Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಾಮಾನ್ಯ ಜನ ಇದ್ರೆ ಬಂಧಿಸ್ತಿದ್ರು: ಆಪ್ ಮುಖಂಡ ಭಾಸ್ಕರ್ ರಾವ್

localview news

ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನನಗೆ ಇಲ್ಲ ಎಂದು ಆಮ್ ಆದ್ಮಿ ಮುಖಂಡ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು. ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ.

ಜವಾಬ್ದಾರಿ ಸ್ಥಾನದಲ್ಲಿರುವ ಪಕ್ಷ ನಾಲ್ಕು ಕೋಟಿ ರೂ. ಮಾಡಿರುವ 108 ಕಾಮಗಾರಿ ಮಾಡಿರುವುದನ್ನು‌ ತನಿಖೆ ಮಾಡಿಸಿ ಅವರ ಆತ್ಮಹತ್ಯೆಗೆ ನ್ಯಾಯ ಒದಗಿಸಿಕೊಡುವುದಾಗಿ ಹೇಳಲಿಲ್ಲ. ಬೇರೆ ಯಾರಾದರೂ ಈ ಪ್ರಕರಣದಲ್ಲಿ ಇದ್ದರೆ ಅವರ ಬಂಧನವಾಗುತ್ತಿತ್ತು. ಸರಕಾರಕ್ಕೆ ಸಂತೋಷ ಸಾವಿಗೆ ನ್ಯಾಯ ಕೊಡಿಸುವುದಾಗಿದ್ದರೆ ಈ ಪ್ರಕರಣ ನ್ಯಾಯಾಂಗದ ತನಿಖೆ ಮೂಲಕ ನಡೆಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ‌ಮೋದಿ ಅವರು ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದಾಗ 10% ಕಮಿಷನ್ ಸರಕಾರ ಎಂದು ಆರೋಪ ಮಾಡಿದ್ದರು. ಆದರೆ ಈಗ ಅವರ ಡಬಲ್ ಎಂಜಿನ್ ಸರಕಾರದಲ್ಲಿ 40% ಕಮಿಷನ್ ಆರೋಪ‌ ಕೇಳಿ ಬರುತ್ತಿದೆ ಎರಡೂ ಪಕ್ಷದವರು ಭ್ರಷ್ಟಾಚಾರ ನಡೆಸಿದ್ದಾರೆ.

ಇದರ ವಿರುದ್ಧ ಆಮ್ ಆದ್ಮಿ ಹೋರಾಟ ನಡೆಸುತ್ತದೆ ಎಂದರು. ಸಂತೋಷ ಪಾಟೀಲರು ಪ್ರಧಾನಿಗೆ ದೂರು ಕೊಟ್ಟಾಗ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಆ ದೂರು ಇಲ್ಲಿಯವರೆಗೂ ತನಿಖೆಯಾಗಿಲ್ಲ. ಸಚಿವ ಈಶ್ವರಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ. ಅವರು ಕೂಡಲೇ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ಧ್ವನಿ ಎತ್ತುತ್ತಾರೆ. ಆದರೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಇದ್ದರೂ ಜನರಿಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಆಮ್ ಆದ್ಮಿ ಪಕ್ಷದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. ರಾಜ್ಯದ ಜನರು ಬದಲಾವಣೆಗೆ ಸಿದ್ದರಾಗಿದ್ದಾರೆ.

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ 108 ಕೆಲಸಗಳನ್ನು ಮಾಡಿರುವುದಕ್ಕೆ ಯಾವುದೇ ಮಂಜೂರಾತಿ ನೀಡದೆ ಅವನಿಗೆ ಅವಮಾನ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಎರಡೂ ಪಕ್ಷದವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂತೋಷ ಪಾಟೀಲ ಮಾನವೀಯತೆಯಿಂದ ಕೆಲಸ ಮಾಡಿರುವುದು ಗ್ರಾಮದ ಪ್ರತಿಯೊಬ್ಬರಿಗೂ ತಿಳಿದಿದೆ.

ಆದರೆ ರಾಜಕಾರಣಿಗಳು ಮೊಸಳೆ ಕಣ್ಣಿರು ಹಾಕಿ ಹೋಗುವುದು ಸರಿಯಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕಾರಣಿಗಳಿಗೆ ಯಾವುದೇ ನೈತಿಕತೆ ಇಲ್ಲ. ಇರುವುದು ಒಂದೇ ಪಕ್ಷ ಆಮ್ ಆದ್ಮಿಗೆ ಮಾತ್ರ ಎಂದರು.

ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಹಾಗೂ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲುರಾಯಣ್ಣ ರೆಜಿಮೆಂಟ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.