Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಖಾಟೇವಾಡಿ ಗಂಗೂಬಾಯಿಯ ಸತ್ಯ ಕಥೆ

localview news

ಬೆಳಗಾವಿ: 'ಗಂಗೂಬಾಯಿ ಖಾಟೇವಾಡಿ' ಈ ಹೆಸರನ್ನು ಬಹುತೇಕರು ಕೇಳಿರಲಿಕ್ಕಿಲ್ಲ ಹೀಗಾಗಿ ಗಂಗೂಬಾಯಿ ಖಾಟೇವಾಡಿ ಮಧ್ಯಾಹ್ನದಿಂದಲೂ ನನ್ನನ್ನು ತುಂಬ ಕಾಡುತ್ತಿರುವ ಒಂದು ಪಾತ್ರ.

ಯಾರೀಕೆ? ಗುಜರಾತ ಮೂಲದ ಶ್ರೀಮಂತ ವ್ಯಾಪಾರ ವೃತ್ತಿಯ ಮನೆತನದಲ್ಲಿ 1931 ರಲ್ಲಿ ಹುಟ್ಟಿದ ಒಂದು ಹೆಣ್ಣು ಮಗುವಿಗೆ ಗಂಗಾ ಅನ್ನೋ ಹೆಸರಿಡಲಾಯಿತು. ಅನುಕೂಲಸ್ಥ ತಂದೆಗೆ ಮಗಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತಳನ್ನಾಗಿಸುವ ಆಸೆ ಆದರೆ ಗಂಗೂಬಾಯಿ ಇದಕ್ಕೆ ತದ್ವಿರುದ್ದ. ಆ ಕಾಲದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ಅಂಗಳದ ಅವರ್ ಗ್ರೀನ್ ಹಿರೋಯಿನ್ ಹೇಮಾಮಾಲಿನಿ ಗಂಗೂಬಾಯಿಯ ಮೋಸ್ಟ್ ಫೇವರಿಟ್. ಈ ಬಣ್ಣದ ಬದುಕಿನ ತಳುಕು ಬಳುಕುಗಳನ್ನು ಅರಿಯದ ಗಂಗೂಬಾಯಿ ಅವಳದೇ ಮನೆಯ ಕೂಲಿ ಕೆಲಸದವನ ಬಣ್ಣದ ಮಾತಿಗೆ ಮರುಳಾಗಿ ಸ್ನೇಹ ಪ್ರೀತಿಗೆ ತಿರುಗಿ ಕೊನೆಯಲ್ಲಿ ಆತನದೇ ಜತೆಯಲ್ಲಿ ಓಡಿಹೋಗುವ ಮೂಲಕ ಬಣ್ಣದ ಕನಸನ್ನು ಹೊತ್ತು ಸಾಗಿದ ಗಂಗೂಬಾಯಿ ಬದುಕಿನ ಬಂಡಿ ಬಂದು ನಿಂತಿದ್ದು ಮುಂಬೈ ಎಂಬ ಮಾಯಾನಗರಿಯಲ್ಲಿ.

ಮುಂದೇನಾಯ್ತು?

ಪ್ರೀತಿಸಿದ ಹುಡುಗ ಬಣ್ಣದ ಕನಸು ನನಸಾಗುವ ಹುಚ್ಚು ಹಂಬಲ ಆ ಕಾಲದಲ್ಲಿ ಅಪ್ಪನ ಜೋಬಿನಿಂದ ಕದ್ದು ತಂದ ಐನೂರು ರೂಪಾಯಿ ಮುಂಬೈನ ಗಲ್ಲಿ ಗಲ್ಲಿಗಳ ಓಡಾಟ ಐಷಾರಾಮಿ ಹೋಟೆಲ್ಲುಗಳಲ್ಲಿ ಪ್ರೀತಿಸಿದ ಹುಡುಗನೊಂದಿಗೆ ತುಂಟಾಟ ಪ್ರೀತಿ ಪ್ರೇಮ ಪ್ರಣಯ ಇತ್ಯಾದಿ.

