Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನುಡಿದರೆ ಲಿಂಗ ಮೆಚ್ಚಿ ಹೌದೌದೇನಬೇಕು

localview news

ನಾನು ಜೀವಂತವಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದ್ದೇನೆ. ಇದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ 

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಮುಖ್ಯಮಂತ್ರಿಗಳನ್ನು ಕುರಿತು ಹೇಳಿದ ಮಾತುಗಳು.


ಮೋದಿಯವರ ಹೃದಯಾಂತರಾಳದ ಅನಿಸಿಕೆಯೇ.

ಮುಖ್ಯಮಂತ್ರಿಗಳಿಗೆ ಹೇಳಿದ ವ್ಯಂಗ್ಯದ ತಿವಿತವೇ.

20 ನಿಮಿಷಗಳ ಆ ಸನ್ನಿವೇಶ ಸೃಷ್ಟಿಸಿದ ಸಾವಿನ ಭಯದ ಮಾತುಗಳೇ.

ಪ್ರಧಾನಿಯಾದ ನನಗೇ ಈ ಪರಿಸ್ಥಿತಿ ಸೃಷ್ಟಿಯಾದ ಬಗ್ಗೆ ಕೋಪ ಅಸಹಾಯಕತೆಯೇ.

ತಾಳ್ಮೆ ಕಳೆದುಕೊಂಡ ಅಹಂಕಾರವೇ.

ರಾಜಕೀಯ ಲಾಭದ ಸ್ವಾರ್ಥ ನುಡಿಗಳೇ.

ಎಲ್ಲೆಡೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಮೋದಿಯವರ ಕಟ್ಟಾ ಅನುಯಾಯಿಗಳು " ಕಾಂಗ್ರೆಸ್, ಪಾಕಿಸ್ತಾನ, ಪಂಜಾಬ್ ರೈತರು ಮೋದಿಯವರನ್ನು ಕೊಲ್ಲಲು ಹಣೆದ ಸಂಚು " ಎಂದು ಅದಕ್ಕೆ ಪೂರಕವಾದ ಅಂಶಗಳನ್ನು ಹೇಳುತ್ತಿದ್ದಾರೆ.

 

ಮೋದಿಯವರ ವಿರೋಧಿಗಳು ಇದೊಂದು ಅನಿರೀಕ್ಷಿತ ಸಾಮಾನ್ಯ ಸಹಜ ಘಟನೆ. ಒಂದು ವರ್ಷಕ್ಕೂ ಹೆಚ್ಚು ದಿನ ಚಳಿ ಮಳೆ ಗಾಳಿಯಲ್ಲಿ ಹೋರಾಡಿ 700 ಕ್ಕೂ ಹೆಚ್ಚು ಜನ ಸತ್ತಿರುವಾಗ 20 ನಿಮಿಷಗಳ ಕಾಯುವಿಕೆಯನ್ನು ದೊಡ್ಡದಾಗಿ ಬಿಂಬಿಸುವುದು ಒಂದು ನಾಟಕ " ಎನ್ನುತ್ತಾರೆ.

ಹಾಗಾದರೆ ವಾಸ್ತವ ಏನು ? ಸಾಮಾನ್ಯರಾದ ನಾವು ಇದನ್ನು ಹೇಗೆ ಗ್ರಹಿಸಬಹುದು.

ಭಾರತ ಒಂದು ಪ್ರಜಾಪ್ರಭುತ್ವ ದೇಶ. ಈಗ ಇಲ್ಲಿನ ಎರಡು ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳೆಂದರೆ ಬಿಜೆಪಿ ಮತ್ತು ಕಾಂಗ್ರೆಸ್. ಕೇಂದ್ರದಲ್ಲಿ ಬಿಜೆಪಿ ಮತ್ತು ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿವೆ. ಕೆಲವೇ ತಿಂಗಳುಗಳಲ್ಲಿ ಪಂಜಾಬ್ ನಲ್ಲಿ ಚುನಾವಣೆ ನಡೆಯಲಿದೆ. ಅದರ ಪೂರ್ವ ತಯಾರಿಯಾಗಿ ಪ್ರಧಾನಿಯವರು ಪಂಜಾಬಿನ ಒಂದು ಪ್ರಾಂತ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಮತ್ತು ಒಂದು ಸಾರ್ವಜನಿಕ ಭಾಷಣದ ಕಾರ್ಯಕ್ರಮ ನಿಗದಿಯಾಗಿತ್ತು.

