Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜನರ ಭಾವನೆಗಳ ಜತೆ ಚಲ್ಲಾಟವಾಡುವುದೇ ಬಿಜೆಪಿ ರೂಢಿಯಾಗಿದೆ; ಲಕ್ಷ್ಮಿ ಹೆಬ್ಬಾಳ್ಕರ್

localview news

ಬೆಳಗಾವಿ : ಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಿ ಜನರ ಭಾವನೆಗಳ ಜತೆ ಚಲ್ಲಾಟವಾಡಿ ತಮ್ಮ ಪರ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದು ಬಿಜೆಪಿಯವರಿಗೆ ರೂಢಿಯಾಗಿಬಿಟ್ಟಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಜನರಿಗೆ ಬದುಕು, ಜೀವನವನ್ನು ಕಟ್ಟಿಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಜನರ ಭಾವನೆಗಳ ಜತೆ ಚಲ್ಲಾಟವಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜನರ ಜೀವಕ್ಕಿಂತ ಅವರಿಗೆ ರಾಜಕಾರಣವೇ ಮುಖ್ಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು.

ರಾಜಕಾರಣದಲ್ಲಿ ಹಿರೋ ಆದವನು ಜಿರೋ ಆಗುತ್ತಾನೆ. ಜೀರೋ ಆದವನು ಹೀರೋ ಆಗುತ್ತಾನೆ. ಆದರೆ ಯಾವತ್ತೂ ಜನ ಸಾಮಾನ್ಯರು ಹಿರೋ ಅಗಿಯೇ ಇರುತ್ತಾರೆ ಹೊರತು ಜನಪ್ರತಿನಿಧಿಗಳಲ್ಲ. ಮತದಾರರು ನಮ್ಮನ್ನು ಹೀರೋಗಳನ್ನಾಗಿ ಮಾಡುತ್ತಾರೆ. ನಮ್ಮ ದೃಷ್ಟಿಯಲ್ಲಿ ನಿಜವಾದ ಹೀರೋಗಳೆಂದರೆ ಮತದಾರರು ಎಂದರು.

ಒಂದು ಸಮಯದಲ್ಲಿ ಕಾಂಗ್ರೆಸ್ ಒಂದಂಕಿಯಿಂದ ಆರಂಭವಾಗಿ ಇಡೀ ದೇಶವ್ಯಾಪಿಯಾಯಿತು. ಇಂದು ಕಾಂಗ್ರೆಸ್ ದೇಶದ ಮೂಲೆ ಮೂಲೆಯಲ್ಲಿಯೂ ಇದೆ. ಆದರೆ ನಾವಿಂದು ಸೋತಿರಬಹುದು. ನಮ್ಮ ಪರ್ಸಂಟೆಜ್ ವೋಟಿಂಗ್ ರಾಜ್ಯ ಹಾಗೂ ದೇಶದಲ್ಲಿದೆ. ಕತ್ತಲು ಕಳೆದ ಮೇಲೆ ಬೆಳಕು ಬರುತ್ತದೆ. ಇಂದು ನಮಗೆ ಕಷ್ಟದ ದಿನವಿರಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ, ಸಿದ್ದರಾಮಯ್ಯ, ಡಿಕೆಶಿ ನಡುವೆಯೇ ಕಿತ್ತಾಟವಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು, ಪಕ್ಷ ಸಂಘಟನೆಯಾಗಲು ಬಿ.ಎಸ್.ಯಡಿಯೂರಪ್ಪ ಅವರ ಪ್ರಾಮಾಣಿಕ ಪ್ರಯತ್ನ ಕಾರಣ. ಯಡಿಯೂರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಯಡಿಯೂರಪ್ಪ ಎಂಬ ಕಾಲವಿತ್ತು. ಲಿಂಗಾಯತ ಸಮಾಜ ಯಡಿಯೂರಪ್ಪನವರ ಜತೆಗಿದೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಅಂತಹ ಯಡಿಯೂರಪ್ಪನವರನ್ನೇ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಅವರ ಮಗ ವಿಜಯೇಂದ್ರಗೂ ಎಂಎಲ್ ಸಿ ಟಿಕೆಟ್ ಕೊಡದೇ ಪಕ್ಷದಿಂದ ದೂರವಿಡುತ್ತಿದ್ದಾರೆ. ಬಿಜೆಪಿ ರಾಜ್ಯಾದ್ಯಕ್ಷ ಕಟೀಲ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವುದನ್ನು ಬಿಟ್ಟು, ಬಿಜೆಪಿಗಾಗಿಯೇ ದುಡಿದ ಯಡಿಯೂರಪ್ಪ ಹಾಗೂ ಅವರ ಕುಟುಂಬವನ್ನು ಅವರ ಪಕ್ಷ ನಡೆಸಿಕೊಳ್ಳುತ್ತಿರುವ ರೀತಿಯನ್ನು ಮೊದಲು ನೋಡಲಿ ಎಂದು ತಿರುಗೇಟು ನೀಡಿದರು.