Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೊಟ್ಯಂತರ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ:ವಿಧಾನಸಭೆ ಅಧಿವೇಶನ ಮುಗಿಸಿ ಬಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಕ್ಷೇತ್ರದ ವಿವಿಧೆಡೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಾತ್ ನೀಡಿದರು.

 

ಕ್ಷೇತ್ರದಲ್ಲಿ ಅಭಿವೃದ್ಧಿ ನಿರಂತರವಾಗಿದ್ದು, ನಾನು ಅಧಿವೇಶನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸಹ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಯಾವುದೇ ಕಾರಣದಿಂದ ಕೆಲಸ ನಿಲ್ಲಬಾರದೆನ್ನುವ ಉದ್ದೇಶದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ಪೂಜೆಯ ಸಂದರ್ಭದಲ್ಲಿ ನಾನು ಸ್ವತಃ ತೆರಳಲು ಸಾಧ್ಯವಾಗದಿದ್ದರೂ ಸಾಧ್ಯವಾದಾಗ ಸ್ಥಳಕ್ಕೆ ತೆರಳಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಕಾಮಗಾರಿ ಎಲ್ಲಿಯೂ ಗುಣಮಟ್ಟ ಕಳೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಜೊತೆಗೆ ವಿಳಂಬವಾಗಲು ಬಿಡುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.

ಶಿಂದೊಳ್ಳಿಯಲ್ಲಿ 75 ಲಕ್ಷ ರೂ,ಗಳ ವೆಚ್ಚ:

ಕ್ಷೇತ್ರದ ಶಿಂದೊಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 50 ಲಕ್ಷ ರೂ, ಮಂಜೂರಾಗಿದ್ದು ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಇಂಡಾಲ ನಗರದ ರಸ್ತೆಯ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 25 ಲಕ್ಷ ರೂ,ಗಳು ಬಿಡುಗಡೆಯಾಗಿದ್ದು, ಭೂಮಿ ಪೂಜೆಯನ್ನು ನೆರವೇರಿಸುವ ಮೂಲಕ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.

ನಿಲಜಿ ರಸ್ತೆ ಭೂಮಿ ಪೂಜೆ:

ನಿಲಜಿಯಲ್ಲಿ ನೂತನ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಸಲುವಾಗಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 30 ಲಕ್ಷ ರೂ, ಬಿಡುಗಡೆಯಾಗಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನಡೆಸಿ ಚಾಲನೆ ನೀಡಿದರು.

ಪಂತ ಬಾಳೇಕುಂದ್ರಿಗೆ 69.50 ಲಕ್ಷ ರೂ,:

ಪಂತ ಬಾಳೇಕುಂದ್ರಿಯ ಪಂತ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 69.50 ಲಕ್ಷ ರೂ, ಮಂಜೂರಾಗಿವೆ. ಈ ರಸ್ತೆಗೆ ಸಹ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕ್ಷೇತ್ರದ ಹಂಗರಗಾ ಗ್ರಾಮದಲ್ಲಿ ಶಾಸಕರ ನಿಧಿಯ ವತಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣದ ಸಲುವಾಗಿ 10 ಲಕ್ಷ ರೂ, ಮಂಜೂರಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿ ಭೂಮಿ ಪೂಜೆಯನ್ನು ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.