ಇದರ ಹಿನ್ನೆಲೆಯಲ್ಲಿ. ಇತ್ತೀಚೆಗೆ ಕೇಂದ್ರ ಸರ್ಕಾರ ರೈತರಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಜಾರಿಗೊಳಿಸಿತ್ತು. ಅದನ್ನು ವಿರೋಧಿಸಿ ಬಹುಮುಖ್ಯವಾಗಿ ಹರಿಯಾಣ ಮತ್ತು ಪಂಜಾಬ್ ರೈತ ಸಮುದಾಯ ದೆಹಲಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಸತ್ಯಾಗ್ರಹ ಮಾಡಿ ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ರೈತರ ಗೆಲುವು ಮೋದಿಯವರ ಸೋಲು ಎಂದು ಸಾಮಾನ್ಯ ಭಾಷೆಯಲ್ಲಿ ಜನರ ಅಭಿಪ್ರಾಯವಾಗಿತ್ತು.

ಇಂಥಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಮತ್ತು ಇದಕ್ಕೆ ಹಲವಾರು ಬಣ್ಣಗಳನ್ನು ಅವರವರ ನೆಲೆಯಲ್ಲಿ ಬಳಿಯುತ್ತಿದ್ದಾರೆ.

ಒಮ್ಮೆ ಅನುಮಾನ ಅಸಮಾಧಾನ ಮೂಡಿದ ಮೇಲೆ ಅಲ್ಲಿ ಸತ್ಯದ ಹುಡುಕಾಟಕ್ಕೆ ಅವಕಾಶವೇ ಇರುವುದಿಲ್ಲ. ಈ ಮಾಧ್ಯಮ ಕ್ರಾಂತಿಯ ಸಮಯದಲ್ಲಿ ತಕ್ಷಣದ ಪ್ರತಿಕ್ರಿಯೆಗಳೇ ಹೆಚ್ಚು ಮಹತ್ವ ಪಡೆಯುತ್ತವೆ.

ಭಾರತದಂತ ದೇಶದಲ್ಲಿ ಪ್ರಧಾನಿಯಂತ ಅತ್ಯುನ್ನತ ಸ್ಥಾನದಲ್ಲಿ ಯಾರೇ ಇರಲಿ ಅವರ ಜೀವ ಪ್ರತಿಕ್ಷಣ ಅಪಾಯದಲ್ಲಿ ಇರುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಅದರಲ್ಲೂ ಮೋದಿಯವರಂತ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯ ಮೇಲೆ ತೂಗುಕತ್ತಿ ಸದಾ ಇರುತ್ತದೆ. ಜೊತೆಗೆ ಅದಕ್ಕೆ ಬೇಕಾದ ರಕ್ಷಣಾತ್ಮಕ ವ್ಯೂಹವೂ ಅಷ್ಟೇ ಪ್ರಬಲವಾಗಿರುತ್ತದೆ.

ಆ ದೃಷ್ಟಿಯಿಂದ ಪಂಜಾಬಿನ ಈ ನಿರ್ದಿಷ್ಟ ಘಟನೆ.

ಪಂಜಾಬ್ ಜನರಿಗೆ ರೈತ ಮಸೂದೆಗಳ ಕಾರಣ ನರೇಂದ್ರ ಮೋದಿಯವರ ಬಗ್ಗೆ ಅಸಮಾಧಾನ ಇರುವುದು ವಾಸ್ತವ.

ಇಂತಹ ಸಂದರ್ಭದಲ್ಲಿ ಅವರು ಪಂಜಾಬ್ ಪ್ರವೇಶ ರಕ್ಷಣಾ ದೃಷ್ಟಿಯಿಂದ ಅಷ್ಟು ಉಚಿತವಲ್ಲ.

ಆದರೂ ಒಬ್ಬ ಪ್ರಧಾನಿ ದೇಶದ ಯಾವುದೇ ಭಾಗದಲ್ಲಿ ಸಂಚರಿಸುವ ಸ್ವಾತಂತ್ರ್ಯ ಇರುತ್ತದೆ ಮತ್ತು ಇರಲೇಬೇಕು.

