ ಸಾಕು ಬಹುತೇಕ ಎಲ್ಲಾ ಧರ್ಮದ ಧರ್ಮಾಧಿಕಾರಿಗಳಿಂದ ಪ್ರಾರಂಭಿಸಿ ಎಷ್ಟೇ ವಿದ್ಯಾವಂತ ಬುದ್ದಿವಂತ ದೊಡ್ಡ ಸಣ್ಣ ಅಧಿಕಾರಿ ಯಾರೇ ಇರಲಿ ಹೆಣ್ಣನ್ನು ಉಪಯೋಗಿಸಿಕೊಳ್ಳುವ ಮನಸ್ಥಿತಿ ಇರುವಾಗ ಇದು ಅಸಾಧ್ಯ ಎನಿಸುತ್ತದೆ. ಆದರೆ ಒಂದು ನಾಗರಿಕ ಸಮಾಜ ನಿರ್ಮಾಣವಾಗಲು ಇದು ಅತಿ ಅವಶ್ಯಕ. ಇಲ್ಲದಿದ್ದರೆ ಹೆಣ್ಣಿನ ಶೋಷಣೆ ನಿರಂತರ.

ಈ ರೀತಿಯ ಅಪರಾಧಗಳಲ್ಲಿ ಅಪರಾಧಿಗಳನ್ನು ದೂಷಿಸಬೇಕೆ ಹೊರತು ಹೆಣ್ಣನ್ನು ಅಥವಾ ಆಕೆಯ ಅಜಾಗರೂಕತೆ ಅಥವಾ ಆಕೆಯ ಸಾಮಾಜಿಕ ಭಾಗವಹಿಸುವಿಕೆಯನ್ನು ಅಲ್ಲ. ಯಾವುದೇ ಹೆಣ್ಣು ಈ ರೀತಿಯ ದುಷ್ಟರ ದೌರ್ಜನ್ಯಕ್ಕೆ ಒಳಗಾದಾಗ ಇಡೀ ವ್ಯವಸ್ಥೆ ತನ್ನ ಸ್ವಂತ ಮನೆಯವರು ಎಂಬಂತೆ ಅವರ ಸಹಾಯಕ್ಕೆ ನಿಲ್ಲಬೇಕು. ಆ ಹೆಣ್ಣಿನ ಬೆತ್ತಲೆ ಚಿತ್ರಗಳನ್ನು ‌ನಿರ್ಲಕ್ಷಿಸಿ ಮನುಷ್ಯ ದೇಹದ ಸಹಜ ಅಂಗಗಳು ಅದರಲ್ಲಿ ವಿಶೇಷತೆ ಏನೂ ಇಲ್ಲ ಎನ್ನುವಷ್ಟು ಪ್ರಬುದ್ದತೆ ತೋರಿಸಬೇಕು. ಪೋಲೀಸ್ ಮತ್ತು ಮಾಧ್ಯಮ ಸಹ ದೊಡ್ಡ ಜವಾಬ್ದಾರಿಯಿಂದ ವರ್ತಿಸಬೇಕು.

ಕನಿಷ್ಠ ಭಾರತೀಯ ಸಮಾಜದಲ್ಲಿ ಹೆಣ್ಣನ್ನು ದೇವತೆ ಎಂದು ಭಾವಿಸಲಾಗುತ್ತದೆ. ಅದು ಸಹ ಅತಿರೇಕ. ಹೆಣ್ಣು ಒಂದು ಮಾನವ ಸಹಜ ಪ್ರಾಣಿ ಎಂದು ಪರಿಗಣಿಸುವ ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆ ಬೇಕಾಗಿದೆ.ಹೆಣ್ಣು ಗಂಡುಗಳನ್ನು ಬೆಳೆಸುವ ಪ್ರಕ್ರಿಯೆಯಲ್ಲಿಯೇ ಇದನ್ನು ಸರಿಪಡಿಸಬೇಕಾಗಿದೆ. ಆಗ ಈ ರೀತಿಯ ಹೆಣ್ಣಿನ ಬಗೆಗಿನ ಕೀಳು ಅಭಿರುಚಿ ಕಡಿಮೆಯಾಗಬಹುದು.

