Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮತದಾನ, ಮತ ಎಣಿಕೆಗೆ ಸಕಲ‌ ಸಿದ್ಧತೆ: ಚುನಾವಣಾಧಿಕಾರಿ ಆಮ್ಲಾನ್ ಬಿಸ್ವಾಸ್

localview news

ಬೆಳಗಾವಿ: ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಮತ್ತು ಮತ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳಿಗೆ ಮತದಾನ ಹಾಗೂ ಮತ ಎಣಿಕೆ ಕುರಿತು ತಿಳಿವಳಿಕೆ ನೀಡಲು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್ 13 ರಂದು ಮತದಾನ ನಡೆಯಲಿದ್ದು, ಜೂನ್ 15 ರಂದು ಮತ ಎಣಿಕೆ ನಡೆಯಲಿದೆ. ಮತದಾನ ಅವಧಿ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಅರ್ಹ‌ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು‌ ಮಾಡಲು ಸರಕಾರ ಆದೇಶಿಸಿದೆ. ಪದವೀಧರ ಮತಕ್ಷೇತ್ರದ ಮತದಾರರಿಗೆ ಬಲಗೈಯ ತೋರುಬೆರಳಿಗೆ ಶಾಹಿ ಹಚ್ಚಲಾಗುವುದು. ಅದೇ ರೀತಿ ಶಿಕ್ಷಕರ ಮತಕ್ಷೇತ್ರ ಮತದಾರರಿಗೆ ಬಲಗೈಯ ನಡುವಿನ ಬೆರಳಿಗೆ ಶಾಹಿಯನ್ನು ಹಚ್ಚಲಾಗುವುದು.

ಎಲ್ಲ ಅಭ್ಯರ್ಥಿಗಳು ಚುನಾವಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಇದುವರೆಗೆ ಯಾವುದೇ ರೀತಿಯ ಉಲ್ಲಂಘನೆಗಳು ವರದಿಯಾಗಿರುವುದಿಲ್ಲ.

ಬಹಿರಂಗ ಪ್ರಚಾರ ಶನಿವಾರ(ಜೂ.11) ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. ಈಗಾಗಲೇ ಮನೆ‌ಮನೆಗೆ ತೆರಳಿ ಶೇ.55 ರಷ್ಟು ಮತದಾರರಿಗೆ ಮತಚೀಟಿಗಳನ್ನು ವಿತರಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಎಲ್ಲರಿಗೂ ತಲುಪಿಸಲಾಗುವುದು.

ನಾಮಪತ್ರ ಸ್ವೀಕಾರಕ್ಕೆ ಹತ್ತು ದಿನಗಳ ಮುಂಚಿತವಾಗಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿರುತ್ತದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ನೀಡಿರದ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವ ಸಾಧ್ಯತೆ ಇರಬಹುದು ಎಂದು ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಕ್ಕೆ ಅವಕಾಶ ನೀಡಿಲ್ಲ ಎಂದರು. ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಯ ಸಂಸ್ಥೆಯೊಂದರಲ್ಲಿ ಸುಳ್ಳು ದಾಖಲೆ ನೀಡಿ‌ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿರುವುದು ಗಮನಕ್ಕೆ ಬಂದಾಗ ಅಂತಹ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ಕೇಂದ್ರ ಸಿದ್ಧತೆ:

ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನ ಕಟ್ಟಡದಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಹಾಗೂ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ‌ ಕೇಂದ್ರಗಳಲ್ಲಿ ಮೊಬೈಲ್ ಹಾಗೂ ಶಾಹಿ ಪೆನ್ ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಇದೇ ರೀತಿ ನೀರಿನ ಬಾಟಲ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿರುತ್ತದೆ. ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯವಾಗಿದ್ದು, ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರುಗಳಿಗೆ ಪಾವತಿ ಆಧಾರದ ಮೇಲೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಮೊದಲ ಪ್ರಾಶಸ್ತ್ಯ ಮತ ಕಡ್ಡಾಯ:

