Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

Good morning ಮೆಸೇಜ್ ಅರ್ಥ ಏನು ...?

localview news

ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ.

ಬುದ್ದ, ಬಸವ, ಯೇಸು, ಪೈಗ೦ಬರ್, ಮಹಾವೀರ, ಅಂಬೇಡ್ಕರ್, ಗಾಂಧಿ, ರೂಮಿ, ಗಿಬ್ರಾನ್, ಕಾರ್ಲ್ ಮಾರ್ಕ್ಸ್, ವಿವೇಕಾನಂದ, ಪರಮಹಂಸ, ಸರ್ವಜ್ಞ, ಭಗವದ್ಗೀತೆ, ಖುರಾನ್, ಬೈಬಲ್, ಶರಣರು, ದಾಸರು ಸೂಫಿ ಸಂತರು ಹೀಗೆ ಅನೇಕರ ವಾಣಿಗಳು ನಮಗಿಷ್ಟವಾಗಿವೆ ಎಂದು ಹಾಕುತ್ತೇವೆ.

ಒಂದು ಹಂತಕ್ಕೆ ಇದೆಲ್ಲಾ ಒಳ್ಳೆಯದೆ. ಆದರೆ ಈ ಸಂದೇಶಗಳನ್ನು ಮತ್ತು ಅದನ್ನು ಹೇಳಿರುವವರನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ, ಅದನ್ನು ಹೇಗೆ ಅಳವಡಿಸಿಕೊಂಡಿದ್ದೇವೆ, ಅದರ ಸಾಮಾಜಿಕ ಪ್ರಸ್ತುತತೆ ಏನು ಎಂಬುದನ್ನು ಅದರೊಂದಿಗೆ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಅದೊಂದು ಕಾಟಾಚಾರದ ಒಣ ಸಂದೇಶವಾಗುತ್ತದೆ.

ಏಕೆಂದರೆ ಕಾಲದ ನಿರಂತರತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿರುತ್ತವೆ. ಕೆಲವು ಈಗಲೂ ಪ್ರಸ್ತುತವಾದರೆ, ಕೆಲವು ಸವಕಲು ನಾಣ್ಯಗಳು. ಮತ್ತೆ ಕೆಲವು ಬದಲಾವಣೆಯಾಗಬೇಕಿದ್ದರೆ ಇನ್ನೊಂದಿಷ್ಟು ಅಪಾಯಕಾರಿಯೂ ಹೌದು.

ಈ ಎಲ್ಲಾ ವ್ಯಕ್ತಿಗಳು ತಾವು ಜೀವಿಸಿದ್ದ ಕಾಲದ ಸ್ಥಿತಿಗತಿಗೆ ಅನುಗುಣವಾಗಿ ಒಂದಷ್ಟು ದೂರದೃಷಿಯಿಂದ ತಮ್ಮ ಚಿಂತನೆಗಳನ್ನು ದಾಖಲಿಸಿರುತ್ತಾರೆ. ಅದು ಈಗ ಎಷ್ಟರ ಮಟ್ಡಿಗೆ ಅಳವಡಿಕೆಗೆ ಯೋಗ್ಯ ಎಂದು ಯೋಚಿಸಬೇಕಾಗುತ್ತದೆ.

ಉದಾಹರಣೆಗೆ ಆಗ ರಾಜಪ್ರಭುತ್ವ ಈಗ ಪ್ರಜಾಪ್ರಭುತ್ವ, ಆಗ ಕಾಲ್ನಡಿಗೆ ಅಥವಾ ಕುದುರೆ. ಈಗ ವಿಮಾನ, ಆಗ ಪಾರಿವಾಳ ಇಲ್ಲ ಧೂತ ಸಂದೇಶ ವಾಹಕ ಈಗ ಇಂಟರ್ ನೆಟ್ - ಮೊಬ್ಯೆಲ್ ( ಸ್ವಲ್ಪ Techniques ಗೊತ್ತಾದರೆ Fake Photoshop! !??). ಆಗ ಜಾತಿಗಳ ಶ್ರೇಷ್ಠತೆ ಈಗ ಸ್ವಲ್ಪ ಶಿಥಿಲತೆ, ಆಗ ಪ್ರಾಮಾಣಿಕತೆ ಈಗ ಭ್ರಷ್ಟತೆ, ಆಗ ಹೆಣ್ಣು ಎರಡನೇ ದರ್ಜೆ ಈಗ ಆಕೆಯೇ ಎಲ್ಲದರಲ್ಲೂ First Class ( ? ), ಆಗ ದೇವರು ದೊಡ್ಡವನು ಈಗ ಹಣ ಅಧಿಕಾರ ಇದ್ದವನೇ ದೇವರು .....ಹೀಗೆ ನಾನು ರೀತಿಯ ಬದಲಾವಣೆಗಳಾಗಿವೆ.

ಆದ್ದರಿಂದ ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳದೆ, ಚಿನ್ನದ ಸೂಜಿಯೆಂದು ಕಣ್ಣಿಗೆ ಚುಚ್ಚಿಕೊಳ್ಳದೆ ಈಗಿರುವ ನಿಮ್ಮ ಜ್ಞಾನದ ಮಿತಿಯಲ್ಲಿ ಒಂದಷ್ಟು ವಿವೇಚನೆಯಿಂದ ನಿಮಗೆ ಸರಿ ಎಂಬುದನ್ನು ಸ್ವೀಕರಿಸಿ. ಕೆಲವನ್ನು ಬದಲಾವಣೆ ಮಾಡಿಕೊಳ್ಳಿ ಇಷ್ಟವಿಲ್ಲದಿದ್ದರೆ ತಿರಸ್ಕರಿಸಿ.

ಅನುಭವದ ಆಧಾರದ ಮೇಲೆ ಎಲ್ಲಾ ಉತ್ತಮ ಅಂಶಗಳನ್ನು ಸೇರಿಸಿ ಹೊಸ ಸಾಮಾಜಿಕ ಮನೋಸ್ಥಿತಿ ನಿರ್ಮಿಸಿಕೊಳ್ಳೋಣ. ಆ ಕಾರಣಕ್ಕಾಗಿ ಮಹಾತ್ಮರ Quote ಗಳಿಗೆ ನಿಮ್ಮ ಆಂತರಿಕ ಮತ್ತು ಭಾಹ್ಯ ಪ್ರತಿಕ್ರಿಯೆ ಮುಖ್ಯವಾಗುತ್ತದೆ. ಏಕೆಂದರೆ ಈ ಕ್ಷಣದಲ್ಲಿ ನಾವು ಜೀವಿಸುತ್ತಿರುವುದು ನಿಮ್ಮೊಂದಿಗೆ ಹೊರತು ಮಾಹಾತ್ಮರ ಒಡನಾಟದಲ್ಲಿ ಅಲ್ಲ ಆದರೆ ಅವರ ನೆನಪುಗಳೊದಿಗೆ .

ನಿನ್ನೆ 10/04/2022 ಭಾನುವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರಂತರವಾಗಿ 9 ಗಂಟೆಗಳ ಸೌಹಾರ್ಧ ಸತ್ಯಾಗ್ರಹ ನಡೆಯಿತು. ಚರ್ಚೆ ಸಂವಾದಗಳು ಅರ್ಥಪೂರ್ಣವಾಗಿದ್ದವು. ಭಾಗವಹಿಸಿದ ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.