ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಮುನ್ನಲೆಗೆ ಬಂದಿದ್ದು ಕನ್ನಡಿಗರ ದುರಂತ: ಶಿವರಡ್ಡಿ
ಬೆಳಗಾವಿ: ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಮತ್ತೆ ಮುನ್ನಲೆಗೆ ಬಂದಿದ್ದು, ಇದು ಜಿಲ್ಲೆಯ ಕನ್ನಡಿಗರ ದುರಂತದ ಸಂಗತಿ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಹುಚರಡ್ಡಿ ತಿಳಿಸಿದ್ದಾರೆ.
ರಾಜಕೀಯ ನಾಯಕರು ತಮ್ಮ ಬೆಳೆ ಬೆಯಿಸಿಕೊಳ್ಳಲು ಬೆಳಗಾವಿ ಜಿಲ್ಲೆಯನ್ನು ಮೂರು ಭಾಗ ಮಾಡಲು ಹೋರಟ್ಟಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಇಂಥ ವಿಷಯಗಳು ಮುನ್ನಣೆಗೆ ಬರುವುದು ಸಹಜ. ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆ, ಅಲ್ಲದೆ ಗಡಿ ಭಾಗವಾಗಿರುವುದರಿಂದ ಸೂಕ್ಷ್ಮ ಪ್ರದೇಶವೂ ಹೌದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ವಿಭಜನೆ ಮಾಡುವ ಮುನ್ನ ಕನ್ನಡದ ಅಳಿವು ಉಳಿವಿನ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.
ಗಡಿಭಾಗ ಬೆಳಗಾವಿಯಲ್ಲಿ ಪದೇ ಪದೇ ಎಂಇಎಸ್ ನಾಯಕರು ಕಾಲು ಕೆದರಿ ಜಗಳವಾಡುತ್ತ ಬರುತ್ತಾರೆ. ಜಿಲ್ಲೆ ವಿಭಜನೆಯಾದರೆ ಕನ್ನಡಕ್ಕೆ ಕುತ್ತು ಬರುವುದರಲ್ಲಿ ಯಾವುದೇ ಸಂದೇಹ ಇಲ್ಲ. ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿರುವಾಗ ವಿಭಜನೆ ಮಾಡುವ ವಿಚಾರ ಸರಿಯಾದುದ್ದಲ್ಲ ಎಂದು ಹುಚರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.