ಪ್ರಸ್ತುತ ಚುನಾವಣೆಯಲ್ಲಿ ಮತದಾನವನ್ನು ಪ್ರಾಶಸ್ತ್ಯದ ಮೂಲಕ ಇರುತ್ತದೆ. ಮೊದಲನೇ ಪ್ರಾಶಸ್ತ್ಯ ನೀಡಿದಲ್ಲಿ ಮಾತ್ರ ಸದರಿ ಮತದಾನವು ಸಿಂಧುವಾಗುತ್ತದೆ. ಉಳಿದ ಪ್ರಾಶಸ್ತ್ಯ ವು ಐಚ್ಛಿಕವಾಗಿರುತ್ತದೆ. ಮತದಾನ ಮಾಡುವಾಗ ಅಂತರಾಷ್ಟ್ರೀಯ ಅಂಕಿ, ಕನ್ನಡ, ರೋಮನ್ ಹಾಗೂ ದೇವನಾಗರಿ ಅಂಕಿಗಳನ್ನು ಬಳಸಬಹುದು. ಇವುಗಳಲ್ಲಿ ಯಾವುದಾದರೂ ಒಂದೇ ಭಾಷೆಯ ಅಂಕಿಗಳನ್ನು ಬಳಸಬೇಕು. ಅಂದಾಗ ಮಾತ್ರ ಮತ ಸಿಂಧುವಾಗುತ್ತದೆ.

ಮತ ಎಣಿಕೆಗೆ ಸಂಬಂಧಿಸಿದಂತೆ ಇರುವ ನಿಯಮಾವಳಿ‌ ಹಾಗೂ ಮಾರ್ಗಸೂಚಿಗಳನ್ನು ಮತ ಎಣಿಕೆ ಕೇಂದ್ರಕ್ಕೆ‌ ನಿಯೋಜಿತರಾಗುವ ಆಯಾ ಪಕ್ಷ ಅಥವಾ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟರುಗಳಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಚುನಾವಣಾಧಿಕಾರಿಗಳು ಮನವಿ ಮಾಡಿಕೊಂಡರು.

ಒಂದೇ ಮತಗಟ್ಟೆಯಲ್ಲಿ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಮತಗಳ ಚಲಾವಣೆಗೆ ಅನುಕೂಲವಾಗುವಂತೆ ಪ್ರತ್ಯೇಕ ಮತಪೆಟ್ಟಿಗೆಗಳನ್ನು ಇಡಲಾಗಿರುತ್ತದೆ ಎಂದು ವಿವರಿಸಿದರು.

ವಾಯವ್ಯ ಶಿಕ್ಷಕರ ಮತಕ್ಷೇತ್ರದ ಮತದಾರರ ವಿವರ:

ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 25,388 ಮತದಾರರಿದ್ದಾರೆ. ಇದರಲ್ಲಿ 17,238 ಪುರುಷ ಹಾಗೂ 8,150 ಮಹಿಳಾ ಮತದಾರರಿದ್ದಾರೆ. ಮತಕ್ಷೇತ್ರದ ವ್ಯಾಪ್ತಿಯ ಜಿಲ್ಲೆಗಳಾದ ಬೆಳಗಾವಿ(13,287), ಬಾಗಲಕೋಟೆ (5173) ಹಾಗೂ ವಿಜಯಪುರ(6928) ಮತದಾರರಿದ್ದಾರೆ.

ವಾಯವ್ಯ ಪದವೀಧರ ಮತಕ್ಷೇತ್ರದ ಮತದಾರರ ವಿವರ: ವಾಯವ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 99,598 ಮತದಾರರಿದ್ದಾರೆ. ಇದರಲ್ಲಿ 71,040 ಪುರುಷ ಹಾಗೂ 28,554 ಮಹಿಳಾ ಮತದಾರರಿದ್ದಾರೆ. ಮತಕ್ಷೇತ್ರದ ವ್ಯಾಪ್ತಿಯ ಜಿಲ್ಲೆಗಳಾದ ಬೆಳಗಾವಿ(45,124), ಬಾಗಲಕೋಟೆ (33,651) ಹಾಗೂ ವಿಜಯಪುರ(20,823) ಮತದಾರರಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ವಿವರ:

ಕರ್ನಾಟಕ ವಾಯವ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ಪರ್ಧೆ ಬಯಸಿ 23 ಜನರು 27 ನಾಮಪತ್ರಗಳನ್ನು ಸಲ್ಲಿಸಿದ್ದರು. ಅದರಲ್ಲಿ 16 ನಾಮಪತ್ರಗಳು ಸಿಂಧುವಾಗಿದ್ದು, 11 ಅಸಿಂಧುವಾಗಿರುತ್ತವೆ. 5 ಜನರು‌ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡಿರುತ್ತಾರೆ.

ಅದೇ ರೀತಿ ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ಪರ್ಧೆ ಬಯಸಿ 16 ಜನರು 22 ನಾಮಪತ್ರಗಳನ್ನು ಸಲ್ಲಿಸಿದ್ದರು. ಅದರಲ್ಲಿ 12 ನಾಮಪತ್ರಗಳು ಸಿಂಧುವಾಗಿದ್ದು, 4 ಅಸಿಂಧುವಾಗಿರುತ್ತವೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ನಜ್ಮಾ ಪೀರಜಾದೆ ಉಪಸ್ಥಿತರಿದ್ದರು. ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.