Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಗಂಭೀರ ಪರಿಗಣನೆಗೆ ಸೂಚನೆ ;ನಾಯ್ಡು

localview news

ಬೆಳಗಾವಿ : ಸರಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ನಿಯಮಾವಳಿ ಪ್ರಕಾರ ಪ್ರತಿಯೊಂದು ಸ್ಥಳದಲ್ಲಿ ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ರಚಿಸಬೇಕು. ದೌರ್ಜನ್ಯ ನಡೆದರೆ ಮೊದಲು ಸಮಿತಿಗೆ ದೂರು ಸಲ್ಲಿಸಬೇಕು. ಅಲ್ಲಿ ಬಗೆಹರಿಯದಿದ್ದರೆ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು.

ಲೈಂಗಿಕ ಕಿರುಕುಳ ನಡೆದ ಸಂದರ್ಭದಲ್ಲಿ ಮಹಿಳೆಯರು ಏನು ಮಾಡಬೇಕು ಎಂಬುದರ ಕುರಿತು ತಿಳಿವಳಿಕೆ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕಡೆಗಳಲ್ಲಿ ಆತ್ಮಹತ್ಯೆ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು.

ಮಹಿಳಾ ಕಾರ್ಮಿಕರ ಹಕ್ಕು; ಜಾಗೃತಿ ಮೂಡಿಸಲು ಸೂಚನೆ:

ಮಹಿಳಾ ಕಾರ್ಮಿಕರಿಗೆ ಇರುವ ಹಕ್ಕುಗಳ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಆಂತರಿಕ ದೂರು ನಿರ್ವಹಣಾ ಸಮಿತಿ ಸೇರಿದಂತೆ ವಿವಿಧ ಬಗೆಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಪ್ರಮೀಳಾ ನಾಯ್ಡು ಸೂಚನೆ ನೀಡಿದರು.

ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರಿಗೆ ಮಾಹಿತಿಯನ್ನು ನೀಡಬೇಕು.

ಅತ್ಯಾಚಾರಕ್ಕೆ ಒಳಗಾದ ಹಾಗೂ ಲೈಂಗಿಕ ದೌರ್ಜನ್ಯದಿಂದ ನೊಂದ ಬಾಲಕಿಯರು ಅಥವಾ ಮಕ್ಕಳಿಗೆ ಸರಕಾರದ ನಿಯಮಾವಳಿ ಪ್ರಕಾರ ನೀಡಬೇಕಾದ ಪರಿಹಾರ ಮೊತ್ತವನ್ನು ತಕ್ಷಣವೇ ನೀಡಬೇಕು. ಉಳಿದ ಮೊತ್ತವನ್ನು ಪ್ರಕರಣ ಇತ್ಯರ್ಥಗೊಂಡ ನಂತರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಮಹಿಳಾ ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಮಹಿಳಾ ವಾರ್ಡುಗಳು ಮತ್ತು ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದರು.

ಹೊರಗೆ ಬಂದು ಕೆಲಸ ಮಾಡುವ ಮಹಿಳೆಯರಿಗೆ ಅಗತ್ಯ ಸುರಕ್ಷತೆ ಸೇರಿದಂತೆ ಎಲ್ಲ ಬಗೆಯ ನೆರವು ಒದಗಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನವನ್ನು ನೀಡಿದರು.

ಪೊಲೀಸ್ ಠಾಣೆ ಮಟ್ಟದಲ್ಲಿ ಸೂಕ್ತ ನೆರವು ದೊರಕದಿದ್ದರೆ ಕೂಡಲೇ ಹಿರಿಯ ಅಧಿಕಾರಿಗಳ ಗಮನಸೆಳೆಯುವ ಕೆಲಸವನ್ನು ಮಾಡಬೇಕು. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡ ನಿರ್ದೇಶನ ನೀಡಲಾಗಿದೆ ಎಂದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಹಾಗೂ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಕಿಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಕಾನೂನು ನೆರವು ನೀಡುವ ಉದ್ಧೇಶದಿಂದ ಆರಂಭಿಸಲಾಗಿರುವ ಸಖಿ ಒನ್ ಸ್ಟಾಪ್ ಸೆಂಟರ್ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಮೀಳಾ ನಾಯ್ಡು ತಿಳಿಸಿದರು.

ಮಹಿಳೆಯರ ದೌರ್ಜನ್ಯ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಪಂದಿಸದಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಕೆಲವು ಪ್ರಕರಣಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಕೂಡ ನೆರವು ಒದಗಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಆರೋಗ್ಯ ಸಂಬಂಧಿ ಏನೇ ದೂರು ಬಂದರೆ ತಕ್ಷಣವೇ ಸ್ಪಂದಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ.

ಮಹಿಳೆಯರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ಸರಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಲಸಿಕಾಕರಣ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಇದಲ್ಲದೇ ಮಾತೃ ವಂದನಾ ಹಾಗೂ ಪೋಷಣಾ ಅಭಿಯಾನ ಕಾರ್ಯಕ್ರಮಗಳನ್ನು ಅತ್ಯುತ್ತಮ ರೀತಿಯಲ್ಲಿ ಅನುಷ್ಢಾನಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

2021-22 ನೇ ಸಾಲಿನಲ್ಲಿ ಒಟ್ಟು 136 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಸಮಾಲೋಚನೆ ಮೂಲಕ ಒಂದು ಪ್ರಕರಣಗಳು ಇತ್ಯರ್ಥಗೊಂಡಿವೆ. ಒಂದು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ ವಿವರಿಸಿದರು. ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ ಹಾಗೂ ಅತ್ಯಾಚಾರ ಸೇರಿದಂತೆ ಒಟ್ಟಾರೆ 1090 ಪ್ರಕರಣಗಳು ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿವೆ. ಇವುಗಳ ಪೈಕಿ 891 ಪ್ರಕರಣಗಳು ಇತ್ಯರ್ಥಗೊಂಡಿದ್ದು, 199 ಪ್ರಕರಣಗಳು ಬಾಕಿ ಇವೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 122 ದೂರುಗಳು ಸ್ವೀಕೃತಗೊಂಡಿದ್ದು, ಇದರಲ್ಲಿ 14 ಎಫ್.ಐ.ಆರ್. ದಾಖಲಾಗಿವೆ ಎಂದು ವರವಟ್ಟಿ ಮಾಹಿತಿಯನ್ನು ನೀಡಿದರು.

ಉಪ ಪೊಲೀಸ್ ಆಯುಕ್ತರಾದ ಸ್ನೇಹಾ ಪಿ.ವಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು, ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆ ಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.