ಸ್ವಂತ ಉದ್ಯೋಗ ಪ್ರಾರಂಭಿಸಿ ಯಶಸ್ವಿ ಉದ್ಯಮಿಗಳಾಗಿ: ಸಚಿವ ಮುರಗೇಶ ನಿರಾಣಿ
ಬೆಳಗಾವಿ : ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ ಉದ್ಯೋಗ ಹುಡುಕುವ ಬದಲಿಗೆ ಸ್ವಂತ ಉದ್ದಿಮೆ ಪ್ರಾರಂಭಿಸಿ, ಸ್ವಾವಲಂಬಿಗಳಾಗಿ ಬದುಕಬೇಕು ಹಾಗೂ ಉದ್ಯೋಗ ಸೃಷ್ಟಿಸಿ ಇತರರಿಗೆ ಉದ್ಯೋಗ ನೀಡುವಂತೆ ಯಶಸ್ವಿ ಉದ್ಯಮಿಯಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ "ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಗಾರ" ಹಾಗೂ "ಕೈಗಾರಿಕಾ ಅದಾಲತ್" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 1500 ವಿದ್ಯಾರ್ಥಿಗಳು ಹಾಗೂ 9 ಸಾವಿರ ವಿದ್ಯಾರ್ಥಿಗಳು (ವರ್ಚಿಲ್) ವಿಡಿಯೋ ಕಾನ್ಫರೆನ್ಸ್ ಮೂಲಕ ಒಟ್ಟು 11 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಯಶಸ್ವಿ ಉದ್ಯಮಿಯಾಗಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉದ್ದಿಮೆಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇಕಡಾ 75 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು.
ಯುವಕ/ಯುವತಿಯರು ತಮ್ಮ ಹೊಸ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತಂದು ಸ್ವಂತ ಉದ್ಯೋಗ ಪ್ರಾರಂಭಿಸಲು ಯೋಜನೆ ರೂಪಿಸಿಕೊಳ್ಳಬೇಕು. ಈ ಕುರಿತು ಸರ್ಕಾರದಿಂದ ಸಬ್ಸಿಡಿ ಸಾಲ ಸೌಲಭ್ಯ ಸಹಾಯ ಒದಗಿಸಲಾಗುವುದು ಎಂದು ಸಚಿವ ಮುರಗೇಶ ನಿರಾಣಿ ತಿಳಿಸಿದರು.
ಯುವಕರು ಉದ್ಯೋಗ ಸೃಷ್ಟಿಸುವ ಬಗ್ಗೆ ಯೋಚಿಸಬೇಕು:
ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಣಮಣ ರೆಡ್ಡಿ ಅವರು ಯುವಕರು ಉದ್ಯೋಗ ಅರಸಿ ಅಲೆಯುವ ಬದಲಿಗೆ ಸ್ವತಃ ತಾವೇ ಉದ್ಯೋಗ ಪ್ರಾರಂಭಿಸಿ ಇತರರಿಗೆ ಉದ್ಯೋಗ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ.
ಯುವಕರು ಉದ್ಯೋಗ ಪಡೆಯಲು ನಗರ ಹಾಗೂ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಪ್ರಾರಂಭಿಸಿ ತಾವೇ ಇನ್ನೊಬ್ಬರಿಗೆ ಉದ್ಯೋಗ ನೀಡುವಂತೆ ಸ್ವಾವಲಂಬಿಗಳಾಗಬೇಕು ಎಂದು ರಣಮಣ ರೆಡ್ಡಿ ಅವರು ತಿಳಿಸಿದರು.
