Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಕವಟಗಿಮಠ

localview news

ಬೆಳಗಾವಿ : ಸಿದ್ದರಾಮಯ್ಯನವರೇ ತಾವು ಹಿರಿಯರು, ಮಾಜಿ ಮುಖ್ಯಮಂತ್ರಿಗಳು, ರಾಜಕೀಯದಲ್ಲಿ ಅಗಾಧ ಅನುಭವವನ್ನು ಹೊಂದಿದವರು. ಇಷ್ಟೆಲ್ಲ ಘನತೆ ಹೊಂದಿರುವ ತಾವು ಯಾಕೆ ಹಿಂದೂ ಧರ್ಮದ ಬಗ್ಗೆ ಅಸಡ್ಡೆಯ ಮಾತಾಡುತ್ತೀರಿ? ಹೌದು ಆರ್ ಎಸ್ ಎಸ್ ಬಗ್ಗೆ ಯಾರೇ ಮಾತಾಡಿದರೂ ನಾವು ಬಿಜೆಪಿಗರು ವಕಾಲತ್ತು ವಹಿಸಿ ಮಾತಾಡುತ್ತೇವೆ. ಇದರಲ್ಲಿ ತಪ್ಪೇನು ಎಂದು ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಪ್ರಶ್ನಿಸಿದ್ದಾರೆ.

ಆರ್ ಎಸ್ ಎಸ್ ಜನ್ಮತಾಳಿದ್ದೇ ರಾಷ್ಟ್ರದ ರಕ್ಷಣೆಗಾಗಿ, ಹಿಂದೂ ಧರ್ಮದ ಉಳಿವಿಗಾಗಿ. ಸಂಘಟನೆಯ ಕಲಿಕೆಯೇ ನಮ್ಮ ಬಿಜೆಪಿಯ ಮೂಲ ಅಸ್ತಿತ್ವ. ರಾಷ್ಟ್ರವನ್ನು ಪ್ರೀತಿಸುವ, ಪೂಜಿಸುವ ಎಲ್ಲರನ್ನೂ ಸಂಘ ಗೌರವಿಸುತ್ತದೆ. ಅದಕ್ಕೆ ಹಿಂದೂಗಳೇ ಆಗಿರಬೇಕೆಂದಿಲ್ಲ. ಸಂಘದಲ್ಲಿ ಮುಸ್ಲೀಮರಾದಿಯಾಗಿ ಭಾರತದಲ್ಲಿರುವ ಎಲ್ಲ ಧರ್ಮದ ಸದಸ್ಯರೂ ಇದ್ದಾರೆ ಎಂಬುದು ನಿಮಗೂ ಗೊತ್ತು!

ಆರ್ ಎಸ್ ಎಸ್ ಮೀಸಲಾತಿಯನ್ನು ವಿರೋಧಿಸುತ್ತಿದೆ, ಭೂಸುಧಾರಣೆಯನ್ನು ವಿರೋಧಿಸುತ್ತದೆ ಎಂಬೆಲ್ಲ ಗಾಳಿಯಲ್ಲಿ ಗುಂಡು ಹೊಡೆಯುವ ಮಾತುಗಳು ನಿಮಗೆ ಖಂಡಿತಾ ಶೋಭೆ ತರುವುದಿಲ್ಲ.

ಈಗ ನೀವೇ ಹೇಳಿ, ಜಾತ್ಯತೀತನಾಗಲು ರೌಡಿಸಂ ಮಾಡಬೇಕಾ? ಮಂತ್ರಿಯಾಗಿ ಅತ್ಯಾಚಾರ ಮಾಡಬೇಕಾ? ಬ್ಲಾಕ್ ಮೇಲ್ ರಾಜಕಾರಣ ಮಾಡಬೇಕಾ? 80 ಲಕ್ಷ ರೂಪಾಯಿ ವಾಚ್ ಧರಿಸಬೇಕಾ? ರಾಷ್ಟ್ರವಿರೋಧಿ ಸಂಘಟನೆಗಳನ್ನು ಬೆಂಬಲಿಸಬೇಕಾ? ಮತಾಂಧ ಟಿಪ್ಪುವನ್ನ ಆರಾಧಿಸಬೇಕಾ? ನಮ್ಮ ಹೆಮ್ಮೆಯ ಸೈನಿಕರನ್ನು ಅನುಮಾನಿಸಿ, ಅವಮಾನಿಸಬೇಕಾ? ಕಾಶ್ಮೀರಿ ಹತ್ಯಾಕಾಂಡವನ್ನು ಮುಚ್ಚಿಡಬೇಕಾ? ಅಥವಾ ನಕಲಿ ಗಾಂಧಿಗಳ ಚಾಕರಿ ಮಾಡಬೇಕಾ? ಏನು ಮಾಡಬೇಕು ಹೇಳಿಬಿಡಿ!