ತಂದಿದ್ದ ಹಣ ಖರ್ಚಾಗುವ ಹೊತ್ತಿಗೆ ಬೇರೆ ಮನೆ ಮಾಡುವ ಸುಳ್ಳು ಆಸೆ ತೋರಿಸಿದ ಪ್ರಿಯಕರ ಸಂಬಂಧಿಯೋರ್ವಳ ನೆರವಿನಿಂದ ಇವಳನ್ನು ಅದೇ ಐನೂರರ ನೋಟಿಗೆ ಮಾರಿದ್ದು ಇವಳಿಗೆ ಗೊತ್ತಾಗೋ ಹೊತ್ತಿಗೆ ಗಂಗೂಬಾಯಿ ಕಂಡ ಎಲ್ಲ ಕನಸುಗಳು ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿತ್ತು. ಹದಿನಾರರ ಪ್ರಾಯ ಅಪ್ಪಟ ದೇಹ ಸೌಂದರ್ಯ ಉಂಡು ಬಿಟ್ಟ ಎಲೆಯಂತೆ ಬಿಸಾಕಿದ ಪ್ರಿಯಕರ ಸಂಬಂಧಿ ಅನ್ನೋ ಶತ್ರು ಒತ್ತಾಯವಾಗಿ ಎಳೆದು ತಂದು ನಿಲ್ಲಿಸಿದ್ದು ಸೂಳೆಲೋಕದ ಮಾಂತ್ರಿಕ ಗಲ್ಲಿ ಕಾಮಾಟಿಪುರದಲ್ಲಿ.

ದಿನಕ್ಕೊಬ್ಬರೇ ಇಬ್ಬರೇ ಹಸಿರು ಬಂದ ಕಾಮುಕರಿಗೆಲ್ಲ ಗಂಗೂಬಾಯಿ ಆಹಾರವಾಗುತ್ತಿದ್ದಳು ಅವಳ ಆರ್ತನಾದವನ್ನು ಕೇಳುವ ಯಾವೊಂದು ಕಿವಿಯೂ ಆ ನಗರದಲ್ಲಿರಲಿಲ್ಲ. ಶೌಖತ್ ಅಲಿ ಅನ್ನೋ ಆ ಪ್ರದೇಶದ ರೌಡಿ ಇವಳ ದೇಹಸೌಂದರ್ಯಕ್ಕೆ ಬೆರಗಾಗಿ ಅಪ್ಪಟ ಮಾಂಸದ ಮುದ್ದೆಯಂತೆ ಇವಳನ್ನು ಉಪಭೋಗಿಸಿ ಕಿಲುಬು ಕಾಸನ್ನೂ ಕೊಡದೇ ಅತ್ಯಾಚಾರ ಮಾಡಿದ್ದ, ಆ ದಿನದ ಅವಳನುಭವಿಸಿದ ನೋವಿಗೆ ಅವಳಲ್ಲಿ ಎರಡೇ ಆಯ್ಕೆ ಒಂದು ಅಲ್ಲೇ ಇದ್ದು ಆ ನರಕ ಯಾತನೆಯನ್ನು ಅನುಭವಿಸಿ ಆಸ್ವಾದಿಸುವುದು, ಎರಡನೆಯದು ಅದನ್ನು ವಿರೋಧಿಸಿ ಅಲ್ಲಿಂದ ಮುಕ್ತಳಾಗೋದು. ವಾರದ ನಂತರ ಮತ್ತದೇ ರೌಡಿ ಗಂಗೂಬಾಯಿ ಬಾಗಿಲು ಬಡಿದ ಮತ್ತದೇ ಹಿಂಸೆ ಅವಳ ಆ ದಿನದ ನರಕಕ್ಕೆ ಆಸ್ಪತ್ರೆಯೂ ಬೆಚ್ಚಿ ಬಿದ್ದಿತ್ತು.

