Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಜೆಪಿ ಅಧಿಕಾರದಲ್ಲಿ ಎಲ್ಲವೂ ಅರ್ಧ. ಮನಬಂದಂತೆ ಬಜೆಟ್ ಮಂಡನೆ ಮಾಡಲಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ

localview news

ಬೆಳಗಾವಿ : ಹಿಂದೂ ದೇವಸ್ಥಾನಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಹಿಡನ್ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ದೇಶ.

ವಿವಿಧ ಜಾತಿ, ಧರ್ಮ ಕೂಡಿದ ದೇಶ. ಎಲ್ಲರೊಂದಿಗೂ ಸಂಬಂಧ ಇರುತ್ತದೆ. ಮುಸ್ಲಿಮ್ರಿಗೆ ವ್ಯಾಪಾರ ನಿರ್ಬಂಧಿಸುವುದು ಅಸಾಧ್ಯ. ಎಲ್ಲ ಸಮುದಾಯಗಳು ಒಂದಾಗಿ ಬಾಳುವ ಇತಿಹಾಸ ಮೊದಲಿನಿಂದಲೂ ಇದೆ ಎಂದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿವಾದ ಸೃಷ್ಟಿಸುವಂತಹ ಸೂಕ್ಷ್ಮ ವಿಚಾರಗಳನ್ನೇ ತನ್ನ ಅಸ್ತ್ರವನ್ನಾಗಿಸಿದೆ. ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಹರ್ಷ ಹತ್ಯೆ ವಿಚಾರ ಆಯ್ತು. ಬಳಿಕ ದಿ ಕಾಶ್ಮೀರ ಫೈಲ್ಸ್ ಚಿತ್ರದ್ದು. ಕಾಶ್ಮೀರ ಫೈಸ್ ಕೂಡ ಚುನಾವಣಾ ಪ್ರಚಾರದ ಒಂದು ಭಾಗವಾಗಿದೆ.

ಹೀಗೆ ಒಂದಿಲ್ಲೊಂದು ವಿವಾದಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರು. ಮುಂಬರುವ ಆರು ತಿಂಗಳಲ್ಲಿ ಗುಜರಾಜ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರ ಜೊತೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆಗಳಿವೆ.

ಈ ನಿಟ್ಟಿನಲ್ಲಿ ಬಿಜೆಪಿ ಸಮೀಕ್ಷೆಯನ್ನು ಕೈಗೊಂಡಿದೆ. ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆ ಎಂದು ಹೇಳಿದರು. ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಈ ತಿಂಗಳಾಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಿಂದ ತಲಾ ಮೂವರು ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದಾರೆ.

ಈ ಎರಡೂ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆಯಿಂದಲೇ ಅಭ್ಯರ್ಥಿ ಆಯ್ಕೆಮಾಡುವ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳನ್ನೇ ಚುನಾವಣಾ ಕಣಕ್ಕಿಳಿಸಲಾಗುವುದು ಎಂದು ಹೇಳಿದರು. ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳಾಗಿದೆ ಆದರೆ, ಇನ್ನೂ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿಲ್ಲ. ಆಡಳಿತಾಧಿಕಾರಿಯೇ ಬಜೆಟ್ ಮಂಡಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿ ಎಲ್ಲವೂ ಅರ್ಧ. ಮನಬಂದಂತೆ ಬಜೆಟ್ ಮಂಡನೆ ಮಾಡಲಾಗಿದೆ. ಬೆಳಗಾವಿ ಅಭಿವೃದ್ಧಿ ಆದರೆ ಅಷ್ಟೇ ಸಾಕು ಎಂದರು. ರಾಜ್ಯ ಸಂಪುಟ ವಿಸ್ತರಣೆ ಬಿಜೆಪಿಗೆ ಬಿಟ್ಟಿಟ್ಟು, ಅದು ಆವರ ಆಂತರಿಕ ವಿಚಾರ. ಈ ಕುರಿತು ಅವರನ್ನೇ ಕೇಳಬೇಕು. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ.

ವೈಯಕ್ತಿಕವಾಗಿ ನಾವೆಲ್ಲ ಸಹೋದರರ ಒಂದೇ ಆಗಿದ್ದೇವೆ. ಆದರೆ, ರಾಜಕೀಯದಲ್ಲಿ ಬೇರೆ ಬೇರೆ. ನಾವು ಸಂಬಂಧದ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಮೊದಲ ಸುತ್ತಿನಲ್ಲೇ ಆಯ್ಕೆಯಾಗುತ್ತಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಕಮೀಟಿ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸುನೀಲ ಹನಮಣ್ಣವರ ಉಪಸ್ಥಿತರಿದ್ದರು.