Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

localview news

ಬೆಂಗಳೂರು: ರಾಜ್ಯಕ್ಕೆ ಜೂನ್ 20 ಮತ್ತು 21 ರಂದು ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಮ್ಮಘಟ್ಟ ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿರುವ ಸಾರ್ವಜನಿಕ ಸಭೆಯ ವೇದಿಕೆ ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಜೂನ್ 20 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರ ಕಾರ್ಯಕ್ರಮ ಪಟ್ಟಿ ಬಂದಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಬೇಕೆಂಬ ಉದ್ದೇಶದಿಂದ ನಮ್ಮೆಲ್ಲಾ ಸಚಿವ ಸಂಪುಟದ ಸಹೋದ್ಯೋಗಿಗಳು, ಹಿರಿಯ ನಾಯಕ ಸದಾನಂದ ಗೌಡರು, ಎಲ್ಲಾ ಶಾಸಕರು ಶ್ರಮವಹಿಸುತ್ತಿದ್ದಾರೆ. ಅಧಿಕಾರಿಗಳ ಕೂಡ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಿದ್ದಾರೆ. ಬಿಬಿಎಂಪಿ, ಬಿಡಿಎ, ಜಿಲ್ಲಾಧಿಕಾರಿಗಳು ಮತ್ತು ಭದ್ರತಾ ದೃಷ್ಟಿಯಿಂದ ಕರ್ನಾಟಕ ಪೊಲೀಸ್, ಬೆಂಗಳೂರು ಆಯುಕ್ತರು ಸೇರಿದಂತೆ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದಾರೆ. ಎಸ್.ಪಿ.ಜಿ ಮಾರ್ಗದರ್ಶನದಲ್ಲಿ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮ ವಿವರ:

ಪ್ರಧಾನ ಮಂತ್ರಿಗಳು ಬೆಳಿಗ್ಗೆ 11.55 ಕ್ಕೆ ಯಲಹಂಕ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರೈನ್ ಸೆಲ್ ಅಭಿವೃದ್ಧಿ ಕೇಂದ್ರವನ್ನು ಕ್ರಿಸ್ ಗೋಪಾಲಕೃಷ್ಣ ಅವರು 450 ಕೋಟಿ ರೂ.ಗಳ ದೇನಿಗೆಯಲ್ಲಿ ನಿರ್ಮಿಸಿದ್ದು ಅದರ ಉದ್ಘಾಟನೆ ನಡೆಯಲಿದೆ. ನಂತರ ಮೈಂಡ್ ಟ್ರೀ ಸಂಸ್ಥೆ 850 ಹಾಸಿಗೆಗಳ ಸಂಶೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ ಎಂದರು.

ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ:

ನಂತರ 15000 ಕೋಟಿ ರೂ.ಗಳ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರು ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ದೊರಕಲಿದೆ. ಇದರ ಜೊತೆಗೆ 6 ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಲಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಚಾಲನೆ ದೊರಕಲಿದೆ. ಎಸ್.ಟಿ. ಆರ್.ಆರ್. ಯೋಜನೆಗೂ ಶಂಕುಸ್ಥಾಪನೆ ನೆರವೇರಲಿದೆ. ದಾಬಸಪೇಟೆಯಿಂದ ಹೊಸಕೋಟೆ ಹಳೆ ಮದ್ರಾಸು ರಸ್ತೆಯವರೆಗೂ ಸಂಪರ್ಕಿಸುವ ರಸ್ತೆ ಇದು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರೊಂದಿಗೆ 2 ಬಾರಿ ಮಾತನಾಡಿದ ಮೇಲೆ ವಿಶೇಷ ವಿನಾಯ್ತಿ ನೀಡಿ ಆದೇಶ ಮಾಡಿದ್ದಾರೆ. ವಿಶೇಷ ವಿನಾಯ್ತಿ ನೀಡಿದ ಮೇಲೆ ಈ ಯೋಜನೆಗೆ ಚಾಲನೆ ದೊರೆಯಲಿದೆ. ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿಗಳು ಮಾತನಾಡಲಿದ್ದಾರೆ ಎಂದರು.

ಇದಾದ ನಂತರ ಬೆಂಗಳೂರು ವಿವಿಯಲ್ಲಿರುವ ಡಾ:

ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಭೇಟಿ ನೀಡಿ ಮೂರ್ತಿ ಅನಾವರಣ ಹಾಗೂ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ಮೈಸೂರಿಗೆ ತೆರಳಲಿದ್ದಾರೆ.

ಅಲ್ಲಿ ಎರಡು ದೊಡ್ಡ ಕಾರ್ಯಕ್ರಮ ಗಳಿವೆ. ಫಲಾನುಭವಿಗಳ ಸಮ್ಮೇಳನವಿದೆ. ಅದನ್ನು ಮುಗಿಸಿ ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮ ಯಶಸ್ವಿಗೊಳಿಸಿ :

ಈ ಎಲ್ಲಾ ಕಾರ್ಯಕ್ರಮ ಗಳ ಸಿದ್ಧತೆಗಳ ವೀಕ್ಷಣೆ ಮಾಡಿದ್ದು, ಅಚ್ಚುಕಟ್ಟಾಗಿ ಸಿದ್ದತೆ ಆಗುತ್ತಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಪ್ರಧಾನಮಂತ್ರಿಗಳು ಆಗಮಿಸುವ ಸಂದರ್ಭದಲ್ಲಿ ಅತಿ ಹೆಚ್ಚು ಜನ ಸೇರುತ್ತಾರೆ. ಆದ್ದರಿಂದ ಅಗತ್ಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಬೆಂಗಳೂರಿನ ಮಹಾಜನತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರುತ್ತೇನೆ ಎಂದರು.

ಕೋವಿಡ್ ಪರೀಕ್ಷೆ :

ಸಾರ್ವಜನಿಕ ಕಾರ್ಯಕ್ರಮ ದಲ್ಲಿ ಭಾಗವಹಿಸುವವರು ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸಬೇಕು. ಒಳಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.