ಅಣ್ಣನಾದ ಆಪ್ತ ಕರೀಂಲಾಲ್ ! ಕರೀಂಲಾಲ್ ಇಡೀ ಮುಂಬೈನ ಕುಖ್ಯಾತ ರೌಡಿ. ಶೌಖತ್ ಅಲಿ ಆತನ ಚೇಲಾಗಳಲ್ಲಿ ಓರ್ವ. ಗಂಗೂಬಾಯಿಕರೀಂಲಾಲ್ ಎದುರು ನಿಂತು ಅವಳ ಆ ವೇದನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಕಲ್ಲು ಮನಸ್ಸಿನ ರೌಡಿಯ ಕಣ್ಣಲ್ಲೂ ನೀರೂರುವಂತೆ ಮಾಡಿದ್ದು ಆ ನಂತರದಲ್ಲಿ ತನ್ನ ಸೀರೆಯ ಸೆರಗನ್ನು ಹರಿದು ಆತನ ಕೈಗೆ ರಾಖಿಯಂತೆ ಕಟ್ಟಿ ಅಣ್ಣನ ಸ್ಥಾನದಲ್ಲಿದ್ದು ತನ್ನನ್ನು ತನ್ನ ದಂಧೆಯನ್ನು ರಕ್ಷಿಸುವಂತೆ ಬೇಡಿಕೊಳ್ಳುವ ಮೂಲಕ ಶೌಖತ್ ಅಲಿಯನ್ನು ಹಾಡುಹಗಲೇ ಕರೀಂಲಾಲ್ ನಿಂದ ಹೊಡೆದು ಬಿಸಾಕುತ್ತಾಳೆ ಅಲ್ಲದೇ ಸ್ವತಃ ಕರೀಂಲಾಲ್ ಈಕೆ ನನ್ನ ತಂಗಿಯ ಸಮಾನ ಇನ್ನು ಮೇಲೆ ಇವಳಿಗೆ ಯಾರೂ ತೊಂದರೆ ಕೊಡತಕ್ಕದ್ದಲ್ಲ ಅನ್ನೋ ಅಭಯ ಆಶೀರ್ವಾದ ಪಡೆಯುವ ಮೂಲಕ ಇಡೀ ಕಾಮಾಟಿಪುರದ ಆಡಳಿತ ಚುಕ್ಕಾಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ರೀಯಲ್ ಹೀರೋಯಿನ್. ಬಾಲಿವುಡ್ ಅಂಗಳದಲ್ಲಿ ಹಿರೋಯಿನ್ ಆಗಲು ಬಂದಾಕೆ ಕಾಮಾಟಿಪುರದ ಕ್ವೀನ್ ಹಿರೋಯಿನ್ ಆಗಿದ್ದು ಅವಳ ಬದುಕಿನ ಮಹತ್ವದ ಬದಲಾವಣೆಗಳಲ್ಲೊಂದು. ಆ ನಂತರದಲ್ಲಿ ಆಕೆ ಹಿಂತಿರುಗಿ ನೋಡಿದ್ದೇ ಇಲ್ಲ.

ಕಾಮಾಟಿಪುರದ ಪ್ರೆಸಿಡೆಂಟ್! ಹೌದು ಆಕೆ ಅಲ್ಲಿಗೆ ಬಂದಾಗ ಅಲ್ಲಿನ ವೇಶ್ಯೆಯರ ಸಂಖ್ಯೆ ಎರಡು ಸಾವಿರಕ್ಕೂ ಮಿಕ್ಕಿತ್ತು ಅಂತ ಹೇಳಲಾಗುತ್ತೇ. ಒತ್ತಾಯದ ಮೂಲಕ ಆ ದಂಧೆಗೆ ದೂಡಿದ, ಗೊತ್ತಿಲ್ಲದೇ ಮಾರಾಟಕ್ಕೊಳಗಾದ ಅಮಾಯಕ ಹೆಣ್ಣು ಮಕ್ಕಳ ಪಾಲಿನ ದೇವತೆಯಾಗಿ ಅವರ ಕಷ್ಟ ಸುಖಗಳಲ್ಲಿ ಹೆಗಲಾಗಿ ನಿಂತ ಗಂಗೂಬಾಯಿ ಅಲ್ಲಿ ನಡೆದ ಚುನಾವಣೆಯಲ್ಲಿ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದು ನಿಜಕ್ಕೂ ರೋಚಕ ಇತಿಹಾಸ.

