Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

5 ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಜನ್ಮದಿನ ಆಚರಣೆ

localview news

ಬೆಳಗಾವಿ : 5 ವೈವಿದ್ಯಮಯ, ವಿಧಾಯಕ ಕಾರ್ಯಕ್ರಮಗಳೊಂದಿಗೆ ಬೆಳಗಾವಿಯಲ್ಲಿ ಗುರುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಜನ್ಮ ದಿನ ಆಚರಿಸಲಾಯಿತು. ಶಾಸಕರ ಗೃಹ ಕಚೇರಿ ಆವರಣದಲ್ಲಿ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ವಿನೂತನ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಮುತ್ನಾಳ ಕೇದಾರಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹಿರೇಬಾಗೇವಾಡಿ ದರ್ಗಾದ ಸೈಯದ್ ಅಶ್ರಫ್ ಫೀರ್ ಖಾದ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಬೆಳಗಾವಿ ತಾಲೂಕಿನ ಎಲ್ಲ ಲೈನ್ ಮನ್ ಗಳನ್ನು ಸನ್ಮಾನಿಸಿ, ಅವರಿಗೆ ಜಾಕೆಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ತಾಲೂಕಿನ 8, 9, 10ನೇ ತರಗತಿಯ ಸುಮಾರು 15 ಸಾವಿರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ತಯಾರಿಸಲಾದ ಶಿಕ್ಷಣ ಮಾರ್ಗಸೂಚಿಯ ಡೈಜೆಸ್ಟ್ ಗಳ ವಿತರಣೆಗೆ ಚಾಲನೆ ನೀಡಲಾಯಿತು, ಕ್ಷೇತ್ರದ ಪ್ರತಿ ಪ್ರೌಢಶಾಲೆಯ ಪ್ರಥಮ, ದ್ವೀತಿಯ ಹಾಗೂ ತೃತೀಯ ಶ್ರೇಣಿಗಳಲ್ಲಿ ಪಾಸಾದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬ್ಯಾಗ್ ಗಳ ವಿತರಣೆ, ಕ್ಷೇತ್ರದ 25 ಪ್ರಾಥಮಿಕ ಶಾಲೆಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸುವ ಯೋಜನೆ ಹಾಗೂ ಕ್ಷೇತ್ರದ ಪ್ರತಿ ಮನೆ ಮನೆಗೆ ಸಸಿಗಳನ್ನು ವಿತರಿಸಿ, ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೂ ಸಹ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ತರಗತಿಯೊಳಗಿನ ಶಿಕ್ಷಣದಷ್ಟೇ ದೈಹಿಕ ಶಿಕ್ಷಣವೂ ಮಕ್ಕಳಿಗೆ ಮುಖ್ಯ. ಹಾಗಾಗಿ ಕ್ಷೇತ್ರದ ಪ್ರತಿ ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಗಮನಿಸಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದು ಯೋಜನೆಗಳ ಆರಂಭವಷ್ಟೆ. ಶಾಸಕರ ಅನುದಾನ, ಸರಕಾರದ ವಿವಿಧ ಯೋಜನೆಗಳಲ್ಲದೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದಲೂ ಹಲವಾರು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಳೆದ 4 ವರ್ಷದಲ್ಲಿ ಇಡೀ ಕ್ಷೇತ್ರದ ಚಿತ್ರಣವನ್ನೇ ಬದಲಿಸಲಾಗಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಯೋಜನೆಗಳು ಕ್ಷೇತ್ರಕ್ಕೆ ಬಂದಿವೆ. ಕ್ಷೇತ್ರದ ಜನ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಅಕ್ಷರಶಃ ತಮ್ಮ ಮನೆ ಮಗಳು ಎನ್ನುವಂತೆ ಕಾಣುತ್ತಿದ್ದು, ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಸೇವೆ ಮಾಡಲಾಗುವುದು ಎಂದು ಚನ್ನರಾಜ ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಹಿಂದಿನ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಅಭಿವೃದ್ಧಿಯನ್ನೇ ಕಂಡಿರಲಿಲ್ಲ. ಹಾಗಾಗಿ ಕ್ಷೇತ್ರ ಸಾಕಷ್ಟು ಹಿಂದುಳಿದಿತ್ತು. ಇದೇ ಮೊದಲಬಾರಿಗೆ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು 52 ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿದ್ದ ಮತದಾರರು ಮುಂದಿನ ಚುನಾವಣೆಯಲ್ಲಿ ಲಕ್ಷಕ್ಕೂ ಹೆಚ್ಚು ಅಂತರದಿಂದ ಆಯ್ಕೆ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮುಖಂಡರಾದ ಗಂಗಣ್ಣ ಕಲ್ಲೂರ, ಸಿ ಸಿ ಪಾಟೀಲ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ನಾಗೇಶ ದೇಸಾಯಿ, ಅಡಿವೇಶ ಇಟಗಿ, ಯಲ್ಲಪ್ಪ ಡೇಕೋಲ್ಕರ್, ಬಿ ಎನ್ ಪಾಟೀಲ, ಸಾತೇರಿ ಬೆಳವಟ್ಕರ್, ಶ್ರೀಕಾಂತ ಮಧುಭರಮಣ್ಣವರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ನವರ, ವಿವಿಧ ಅಧಿಕಾರಿಗಳು, ಕ್ಷೇತ್ರದ ವಿವಿಧ ಶಾಲೆಗಳ ಶಿಕ್ಷಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.