Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

localview news

ಬೆಳಗಾವಿ: ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಮ್ ಸ್ಥಾಪನೆಗಾಗಿ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಥಳ ಪರಿಶೀಲಿಸಿದರು.

ನಗರದ ಜ್ಯೋತಿ ಕಾಲೇಜಿಗೆ ಸೋಮವಾರ(ಮೇ 16) ಭೇಟಿ ನೀಡಿದ ಜಿಲ್ಲಾಧಿಕಾರಿ ಮತ ಎಣಿಕೆ ಕೊಠಡಿಗಳು ಮತ ಪೆಟ್ಟಿಗೆಗಳನ್ನು ಕಾಯ್ದಿರಿಸುವ ಭದ್ರತಾ ಕೊಠಡಿಗಳ ಸ್ಥಾಪನೆ ಕುರಿತು ಪರಿಶೀಲಿಸಿದರು.

ಕಾಲೇಜಿನ ತರಗತಿ ಕೊಠಡಿಗಳನ್ನು ಪರಿಶೀಲಿಸಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಮತ ಎಣಿಕೆ ಹಾಗೂ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಮ್)ಗಳನ್ನು ಸ್ಥಾಪಿಸುವ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಇದಲ್ಲದೇ ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್ ಸೌಲಭ್ಯ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕೋವಿಡ್ ನಿಯಮಾವಳಿ ಪಾಲನೆ ಸೇರಿದಂತೆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವಕುಮಾರ್ ಹುಲಕಾಯಿ ಅವರು, ಮತ ಎಣಿಕೆ ಹಾಗೂ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಮ್) ಸ್ಥಾಪನೆಗೆ ಸಂಬಂಧಿಸಿದಂತೆ ರೂಪುರೇಷೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. .