ಪ್ರಧಾನಿ ನೆಹರೂ ಬೆವರಿಳಿಸಿದಾಕೆ! ವೇಶ್ಯಾವಾಟಿಕೆ ಅಕ್ಷಮ್ಯ ಅಪರಾಧ ಅನ್ನೋ ಕಾನೂನು ಇದ್ದಾಗ್ಯೂ ಅಲ್ಲಿನ ಅನಿವಾರ್ಯತೆಗಳ ಕಾರಣಕ್ಕೆ ಸೆರಗು ಹಾಸುವ ನೈಜತೆಯನ್ನು ಪ್ರಧಾನಿಗಳ ಗಮನಕ್ಕೂ ತರುವ ಮೂಲಕ ಸರ್ಕಾರ ವೇಶ್ಯೆಯರಿಗೂ ಸವಲತ್ತುಗಳನ್ನು ಕಲ್ಪಿಸುವಂತೆ ಮನವಿ ಮಾಡಿದಾಕೆ ಇದೇ ಗಂಗೂಬಾಯಿ. ವೇದಿಕೆಯೊಂದರಲ್ಲಿ ಮಾತನಾಡಿ ಕಾಮಾಟಿಪುರದ ಸೂಳೆಯರ ಕಷ್ಟಗಳ ಬಗ್ಗೆ ಅಲವತ್ತುಕೊಂಡ ಸಂದರ್ಭದಲ್ಲಿ ಆಗಿನ ಪ್ರಧಾನಿ ನೆಹರೂ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದು ತಪ್ಪಲ್ಲವೇ ನಿನಗೂ ಒಂದು ಒಳ್ಳೆಯ ಜೀವನ ಸಿಗಬಹುದಿತ್ತಲ್ಲ ಅನ್ನೋ ಪ್ರಧಾನಿ ಪ್ರಶ್ನೆಗೆ ನೀವು ನನ್ನನ್ನು ಪತ್ನಿಯಾಗಿ ಸ್ವೀಕರಿಸಿದರೆ ಈ ವೃತ್ತಿ ಇಂದಿನಿಂದಲೇ ಬಿಡುವೆ ಅನ್ನೋ ಉತ್ತರ ನೀಡಿ ಪ್ರಧಾನಿಯನ್ನೇ ಚಕಿತಳನ್ನಾಗಿಸಿದ ಧೀರೆ ಈ ಗಂಗೂಬಾಯಿ.

ಆ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಕಾಮಾಟಿಪುರದ ಹೆಣ್ಣುಮಕ್ಕಳಿಗೆ ಅವಶ್ಯಕ ನೆರವು ನೀಡುವಂತೆ ಆಗಿನ ಪ್ರಧಾನಿ ಸೂಚಿಸಿದ್ದರು ಅನ್ನೋದು ಗಂಗೂಬಾಯಿ ಧೈರ್ಯಕ್ಕೆ ಸಾಕ್ಷಿಯಂತಿದೆ.

ಕಾಮಾಟಿಪುರದ ಗಲ್ಲಿ ಗಲ್ಲಿಗಳಲ್ಲೂ ಪ್ರತಿಯೊಂದು ಕೊಠಡಿಯಲ್ಲೂ ಗಂಗೂಬಾಯಿ ಫೋಟೋ ಈಗಲೂ ರಾರಾಜಿಸುತ್ತಿರುವುದು ಇದೇ ಕಾರಣಕ್ಕೆ ಅನಿಸುತ್ತದೆ. ಅದೇ ಬೀದಿಯಲ್ಲಿ ಅವಳ ಮೂರ್ತಿಯನ್ನೂ ಪ್ರತಿಷ್ಠಾಪಿಸಿರುವುದು ಅನೇಕರ ಕೌತುಕಕ್ಕೆ ಕಾರಣವಾಗಿದೆ. ಬಾಲಿವುಡ್ ನಲ್ಲಿ ಹಿರೋಯಿನ್ ಆಗಲು ಬಂದ ಗಂಗೂಬಾಯಿ ಕಾಮಾಟಿಪುರದ ಕ್ವೀನ್ ಆಗಿದ್ದು ಇದೀಗ ಅವಳದೇ ನೈಜ ಕಥೆಯನ್ನಾಧರಿಸಿದ ಚಲನಚಿತ್ರ ತೆರೆಗೆ ಬಂದಿದ್ದು ನಟಿ ಅಲಿಯಾ ಭಟ್ ಗಂಗೂಬಾಯಿ ಪಾತ್ರಕ್ಕೆ ಬಣ್ಣ ಹಚ್ಚಿದರೆ ಕರೀಂಲಾಲ್ ಪಾತ್ರಕ್ಕೆ ನಟ ಸಂಜಯದತ್ ಬಣ್ಣ ಹಚ್ಚಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಸಕತ್ ಸೌಂಡ್ ಮಾಡುತ್ತಿರುವ ಗಂಗೂಬಾಯಿ ಖಾಟೇವಾಡಿ ಫಿಲ್ಮ್ ಇಷ್ಟೆಲ್ಲ ಬರೆಯೋದಕ್ಕೆ ಕಾರಣವಾಗಿದ್ದರೂ ಮೂಲ ಗಂಗೂಬಾಯಿ ಕಥೆ ಮನಸ್ಸನ್ನು ತಟ್ಟಿದ್ದು ಸುಳ್ಳಲ್ಲ. - ಸಿದ್ಧರಾಮ ಎಸ್. FB ಪೋಸ್ಟ್ ನಿಂದ