ಹೆಣ್ಣು ಮಕ್ಕಳು ಕೂಡ ಅನವಶ್ಯಕ ಸೌಂದರ್ಯ ಪ್ರಜ್ಞೆಯಿಂದ ಹೊರಬರಬೇಕಾಗಿದೆ.
ನಿನ್ನ ಸೌಂದರ್ಯವನ್ನು ಪ್ರಕೃತಿಯ ಸೊಬಗಿಗೆ ಹೋಲಿಸುತ್ತಾರೆ,
ನಿನ್ನ ಮುಖವನ್ನು ಅರಳಿದ ಕಮಲಕ್ಕೆ ಹೋಲಿಸುತ್ತಾರೆ,
ನಿನ್ನ ಹಲ್ಲುಗಳು ದಾಳಿಂಬೆ ಹಣ್ಣಿನಂತಿವೆ ಎನ್ನುತ್ತಾರೆ,
ನಿನ್ನ ತುಟಿಗಳು ಹವಳದಂತಿವೆ ಎನ್ನುತ್ತಾರೆ,
ನಿನ್ನ ಕೆನ್ನೆಗಳು ಸೇಬಿನಂತಿವೆ ಎನ್ನುತ್ತಾರೆ,
ನಿನ್ನ ನಗುವು ಹೂವಿಗಿಂತ ಚೆಂದ ಎನ್ನುತ್ತಾರೆ,
ನಿನ್ನ ಮಾತೇ ಸಂಗೀತ ಎಂದು ವರ್ಣಿಸುತ್ತಾರೆ,
ನಿನ್ನ ನಡಿಗೆ ಹಂಸ ಪಕ್ಷಿಗಿಂತ ಸೊಗಸಾಗಿದೆ ಎಂದು ಬಣ್ಣಿಸುತ್ತಾರೆ,
ನಿನ್ನ ಬಣ್ಣವನ್ನು ಹಾಲು ಬಿಳುಪಿಗೆ ಹೋಲಿಸುತ್ತಾರೆ,
ನಿನ್ನನ್ನು ಸೌಂದರ್ಯ ದೇವತೆ ಎನ್ನುತ್ತಾರೆ,
ಏಕೆ ಗೊತ್ತೆ,
ನಿನ್ನನ್ನು ಭೋಗದ ವಸ್ತುವಾಗಿ ಮಾಡಿಕೊಳ್ಳಲು,
ನೀನು ಕೂಡ ಸುಲಭವಾಗಿ ಆ ಭ್ರಮೆಗೆ ಒಳಗಾಗುವೆ,
ಅಯ್ಯೋ ಹುಚ್ಚು ಹುಡುಗಿ,
ಆ ಭ್ರಮೆ ಬೇಡ,
ಬೆಳಕಿನ ಆಕರ್ಷಣೆಗೆ ಒಳಗಾಗುವ ಪತಂಗವಾಗ ಬೇಡ,
ನೀನು ಕೂಡ ನನ್ನಂತೆ ರಕ್ತ, ಮೂಳೆ, ಮಾಂಸ, ಚರ್ಮದ ಹೊದಿಕೆ,
ಮನಸ್ಸು, ಭಾವನೆಗಳ ಸಹಜ ಜೀವ,
ನೋಡುವವರ ಕಣ್ಣಲ್ಲಿ ಸೌಂದರ್ಯ ಅಡಗಿದೆ ಎನ್ನುತ್ತಾರೆ,
ಸೌಂದರ್ಯ ಕಣ್ಣಲ್ಲಿ, ಮನಸ್ಸಿನಲ್ಲಿ, ದೇಹದಲ್ಲಿ, ಭಾವನೆಗಳಲ್ಲಿ, ಎಲ್ಲಿಯೂ ಅಡಗಿಲ್ಲ,
ಅದು ಇಲ್ಲವೇ ಇಲ್ಲ, ಅದೊಂದು ಭ್ರಮೆ,ಅದೊಂದು ಮಾನಸಿಕ ಸ್ಥಿತಿ,
ನೀನು ಮಾತ್ರ ನಿಜ,
ಹೆಣ್ಣು ಗಂಡು ಪ್ರಕೃತಿಯ ಸಹಜ ಸೃಷ್ಟಿ,ಯಾರೂ ಮೇಲಲ್ಲ - ಯಾರೂ ಕೀಳಲ್ಲ.
ಈ ಜನ ನಿನ್ನನ್ನು ನಿಯಂತ್ರಿಸಲು ಹೆಣೆದಿರುವ ಬಲೆ.

ಆದ್ದರಿಂದ ಹೆಣ್ಣು ಮಕ್ಕಳ ಫೋಟೋವನ್ನು ದುರುಪಯೋಗ ಪಡಿಸಿಕೊಳ್ಳುವ ಜನರನ್ನು ಪೋಲೀಸರು ಶಿಕ್ಷಿಸಲಿ. ಆದರೆ ಸಮಾಜ ಆ ಫೋಟೋಗಳನ್ನೇ ನಿರ್ಲಕ್ಷಿಸಿ ಅದು ಅಪರಾಧಿಗಳ ವಿಕೃತ ಮನಸ್ಸು ಎಂದು ನಿರ್ಲಕ್ಷಿಸಿ ಹೆಚ್ಚಿನ ಮಾನ್ಯತೆ ಕೊಡದೆ ಸಹಜವಾಗಿ ಸ್ವೀಕರಿಸಿದರೆ, ಯಾವುದೇ ಹೆಣ್ಣಿನ ಬೆತ್ತಲೆ ಚಿತ್ರಗಳಲ್ಲಿ ತನ್ನ ತಾಯಿ ತಂಗಿ ಅಕ್ಕ ಹೆಂಡತಿಯೂ ಹೆಣ್ಣೇ ಅಲ್ಲವೇ ಎಂದು ಕಲ್ಪಿಸಿಕೊಂಡರೆ, ಹೆಣ್ಣಿನ ಅಂಗಗಳು ಪ್ರಕೃತಿಯ ಸಹಜ ಸೃಷ್ಟಿ ಎಂದು ಭಾವಿಸಿದರೆ ಈ ಮಾನಸಿಕ ರೋಗಿಗಳು ತಾವೇ ನಾಶವಾಗುತ್ತಾರೆ.

ಆ ಪರಿಕಲ್ಪನೆ ಎಲ್ಲರಲ್ಲಿಯೂ ಮೂಡಲಿ, ಸಮಾಜ ಪ್ರಬುದ್ದತೆಯೆಡೆಗೆ ಸಾಗಲಿ,ಅಶಿಸುತ್ತಾ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.