Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೇಶ, ರಾಜ್ಯ ಹಾಳು ಮಾಡುವ ಪಕ್ಷಕ್ಕೆ ಮತ ನೀಡಬೇಡಿ: ಸಿದ್ದರಾಮಯ್ಯ

localview news

ಬೆಳಗಾವಿ: ದೇಶ, ರಾಜ್ಯವನ್ನು ಹಾಳು ಮಾಡುವ ಪಕ್ಷಕ್ಕೆ ಮತ ನೀಡಬೇಡಿ. ಯಾರು ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಾರೋ ಅವರು ದೇಶ ದ್ರೋಹಿಗಳು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಮರಾಠಾ ಮಂಡಲ ಶಿಕ್ಷಣ ಸಂಸ್ಥೆಯಲ್ಲಿ ವಾಯವ್ಯ ಶಿಕ್ಷಕರ, ಪದವೀಧರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ, ಸುನೀಲ್‌ ಸಂಕ್‌ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯವನ್ನು ಉಳಿಸಿ, ಗೌರವಿಸುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ವಿದ್ಯಾವಂತರು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಯೋಚಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇವತ್ತಿನ ಬೆಳವಣಿಗೆಗಳು ಮತ್ತು ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿನ ಆಡಳಿತವನ್ನು ಹೋಲಿಕೆ ಮಾಡಿದರೇ ನಿಮಗೆ ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ತಿಳಿಯುತ್ತದೆ ಎಂದರು.

ವಿದ್ಯಾವಂತ ಮತದಾರರು ದೇಶದ ಆರ್ಥಿಕತೆ, ನಿರುದ್ಯೋಗ, ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ ಆಗುತ್ತಿದೆಯೇ ಎಂಬುವುದನ್ನು ಅರಿತು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ನಾನು ಸಿಎಂ ಇದ್ದಾಗ ಜನಪರ ಆಡಳಿತ ನೀಡಿ, ಶಿಕ್ಷಕರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದೇನೆ ಎಂದು ಸ್ಮರಿಸಿದರು.

ರಾಜ್ಯದಿಂದ ಕೇಂದ್ರಕ್ಕೆ 19. ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತದೆ. ಆದರೆ 4 ಲಕ್ಷ ಕೋಟಿ ರೂ. ರಾಜ್ಯಕ್ಕೆ ಕೊಟ್ಟು ಪ್ರಧಾನಿ ಮೋದಿ 14 ಲಕ್ಷ ಕೋಟಿ ರೂಪಾಯಿ ಅವರೇ ಇಟ್ಟುಕೊಂಡು ರಾಜ್ಯಕ್ಕೆ ಸಾಕಷ್ಟು ದುಡ್ಡು ಕೊಟ್ಟಿವಿ ಕೊಟ್ಟಿವಿ ಅಂತ ಜಾಹೀರಾತು ನೀಡುತ್ತಾರೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ 102 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು.

ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಅಲ್ಲ. ಅದಕ್ಕೆ ಮೋದಿಯವರೇ ಕಾರಣ. ಸಿಮೆಂಟ್, ಕಬ್ಬಿಣ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿವೆ. ಜನರಿಗೆ ಮಣ್ಣು ತಿನ್ನಿಸುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದ ಅವರು, ಇನ್ನೂ ಬಿಜೆಪಿಯ ಹಣಮಂತ ನಿರಾಣಿ, ಅರುಣ ಶಹಾಪುರ ಜನತೆಗೆ ಮುಖವನ್ನೇ ತೋರಿಸಲ್ಲ. ಇನ್ನೂ ಅಭಿವೃದ್ಧಿ ಎಲ್ಲಿಂದ ಬಂತು ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಈ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದ್ದು, ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಯವರು ಕಳೆದ 30 ವರ್ಷದಿಂದ ರಾಜಕೀಯದಲ್ಲಿದ್ದು, ಈ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ನೂ ಪದವೀಧರರ ಮತಕ್ಷೇತ್ರದ ಅಭ್ಯರ್ಥಿ ಸುನೀಲ್‌ ಸಂಕ ಪ್ರಾಮಾಣಿಕ, ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿದ್ದು, ಇಬ್ಬರೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಮಾತನಾಡಿ, ಶಿಕ್ಷಕರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಮಸ್ಯೆಯನ್ನು ಹೊಂದಿದ್ದು, ಈ ಎಲ್ಲಾ ಸಮಸ್ಯೆ ಗಳ ಮುಕ್ತಿಗೆ ಪ್ರಾಮಾಣಿಕ ಪ್ರಯತ್ನ ಪಡುವ ಅವಶ್ಯಕತೆ ಇದೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದರು.