ನರಗುಂದದಲ್ಲಿ ರೈತರ ಮೇಲೆ ಲಾಠಿ ಬೀಸಿ, ಕೇಸು ದಾಖಲಿಸುವಾಗ ಎಲ್ಲಿತ್ತು ಸ್ವಾಮಿ ನಿಮ್ಮ ರೈತ ಪ್ರೇಮ? ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಬಿಟ್ಟಿ ಭಾಗ್ಯಗಳನ್ನು ಸಾಲ ಮಾಡಿಯಾದರೂ ನೀಡುವಾಗ ಎಲ್ಲಿತ್ತು ನಿಮ್ಮ ಸಾಮಾಜಿಕ ನ್ಯಾಯ? ಅಹಿಂದ ಅನ್ನುವ ವೇದಿಕೆ ಸೃಷ್ಟಿಸಿ ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ನಡುವೆ ಕಂದಕ ಉಂಟು ಮಾಡಿರುವ ತಮಗೆ ಸಂಘ ಹಾಗೂ ಬಿಜೆಪಿ ಬಗ್ಗೆ ಮಾತಾಡುವ ನೈತಿಕತೆ ಖಂಡಿತಾ ಇಲ್ಲ.

ಆರ್ ಎಸ್ ಎಸ್ ಯಾವತ್ತಿಗೂ ತನ್ನ ಸದಸ್ಯರಿಗೆ ಜಾತಿ ಕೇಳಿಲ್ಲ. ಧರ್ಮ ಕೇಳಿಲ್ಲ‌. ಉತ್ಕಟ ರಾಷ್ಟ್ರಾಭಿಮಾನ ಇರುವ ಯಾರೇ ಆಗಲಿ ಅವರ ಅನುಭವ, ಕೆಲಸ ನೋಡಿ ಅವಕಾಶ ನೀಡುತ್ತ ಬಂದಿದೆ. ಸಂಘದ ಸದಸ್ಯರು ವಿಪತ್ತು ನಿರ್ವಹಣಾ ಕೆಲಸ ಮಾಡುವಾಗ ನೀನು ದಲಿತನಾ? ನೀನು ಹಿಂದುಳಿದ ವರ್ಗದವನಾ? ನೀನು ಮುಸ್ಲೀಮನಾ ಎಂದು ಯಾವತ್ತಿಗೂ ಕೇಳಿಲ್ಲ.

ನಿಜ, ಹಿಂದೂ ಧರ್ಮದಲ್ಲಿ ಹಿಂದೆ ಕೆಲವು ಮೂಢ ಆಚರಣೆಗಳಿದ್ದವು. ಆದರೆ ಕಾಲ ಬದಲಾದಂತೆ ಎಲ್ಲ ಅನಿಷ್ಠ ಪದ್ಧತಿಗಳು ತೊಲಗಿವೆ. ಇದನ್ನು ತಾವು ಅರ್ಥ ಮಾಡಿಕೊಳ್ಳಬೇಕು‌. ಹಾಗೆಯೇ‌ ನೀವು ನಿಜವಾದ ಸುಧಾರಣಾವಾದಿಯೇ ಆಗಿದ್ದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಧರ್ಮದ ಹೆಸರಲ್ಲಿ ಆಗುತ್ತಿರುವ ತಾರತಮ್ಯವನ್ನು ತಾವು ಬೆಂಬಲಿಸುತ್ತಿದ್ದಿಲ್ಲ. ಹಿಜಾಬ್ ಪರವಾಗಿ ಮಾತಾಡುತ್ತಿದ್ದಿಲ್ಲ!

ಮೂಢನಂಬಿಕೆಗಳ ಬಗ್ಗೆ ನೀವು ಯಾವ ನೈತಿಕತೆಯಲ್ಲಿ ಮಾತಾಡುತ್ತೀರಿ ಸಿದ್ದರಾಮಯ್ಯನವರೇ? ತಾವು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಕಾರಿನ ಮೇಲೆ ಕಾಗೆ ಕುಳಿತಿತು ಅಂತ ಹೇಳಿ ಸರ್ಕಾರಿ ಕಾರನ್ನೇ ಬದಲಿಸಿದ ಮಹಾನ್ ಸುಧಾರಣಾವಾದಿ ಅಲ್ಲವೇ ತಾವು?