ರಾಜ್ಯ ಸರ್ಕಾರ ಸಹ ಅವರ ರಕ್ಷಣೆಯ ಜವಾಬ್ದಾರಿ ಹೊಂದಿರುತ್ತದೆ. ಈ ನಿರ್ದಿಷ್ಟ ಘಟನೆಯಲ್ಲಿ ದಿಡೀರನೆ 200 ಕಿಲೋಮೀಟರ್ ಗಳಷ್ಟು ರಸ್ತೆಯ ಮುಖಾಂತರ ಪ್ರಯಾಣಿಸುವ ರಿಸ್ಕ್ ತೆಗೆದುಕೊಳ್ಳಲಾಗುತ್ತದೆ. ಮೋದಿಯವರ ಭದ್ರತೆಯವರ ಒಂದು ಸಣ್ಣ ನಿರ್ಲಕ್ಷ ಇಲ್ಲಿ ಕಾಣಬರುತ್ತದೆ. ಕನಿಷ್ಠ ಪಂಜಾಬ್ ಪೋಲೀಸ್ ಮುಖ್ಯಸ್ಥರು ಇದನ್ನು ನಿರಾಕರಿಸಬಹುದಿತ್ತು ಆದರೆ ಅವರು ಅನುಮತಿ ನೀಡುತ್ತಾರೆ.

ಈ ಮಾಹಿತಿ ತಿಳಿದೋ/ತಿಳಿಸಿಯೋ ರೈತರು ಒಂದು ನಿರ್ಧಿಷ್ಟ ಸ್ಥಳದಲ್ಲಿ ಈ ಸಮಯ ಉಪಯೋಗಿಸಿಕೊಂಡು ದಿಢೀರನೆ ರಸ್ತೆ ತಡೆ ನಡೆಸುತ್ತಾರೆ. ಆಗ ಮೋದಿಯವರಿಗೆ ಒಂದು ಇಪ್ಪತ್ತು ನಿಮಿಷಗಳ ತಡೆ ಉಂಟಾಗುತ್ತದೆ. ತಕ್ಷಣ ಸ್ಥಳೀಯ ಪೋಲೀಸರು ಅದನ್ನು ತೆರವುಗೊಳಿಸುತ್ತಾರೆ. ಈ ನಡುವೆ ಆ ಉದ್ದೇಶಿತ ಕಾರ್ಯಕ್ರಮ ರದ್ದಾಗುತ್ತದೆ. ನಂತರ ಇದು ಒಂದು ಭಾರಿ ಸುದ್ದಿಯಾಗುತ್ತದೆ.

ಯಾವ ದೃಷ್ಟಿಯಿಂದ ನೋಡಿದರು ಈ ಪ್ರಕರಣ ಖಂಡಿತ ಹತ್ಯೆಯ ಸಂಚು ಎನಿಸುವುದಿಲ್ಲ. ಅತಿಹೆಚ್ಚು ಎಂದರೂ ಬಹುಶಃ ರೈತರ ಆಕ್ರೋಶಕ್ಕೆ ಅನುವು ಮಾಡಿಕೊಟ್ಟು ಮೋದಿಯವರಿಗೆ ಸ್ವಲ್ಪ ಅವಮಾನ ಮಾಡುವ ಉದ್ದೇಶ ಇದ್ದರೂ ಇರಬಹುದು. ಜೊತೆಗೆ ಕೇಂದ್ರ ಮತ್ತು ರಾಜ್ಯದ ಭದ್ರತಾ ಅಧಿಕಾರಿಗಳ ಸಂಪರ್ಕ ಕೊರತೆ, ಉದಾಸೀನ, ಅಹಂಮಿಕೆ ಸ್ವಲ್ಪ ಕಾರಣ ಆಗಿರಬಹುದು. ಇದನ್ನು ಪಕ್ಷಗಳು ಮತ್ತು ಮಾಧ್ಯಮ ಅತಿರೇಕದಿಂದ ಪ್ರತಿಕ್ರಿಯಿಸಿ ಜನರಲ್ಲಿ ಗೊಂದಲ ಸೃಷ್ಟಿಸಿರುವ ಸಾಧ್ಯತೆಯೇ ಹೆಚ್ಚು.