ಯಾವುದೇ ಸಮಸ್ಯೆ ಇದ್ದರೆ ಅದನ್ನು ನಿವಾರಿಸಲು ಪ್ರಕಾಶ ಹುಕ್ಕೇರಿಯವರು ಪ್ರಾಮಾಣಿಕ, ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಪದವೀಧರರ ಮತಕ್ಷೇತ್ರದ ಅಭ್ಯರ್ಥಿ, ಸರಳ ವ್ಯಕ್ತಿ ಸುನೀಲ್ ಸಂಕ ಅವರ ಆಯ್ಕೆಗೂ ನಿಮ್ಮ ಅಮೂಲ್ಯ ಮತ ನೀಡಿ ಎಂದು ಕರೆ ನೀಡಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಎಲ್ಲಾ ವರ್ಗಗಳ ಪ್ರಗತಿಗೆ ಶ್ರಮಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಜನತೆ ಭಾವನೆಗಳ ಜತೆ ಆಟವಾಡಲು ಕೆಲಸ ಯಾವತ್ತೂ ಮಾಡಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ದಾಂತಗಳಿದ್ದು, ಅನೇಕ ಮಹನೀಯರು ತ್ಯಾಗ ಬಲಿದಾನಗಳ ಮೂಲಕ ದೇಶದ ಐಕ್ಯತೆಗಾಗಿ ತಮ್ಮ ಅವಿರತ ಸೇವೆಯನ್ನು ಸಲ್ಲಿಸಿದ್ದಾರೆ. ಈ ತ್ಯಾಗ ಬಲಿದಾನಗಳನ್ನು ಪರಿಗಣಿಸಿ, ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ, ಕಾಂಗ್ರೆಸ್ ಇತಿಹಾಸವೇ ಈ ದೇಶ ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸೋಣ ಎಂದರು.

ಶಾಸಕಿ ಅಂಜಲಿ ನಿಂಬಾಳಕರ್ ಮಾತನಾಡಿ, ಅಭಿವೃದ್ಧಿಗೆ ಆದ್ಯತೆ ನೀಡುವರನ್ನು ಆಯ್ಕೆ ಮಾಡಿ. ಇತಿಹಾಸ ತಿದ್ದುವರನ್ನು ಮನೆಗೆ ಕಳುಹಿಸಿ ಎಂದು ಕರೆ ನೀಡಿದರು. ಇದೇ ವೇಳೆ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ, ಪದವೀಧರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ಮತಯಾಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ನಾಗರಾಜ ಯಾದವ್, ಶರಣಪ್ಪ ಮಂಟೂರ್, ಮಾಜಿ ಸಚಿವರಾದ ಎ.ಬಿ. ಪಾಟೀಲ್, ವೀರಕುಮಾರ ಪಾಟೀಲ್‌, ಮರಾಠ ಮಂಡಳ ಶಿಕ್ಷಣ ಸಮಿತಿಯ ಅಧ್ಯಕ್ಷೆ ರಾಜಶ್ರೀ ಹಲಗೇಕರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಾಜಿ ಶಾಸಕರಾದ ಕಾಕಾ ಸಾಹೇಬ್ ಪಾಟೀಲ್, ಅಶೋಕ ಪಟ್ಟಣ, ಫಿರೋಜ್‌ ಸೇಠ್‌, ರಮೇಶ ಕುಡಚಿ, ಬೆಳಗಾವಿ ನಗರ ಅಧ್ಯಕ್ಷ ರಾಜು ಸೇಠ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ಕೆಪಿಸಿಸಿ ಕಾರ್ಯದರ್ಶಿಗಳಾದ ಸುನೀಲ್‌ ಹಣಮಣ್ಣವರ್‌, ಮಹಾವೀರ ಮೋಹಿತೆ, ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ, ಬಸವರಾಜ ಬೂಟಾಳಿ, ಮರಾಠ ಮಂಡಳ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಪಕ್ಷದ್ ಕಾರ್ಯಕರ್ತರು ಉಪಸ್ಥಿತರಿದ್ದರು.