ಹೌದು ಸಿದ್ದರಾಮಯ್ಯನವರೇ, ನೀವು ಹಿಂದೂ ವಿರೋಧಿಯೇ. ಆದರೆ ಧರ್ಮದ ಅನಿಷ್ಟಗಳನ್ನು ಪ್ರಶ್ನಿಸಿದ್ದಕ್ಕಲ್ಲ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಮಾತಾಡುವುದಕ್ಕೆ ನೀವು ಹಿಂದೂ ವಿರೋಧಿ. ನಿಮಗೆ ಕೇಸರಿ ಪೇಟ ತೊಡಿಸಲು ಬಂದವರನ್ನು ಗದರುತ್ತೀರಿ, ಭಗವಾ ಪೇಟವನ್ನು ಕಿತ್ತೊಗೆಯುತ್ತೀರಿ. ಅದೇ ಮುಸ್ಲೀಮರ ಟೋಪಿ ಶಾಲು ಹಾಕಿಕೊಂಡು ಠಳಾಯಿಸುತ್ತೀರಿ. ನಿಮಗೆ ಕೆಂಪು ನಾಮ ಕಂಡರೆ ಭಯವಾಗುತ್ತದೆ. ಹಿಂದೂ ಆಚರಣೆಗಳೆಂದರೆ ತಿರಸ್ಕಾರದಿಂದ ‌ನೋಡುತ್ತೀರಿ. ಬೇರೆ ಧರ್ಮದವರ ಹಬ್ಬಗಳಲ್ಲಿ ಮಿರಿಮಿರಿ ಮಿಂಚುತ್ತೀರಿ. ಅದಕ್ಕೇ ನಿಮ್ಮನ್ನು ಹಿಂದೂ ವಿರೋಧಿಗಳು ಅಂತ ಜನ ಕರೆಯುತ್ತಾರೆ ಅಷ್ಟೇ. ಇದನ್ನು ಅರ್ಥ ಮಾಡಿಕೊಳ್ಳಿ.

ಸಿದ್ದರಾಮಯ್ಯನವರೇ ನಮ್ಮ ನಿಷ್ಠೆ ಪ್ರಶ್ನಿಸುವ ನೀವು ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ, ನಿಮ್ಮ ನಿಷ್ಠೆ ರಾಷ್ಟ್ರದ ಒಳಿತಿಗೋ? ಅಥವಾ ರಾಷ್ಟ್ರವಿರೋಧಿಗಳಿಗೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ? ಷರಿಯತ್ ಕಾನೂನಿಗೋ? ನಿಮ್ಮ ನಿಷ್ಠೆ ಮಹಾತ್ಮ ಗಾಂಧೀಜಿಗೋ? ನಕಲಿ ಗಾಂಧೀಗಳಿಗೋ?

ಸಿದ್ದರಾಮಯ್ಯನವರೇ, ನಿಮ್ಮದೇ ಹೈಕಮಾಂಡ್ ರಿಮೋಟ್ ಇಲ್ಲದೇ ನಿಮಗೆ ನಿಮ್ಮ ಪಕ್ಷದ ಒಂದು ಸಣ್ಣ ನಿರ್ಧಾರವನ್ನೂ ತೆಗೆದುಕೊಳ್ಳಲು ಆಗುವುದಿಲ್ಲ. ಈಗೀಗ ಕಾಂಗ್ರೆಸ್ ನಲ್ಲೇ ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ನೀವು ಪಾಲಿಸದ ತತ್ವ ಸಿದ್ಧಾಂತದ ಬಗ್ಗೆ ಮಾತಾಡುವ ಗೋಜಿಗೆ ಹೋಗದೆ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಬಿಟ್ಟು ನೇರವಾಗಿ ಚುನಾವಣೆಗೆ ಬನ್ನಿ, ಗೆಲುವು ರಾಷ್ಟ್ರವಾದದ್ದೋ? ರಾಷ್ಟ್ರ ವಿರೋಧಿಗಳದ್ದೋ? ನೋಡಿಯೇ ಬಿಡೋಣ ಎಂದು ಸವಾಲ್ ಹಾಕಿದರು.