Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕ್ರಾಂತಿವೀರ ಸಂಗೊಳ್ಳಿ ಉತ್ಸವ: ಸರಳ-ಸಾಂಪ್ರದಾಯಿಕ ಆಚರಣೆ

localview news

ಬೆಳಗಾವಿ: ಪ್ರಸಕ್ತ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯ ಪ್ರಕಾರ ಈ‌ ಬಾರಿ ಸಂಗೊಳ್ಳಿ ಉತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ, ವೀರಜ್ಯೋತಿಯ ಸ್ವಾಗತ ಹಾಗೂ ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಸರಳ ಮತ್ತು ಸಂಪ್ರದಾಯದ ಪ್ರಕಾರ ಉತ್ಸವ ಜರಗಿತು.

ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಸಂಪ್ರದಾಯದ ಪ್ರಕಾರ ಪ್ರಾತಃಕಾಲ ಸ್ಥಳೀಯ ಸ್ಚಾಮೀಜಿ ಹಾಗೂ ಅರ್ಚಕರು ಪೂಜೆಯನ್ನು ಸಲ್ಲಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳವಾದ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಿಂದ ಆಗಮಿಸಿದ ವೀರಜ್ಯೋತಿಯನ್ನು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ನಂತರ ನಂದಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಗ್ರಾಮದ ಹಿರಿಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಪ್ರತಿ ವರ್ಷ ಸಂಗೊಳ್ಳಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು.

ಈ ಬಾರಿ ಕೋವಿಡ್ ಇರುವುದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ಸರಳ ರೀತಿಯಲ್ಲಿ ಆಚರಿಸಲಾಯಿತು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮ ಯೋಧ ಕೈಲಾಸನಾಥ್ ಮಾಲ್ಬನ್ನವರ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಇದಕ್ಕೂ‌ಮುಂಚೆ ಸಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಮಹಾಂತೇಶ ಕೌಜಲಗಿ ಹಾಗೂ ಜಿಲ್ಲಾಧಿಕಾರಿ ಹಿರೇಮಠ ಅವರು ಉದ್ಘಾಟಿಸಿದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.