Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಭಾರತ ಸ್ವಾತಂತ್ರ್ಯದ ಗಂಗೆ ಹರಿದದ್ದು ಎರಡೂವರೆ ಸಾವಿರ ವರ್ಷಗಳಿಂದ

localview news

ಬೆಳಗಾವಿ: ಸಂಗೊಳ್ಳಿ ರಾಯಣ್ಣನಂತಹ ಹಲವು ವೀರ ಕಿಡಿಗಳನ್ನು ಸ್ವಾತಂತ್ರ್ಯ ಗಂಗೆಯ ಚರಿತ್ರೆಯ ಸಂದರ್ಭದಲ್ಲಿ ದೇಶವು ಕಂಡಿದೆ. ಯುವಶಕ್ತಿಯ ಸ್ಫೂರ್ತಿ, ಸಾಹಸ, ಸ್ವಾಭಿಮಾನ, ರಾಷ್ಟ್ರೀಯತೆಗೆ ಮಾದರಿಯಾದವರ ವ್ಯಕ್ತಿತ್ವಗಳು ಇಂದಿನ ಯುವಪೀಳಿಗೆಗೆ ಆದರ್ಶವಾಗಿವೆ. ಭಗತ್ ಸಿಂಗ್, ಚಂದ್ರಶೇಖರ ಅಜಾದ್, ಖುದಿರಾಮ್ ಬೋಸ್, ಸುಭಾಷ್ ಚಂದ್ರಬೋಸ್, ಸುಖದೇವ್ ಮುಂತಾದವರು ರಾಯಣ್ಣನಂತಹ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆದರು.

ಈ ದೇಶ ಇಂದು ಸ್ವಾತಂತ್ರ್ಯ ದ ಅಮೃತದ ಮಹೋತ್ಸವವನ್ನು ಆಚರಿಸಿಕಕೊಳ್ಳುವ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ. ನಮ್ಮ ದೇಶದ ಯುವಪೀಳಿಗೆಗೆ ಇದು ತಿಳಿದಿರಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಪ್ರೊ .ಸಾಬಣ್ಣ ತಳವಾರ ಅಭಿಪ್ರಾಯ ಪಟ್ಟರು. ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮದಿನದ ಸಂಸ್ಮರಣೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ಧ ಶ್ರೀ ಶಿರೀಪ ಜೋಶಿ ಅವರು ಮಾತನಾಡಿ ಕಿತ್ತೂರಿನ ಸಂಸ್ಥಾನಕ್ಕೆ ಇರುವ ಬದ್ಧತೆ, ರಾಜನಿಷ್ಠೆ, ತಾಯಿ ನೆಲಕ್ಕಾಗಿ ಶ್ರಮಿಸಿದ ದೀರೋದಾತ್ತನಡೆ ಇವರದು. ಕಿತ್ತೂರು ಸಂಸ್ಥಾನದ ಸೈನ್ಯದ ನಾಯಕನಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಬ್ರಿಟಿಷರ ಹುಟ್ಟಡಗಿಸಿದ ಕಿತ್ತೂರಿನ ಕುಡಿ ಸಂಗೊಳ್ಳಿ ರಾಯಣ್ಣ. ಕನ್ನಡ ತಾಯ ನೆಲದ ಬಂಧನದ ಬಿಡುಗಡೆಗಾಗಿ ಹಗಲಿರುಳು ಹೋರಾಡಿ ಧೀರೋತ್ತಮನೆನಿಸಿದ್ದಾನೆ. ಅವರ ಯುದ್ಧ ತಂತ್ರ ಬ್ರಿಟಿಷರ ನಿದ್ದೆಗೆಡಿಸಿತ್ತು.

ಸಂಗೊಳ್ಳಿ ರಾಯಣ್ಣನ ವಿರೋಚಿತ ಹೋರಾಟದ ಕಥೆಗಳು ಇಂದು ಜನಪದರ ಬಾಯಲ್ಲಿ ಇಂದು ಜೀವಂತವಾಗಿವೆ. ನಂದಗಡದಿಂದ ಕಿತ್ತೂರಿಗೆ ಹೋಗುವ ಮಾರ್ಗದ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣನ ಸಮಾಧಿ ಇದೆ. ಅವರ ವೀರ ಮರಣ ನಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್ ಎಂ. ಗಂಗಾಧರಯ್ಯ ಅವರು ಮಾತನಾಡಿ ಭಾರತ ಭೂಮಿಯಲ್ಲಿ ಅನೇಕ ವೀರರುಗಳು ಆಗಿಹೋಗಿದ್ದಾರೆ. ಆ ಕಾರಣದಿಂದಲೇ ದೇಶದ ಉದ್ದಗಲಕ್ಕೂ ವೀರಗಲ್ಲುಗಳನ್ನು ಕಾಣಬಹುದಾಗಿದೆ. ಪ್ರಾಚೀನ ಕಾಲದಿಂದಲೂ ವೀರ ಮೌಲ್ಯದ ಪ್ರತಿಪಾದನೆಯನ್ನು ಭಾರತದಲ್ಲಿ ಕಾಣುತ್ತೇವೆ. ಉದಾತ್ತ ಉದ್ದೇಶಗಳಿಗಾಗಿ ವೀರರು ಪ್ರಾಣದ ಹಂಗುತೊರೆದು ಹೋರಾಡಿದ್ದಾರೆ. ಸಂಗೊಳ್ಳಿ ರಾಯಣ್ಣನ ಸ್ಮರಣೆಯ ಈ ಸಂದರ್ಭದಲ್ಲಿ ಹೀಗೆ ಉದಾತ್ತ ಉದ್ದೇಶಗಳಿಗೆ ತಮ್ಮ ಪ್ರಾಣಾರ್ಪಣೆ ಮಾಡಿಕೊಂಡ ವೀರರ ಸ್ಮರಣೆಯೇ ಇಂದಿನ ಕಾರ್ಯಕ್ರಮವಾಗಿದೆ ಎಂದರು.ಅವರು ಕನ್ನಡ ನೆಲದ ಇತಿಹಾಸ ಪುನರ್ ಮೌಲ್ಯೀಕರಣವಾಗಬೇಕು. ಸ್ವಾತಂತ್ರ್ಯ ಸಂಗ್ರಾಮದ ದೀರ ಕಥೆಗಳನ್ನು ಈ ಅಮೃತ ಮಹೋತ್ಸವ ನಮಗೆ ನೆನಪಿಸಿ ಕೊಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ. ಶೋಭಾ ನಾಯಕ ಪ್ರಾಸ್ತಾವಿಕ ಹಾಗೂ ಸ್ವಾಗತ ಮಾಡಿದರು. ಡಾ. ಗಜಾನನ ನಾಯಕ, ಡಾ. ಮಹೇಶ್ ಗಾಜಪ್ಪನವರ, ಡಾ. ಡಾ. ಅಶೋಕ್ ಮುದೋಳ, ಸಂಶೋಧನಾರ್ಥಿಗಳು ಹಾಗೂ ಎಂ ಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.