Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೃಢ ಸಂಕಲ್ಪದಿಂದ ಉತ್ತಮ ಸೇವೆ ನೀಡಿ: ಎಡಿಜಿಪಿ ಆರ್. ಹಿತೇಂದ್ರ

localview news

ಬೆಳಗಾವಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅತಿ ಶಿಸ್ತಿನ ಇಲಾಖೆಯಾಗಿದೆ. ಪೊಲೀಸ್‌ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ಜಾತಿ, ಮತ, ಧರ್ಮದ ಆಧಾರದಲ್ಲಿ ಕಾರ್ಯ ನಿರ್ವಹಿಸಬಾರದು. ಮಾನಸಿಕ ಹಾಗೂ ದೈಹಿಕ ದೃಢ ಸಂಕಲ್ಪದಿಂದ ಉತ್ತಮ ಸೇವೆ ಸಲ್ಲಿಸಬೇಕು ಎಂದು ಕೆ.ಎಸ್.ಆರ್. ಪಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್. ಹಿತೇಂದ್ರ ಅವರು ತಿಳಿಸಿದರು.

ನಗರದ ಕಂಗ್ರಾಳಿ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಕೆಎಸ್ಆರ್ ಪಿ ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ ತಂಡಗಳ ನಿರ್ಗಮನ ಪಥಸಂಚಲನ ಪರಿವೀಕ್ಷಿಸಿ ಅವರು ಮಾತನಾಡಿದರು.

ಪ್ರಶಿಕ್ಷಣಾರ್ಥಿಗಳು ವಿವಿಧ ಪದವಿ, ಸ್ನಾತಕೋತ್ತರ ಪದವಿ ಪಡೆದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗೆ ಸೇರ್ಪಡೆಯಾಗಿದ್ದು, ಸಂತಸದ ವಿಷಯವಾಗಿದೆ. ಸಮವಸ್ತ್ರ ಧರಿಸಿ ಯಾವುದೇ ತೊಂದರೆ ಆಗದಂತೆ ಜಾಗ್ರತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಧೈರ್ಯ, ಶಿಸ್ತು, ಪೊಲೀಸ್ ಇಲಾಖೆಗೆ ಸ್ವಂತಿಕೆಯಾಗಿದೆ. ವಿವಿಧ ರಕ್ಷಣಾತ್ಮಕ ಕಲೆಗಳ ತರಬೇತಿ ಜೊತೆಗೆ ಕಂಪ್ಯೂಟರ್ ಜ್ಞಾನ, ಕಾನೂನು ವಿಷಯಗಳು, ಮಾನವ ಹಕ್ಕುಗಳು, ನಿಯಮ ಪಾಲನೆ, ಸೇರಿದಂತೆ ವಿವಿಧ ಕಾಯ್ದೆಗಳ ಅರಿವು ತರಬೇತಿಯಲ್ಲಿ ನೀಡಲಾಗಿದ್ದು, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಈ ತರಬೇತಿ ಸಹಾಯವಾಗಲಿವೆ ಎಂದರು.

ಪ್ರಶಿಕ್ಷಣಾರ್ಥಿಗಳು ಪರಿಶ್ರಮದಿಂದ ಈ ಇಲಾಖೆ ಆಯ್ಕೆ ಮಾಡಿಕೊಂಡಿದ್ದಿರಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇ ದುರಭ್ಯಾಸಗಳನ್ನು ಬೆಳೆಸಿಕೊಳ್ಳದೆ, ಉತ್ತಮ ಜೀವನದ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಆರ್. ಹಿತೇಂದ್ರ ಕಿವಿಮಾತು ತಿಳಿಸಿದರು.

ಪ್ರತಿಜ್ಞಾ ವಿಧಿ ಸ್ವೀಕಾರ:

ಕಂಗ್ರಾಳಿಯ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ರಮೇಶ ಬೋರಗಾವೆ ಅವರ ಬೋಧನೆಯಂತೆ ಪ್ರಶಿಕ್ಷಣಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಪ್ರಶಿಕ್ಷಣಾರ್ಥಿಗಳ ಅನಿಸಿಕೆಯಿರುವ ವಾರ್ತಾ ಪತ್ರಿಕೆ ಬಿಡುಗಡೆ ಮಾಡಲಾಯಿತು ಹಾಗೂ ಪ್ರಶಿಕ್ಷಾರ್ಥಿಗಳು ತರಬೇತಿ ಅವಧಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಹೆಚ್ಚು ಅಂಕ ಪಡೆದ ಪ್ರಶಿಕ್ಷಾರ್ಥಿಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಬಹುಮಾನ ವಿತರಣೆ ಮಾಡಿದರು.

ಇದಕ್ಕೂ ಮುಂಚೆ ರಾಜ್ಯದ ವಿವಿಧ ಘಟಕಗಳಾದ ತುಮಕೂರು, ಮಂಗಳೂರು, ಶಿವಮೊಗ್ಗ, ಕಲಬುರ್ಗಿ, ದಕ್ಷಿಣ ಕನ್ನಡ, ಮೈಸೂರು, ರಾಯಚೂರು, ಉಡುಪಿ, ಬೆಂಗಳೂರು, ಹಾಸನ, ಮೈಸೂರು, ಬೆಳಗಾವಿ ಹಾಗೂ ಶಿಗ್ಗಾಂವಿಯ ಕೆ.ಎಸ್.ಆರ್.ಪಿ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ತಂಡಗಳ ಪಥಸಂಚಲನ ನಿರ್ಮಾಗಮನ ಕವಾಯತು ನಡೆಯಿತು.

ಕೆ.ಎಸ್.ಆರ್. ಪಿ ಪೊಲೀಸ್ ಮಹಾ ನೀರಿಕ್ಷಕರು ರವಿ ಎಸ್, ಉಪ ಪೊಲೀಸ್ ಮಹಾ ನೀರಿಕ್ಷಕರಾದ ಎಂ.ವಿ ರಾಮಕೃಷ್ಣ ಪ್ರಸಾದ್, ಪೊಲೀಸ್ ಆಯುಕ್ತರಾಗಿ ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೆ.ಎಸ್.ಆರ್. ಪಿ 2ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು ಹಾಗೂ ಪ್ರಶಿಕ್ಷಣಾರ್ಥಿಗಳ ಕುಟುಂಬದ ಸದಸ್ಯರು ಕವಾಯಿತು ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.