ಅವಕಾಶಗಳ ಸದುಪಯೋಗ ಪಡೆಯಿರಿ:
ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಎಲ್ಲ ಕನಸುಗಳ ಬಗ್ಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಬರುವ ದಿನಗಳಲ್ಲಿ ನಿಮ್ಮ ಉದ್ಯಮ ಸ್ಥಾಪಿಸಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಸ್ವಂತ ಉದ್ಯೋಗ ಪ್ರಾರಂಭಿಸಿ ಇತರರಿಗೆ ಮಾದರಿಯಾಗಬೇಕು ಎಂದು ಏಕಸ್ ಸಂಸ್ಥೆ ಮುಖ್ಯಸ್ಥ ಅರವಿಂದ್ ಮೆಳ್ಳಗೇರಿ ಅವರು ತಿಳಿಸಿದರು.
ಸಣ್ಣ ಪ್ರಮಾಣದ ಕೈಗಾರಿಕೆ ಸಂಸ್ಥೆಗಳಿಗೆ ಪ್ರಾರಂಭದ ಹಂತದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಭಾರತದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆಗೆ ಉತ್ತಮ ಭವಿಷ್ಯ ಇದೆ.
ರಾಜ್ಯದಲ್ಲಿ ಪ್ರತಿಭಾವಂತ ಯುವಕ ಯುವತಿಯರಿದ್ದು, ಎಲ್ಲರೂ ಉದ್ಯೋಗ ಪಡೆಯಲು ಅಲೆದಾಡುವುದನ್ನು ಬಿಡಬೇಕು. ಉದ್ಯಮಿಯಾಗಲು ಅನೇಕ ಅವಕಾಶಗಳಿದ್ದು, ಯಶಸ್ವಿ ಉದ್ಯಮಿಯಾಗಿ ಅನೇಕರಿಗೆ ಕೆಲಸ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅರವಿಂದ್ ಮೆಳ್ಳಗೇರಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭೆ ಶಾಸಕರಾದ ಅಭಯ ಪಾಟೀಲ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಖ್ತಾರ್ ಹುಸೇನ್ ಪಠಾಣ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಎನ್ ಶಿವಶಂಕರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಎಂಎಸ್ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಹೆಚ್. ಎಂ. ಶ್ರೀನಿವಾಸ್, ರೇಣುಕಾ ಶುಗುರ್ಸ್ನ ಅಧ್ಯಕ್ಷೆ ವಿದ್ಯಾ ಮರಕುಂಬಿ, ವಿಟಿಯು ಉಪಕುಲಪತಿ ಡಾ. ಕರಿಸಿದ್ದಪ್ಪ, ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರತಿನಿಧಿ ರಾಘವೇಂದ್ರ ಕಾಗವಾಡ ಉಪಸ್ಥಿತರಿದ್ದರು.
ಕೈಗಾರಿಕಾ ಅದಾಲತ್:
"ಕೈಗಾರಿಕಾ ಅದಾಲತ್" ಮೂಲಕ ಸರ್ಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಉದ್ಯಮಿಗಳ ಸಮಸ್ಯೆ ಆಲಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಜಿಲ್ಲೆಯಿಂದ ನಾನಾ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 77 ಅರ್ಜಿಗಳು ಬಂದಿದ್ದು, ಈಗಾಗಲೇ ಕೆಲವರ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಇನ್ನು ಕೆಲವು ಅರ್ಜಿಗಳ ಕುರಿತು ನೇರವಾಗಿ ಉದ್ಯಮಿಗಳ ಜತೆ ಚರ್ಚಿಸಿ, ಪರಿಹಾರ ಸೂಚಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಸರಬರಾಜು ಕಂಪನಿ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಮುರಗೇಶ ನಿರಾಣಿ ಭರವಸೆ ನೀಡಿದರು.
ತಾಂತ್ರಿಕ ಸಭೆ ವಿವರ:
"ಉದ್ಯಮಿಯಾಗು ಉದ್ಯೋಗ ನೀಡು" ಕಾರ್ಯಕ್ರಮದ ಮೂಲಕ ಯಶಸ್ಸು ಸಾಧಿಸಲು ಉದ್ಯಮಿಗಳ ಮನಸ್ಥಿತಿ ಹೇಗಿರಬೇಕು ಎಂಬ ವಿಷಯದ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.