Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಜೆಪಿ ಎಂದರೆ ಭ್ರಷ್ಟಾಚಾರ ಎಂದ ಮಹಮ್ಮದ್ ನಲಪಾಡ್

localview news

ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಗೆ ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್‌ ಬಲಿಯಾಗಿದ್ದು, ಈ ಸರ್ಕಾರದ ಅವಧಿಯಲ್ಲಿ ಇನ್ನು ಎಷ್ಟು ಜೀವಗಳು ಬಲಿಯಾಗಬೇಕೆಂದು ಯುತ್‌ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್‌, ಪೆಟ್ರೋಲ್‌-ಡಿಸೇಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಜಿಲ್ಲಾ ಗ್ರಾಮೀಣ, ನಗರ ಯುವ ಕಾಂಗ್ರೆಸ್‌ ಸಮಿತಿ ಮತ್ತು ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಇದು ಬೆಲೆ ಏರಿಕೆ ಸರ್ಕಾರ. ಇದು ಭ್ರಷ್ಟಾಚಾರ ಸರ್ಕಾರ. ಈ ಸರ್ಕಾರದ ಅವಧಿಯಲ್ಲಿ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಕಾಂಗ್ರೆಸ್ ಅವಧಿಯಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದರೆ ಇದೇ ಬಿಜೆಪಿ ನಾಯಕರು ಸಿಲಿಂಡರ್ ಹಿಡಿದು ಹೋರಾಟ ಮಾಡುತ್ತಿದ್ದರು. ಆದರೆ ಈಗ ಎಲ್ಲಿ ಕುಳಿತ್ತಿದ್ದಾರೆ ಎಂದು ಹುಡಕಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಯಾವ ಬಿಜೆಪಿ ನಾಯಕರು ಜನರ ಕಷ್ಟಗಳ ಬಗ್ಗೆ ಮಾತನಾಡುವುದಿಲ್ಲ. ಹಾಗಾಗಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ತಮ್ಮ ಆಡಳಿತದ ವೈಫಲ್ಯ ಮುಚ್ಚಿ ಹಾಕಲು ಜಾತಿ ಆಧಾರದ ಮೇಲೆ ನಮ್ಮನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಯುವ ನಾಯಕ ರಾಹುಲ್‌ ಜಾರಕಿಹೊಳಿ ಮಾತನಾಡಿ, ಭ್ರಷ್ಟ ಬಿಜೆಪಿ ಸರ್ಕಾರದಿಂದ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮಿತಿ ಮೀರಿದ ಭ್ರಷ್ಟಾಚಾರದಿಂದ ಗುತ್ತಿಗೆದಾರ ಸಂತೋಷ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬೇಸತ್ತಿದ್ದಾರೆ. ಜನ ಸಾಮಾನ್ಯರ ಕೂಗು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೇಳುತ್ತಿಲ್ಲ. ರಾಜ್ಯದಲ್ಲಿಯೂ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಯುವಕರು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಈ ಎಲ್ಲ ಸಮಸ್ಯೆಗಳ ಮುಕ್ತಿಗೆ ಯುವ ಕಾಂಗ್ರೆಸ್‌ ನಿರಂತರ ಹೋರಾಟ ಮಾಡುತ್ತದೆ ಎಂದು ತಿಳಿಸಿದರು.

ಈ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಗೂ ಮುನ್ನ ಕೈ ನಾಯಕರು ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಬೆಳಗಾವಿ ಕ್ಯಾಂಪ್ ಆಂಜನೇಯ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ್ ಹೆಬ್ಬಾಳಕರ್‌, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರಾದ ಅರುಣ ಕಟಾಂಬಳೆ, ಸಿದ್ದು ಸುಣಗಾರ, ಕಾಂಗ್ರೆಸ್‌ ಮುಖಂಡರಾದ ಪರುಶರಾಮ್‌ ಢಗೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್‌ ಅಧ್ಯಕ್ಷ ಕಾರ್ತಿಕ್‌ ಪಾಟೀಲ್‌, ಯಮಕನಮರಡಿ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ ಪಾಟೀಲ್‌, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್‌ (ಎಸ್ ಟಿ) ಉಪಾಧ್ಯಕ್ಷ ಹನಮಂತ ಕಲ್ಲಪ್ಪ ಶೇಖನವರ, ಸಂಜು ಗಡರೋಳ್ಳಿ, ಅಕ್ಷಯ ವಿರಮುಖ, ಪ್ರವೀಣ ಅನ್ನೋಜಿ, ಯಲ್ಲಪ್ಪಾ ಸಿಂಗೆ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌, ಎಪಿಎಂಸಿ ಅಧ್ಯಕ್ಷ ಯುವರಾಜ್‌ ಕದಂ, ಬಸವರಾಜ ಸೇಗಾವಿ, ಸಿದ್ದಿಕ ಅಂಕಲಗಿ, ಆಯಿಶಾ ಸನದಿ ಸೇರಿದಂತೆ ಬೆಳಗಾವಿ ಗ್ರಾಮಾಂತರ ಜಿಲ್ಲೆ, ಬೆಳಗಾವಿ ನಗರ ಜಿಲ್ಲೆ ಹಾಗೂ ಚಿಕ್ಕೋಡಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.