ಆಧುನಿಕ ಭಾರತದ ಇತ್ತೀಚಿನ ರಾಜಕೀಯ ಇತಿಹಾಸ ಗಮನಿಸಿ. ಕರುಣಾನಿಧಿ - ಜಯಲಲಿತಾ, ರಾಜಶೇಖರ ರೆಡ್ಡಿ - ಚಂದ್ರ ಬಾಬು ನಾಯ್ಡು, ಮುಲಯಾಂಸಿಂಗ್ ಯಾದವ್ - ಮಾಯಾವತಿ, ಲಾಲೂ ಪ್ರಸಾದ್ ಯಾದವ್ - ನಿತೀಶ್ ಕುಮಾರ್, ಯಡಿಯೂರಪ್ಪ - ಸಿದ್ದರಾಮಯ್ಯ - ದೇವೇಗೌಡ,ಬಚಿದಂಬರಂ - ಅಮಿತ್ ಷಾ, ಅಶೋಕ್ ಗೆಹ್ಲೂಟ್ - ವಸುಂಧರ ರಾಜೇ ಸಿಂಧಿಯಾ, ಫಾರೂಕ್ ಅಬ್ದುಲ್ಲಾ - ಮುಫ್ತಿ ಮಹಮ್ಮದ್ ಸಯೀದ್, ನರೇಂದ್ರ ಮೋದಿ - ರಾಹುಲ್ ಗಾಂಧಿ, ನರೇಂದ್ರ ಮೋದಿ - ಮಮತಾ ಬ್ಯಾನರ್ಜಿ..... ಹೀಗೆ ಇನ್ನೂ ಅನೇಕ ರಾಜಕೀಯ ವಿರೋಧಿಗಳು ಇತರೆ ಎಲ್ಲಾ ಕೆಟ್ಟ ರಾಜಕೀಯ ತಂತ್ರಗಳನ್ನು ಉಪಯೋಗಿಸಿದರೂ ಕೂಡ ಕೊಲೆಯಂತ ಕೆಲಸಕ್ಕೆ ಕೈ ಹಾಕಲಿಲ್ಲ. ಕೆಳ ಹಂತದಲ್ಲಿ ಒಂದಷ್ಟು ನಡೆದಿದೆ.


ಇವರುಗಳಿಗೆ ಇದ್ದ ರಾಜಕೀಯ ದ್ವೇಷ ಸಾಮಾನ್ಯವೇ.

ಆದ್ದರಿಂದ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ ಮಾತುಗಳಲ್ಲಿ ಮತ್ತಷ್ಟು ಸಂಯಮ ಪ್ರದರ್ಶಿಸಬೇಕು. ಅನೇಕ ಹೊರ ರಾಷ್ಟ್ರಗಳು ಇದನ್ನು ಗಮನಿಸುತ್ತಿರುತ್ತವೇ. ರಾಜಕೀಯ ಲಾಭಕ್ಕಾಗಿ ಈ ರೀತಿಯ ಆರೋಪ ಅಷ್ಟು ಒಳ್ಳೆಯ ನಡೆಯಲ್ಲ.

ಹಾಗೆಯೇ ರಾಜ್ಯಗಳ ಮುಖ್ಯಮಂತ್ರಿಗಳು ದೇಶದ ಮುಖ್ಯಸ್ಥರಿಗೆ ಗೌರವ ಮತ್ತು ರಕ್ಷಣೆಯ ವಿಷಯದಲ್ಲಿ ಯಾವುದೇ ನಿರ್ಲಕ್ಷ ಮಾಡಬಾರದು. ಭಾರತದ ರಾಜಕೀಯ ಚುನಾವಣೆಯು ಮತದಾರರ ಮೇಲೆ ಅವಲಂಬಿಸಿದೆಯೇ ಹೊರತು ಕೀಳು ಮಟ್ಟದ ದ್ವೇಷ ಸಾಧನೆಯಿಂದ ಅಲ್ಲ.

ಇದು ದೇಶದ ಘನತೆಯ ವಿಷಯ. ಲಘುವಾಗಿ ತೆಗೆದುಕೊಳ್ಳಬಾರದು. ಜವಾಬ್ದಾರಿಯುತವಾದ ನಾಗರಿಕರು ಸಹ ಹೇಗೆಂದರೆ ಹಾಗೆ ಪ್ರತಿಕ್ರಿಯಿಸಬಾರದು. ಎಲ್ಲರ ಜೀವಗಳು ಮುಖ್ಯ. ನರೇಂದ್ರ ಮೋದಿ ಮತ್ತು ರೈತರನ್ನು ಸೇರಿಸಿ.


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.