Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಿವಯೋಗದಲ್ಲಿಯೇ ಯೋಗ ಆಚರಿಸಿದ ವೀರಶೈವ ಧರ್ಮ - ಶ್ರೀ ರಂಭಾಪುರಿ ಜಗದ್ಗುರುಗಳು

localview news

ಬೆಳಗಾವಿ :ಧರ್ಮಭೂಮಿ ಎನಿಸಿದ ಭಾರತ ದೇಶದಲ್ಲಿ ಯೋಗ ಸಾಧನೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಶಿವಯೋಗಾಚರಣೆಯಲ್ಲಿಯೇ ಯೋಗದ ಹಿರಿಮೆಯನ್ನು ಬೋಧಿಸಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.

ಅವರು ಸೋಮವಾರ ನಗರದ ಲಕ್ಷ್ಮಿ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸಂಯೋಜಿಸಿದ ಉಚಿತ ಯೋಗ ಶಿಬಿರದ ನಾಲ್ಕನೇ ದಿನದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಆರೋಗ್ಯ ಭಾಗ್ಯ ಎಲ್ಲ ಭಾಗ್ಯಗಳಿಗಿಂತ ಮಿಗಿಲು. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಹೀಗಾಗಿ ನಮ್ಮ ಪೂರ್ವಜರು ದಿನದಿನದ ಬದುಕಿನಲ್ಲಿ ಯೋಗ ಆಚರಿಸಿಕೊಂಡು ಬಂದಿದ್ದನ್ನು ಕಾಣುತ್ತೇವೆ. ಪ್ರಾಚೀನ ಕಾಲದ ಋಷಿ ಮುನಿಗಳು ಮತ್ತು ಆಚಾರ್ಯರು ಯೋಗ ಸಾಧನೆಯ ಮೂಲಕ ಆರೋಗ್ಯವಂತರಾಗಿ ಸುದೀರ್ಘಕಾಲ ಬಾಳಿ, ಬದುಕಿದ ಇತಿಹಾಸವನ್ನು ಕಾಣುತ್ತೇವೆ. ಇಂದಿನ ಒತ್ತಡದ ಬದುಕಿನಲ್ಲಿ ಸಿಲುಕಿದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ.

ದಿನನಿತ್ಯ ಅರ್ಧಗಂಟೆ ಯೋಗಭ್ಯಾಸ ಮಾಡಿದರೆ ಮಾನಸಿಕ ಶಾಂತಿ- ಸಮೃದ್ಧ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಯೋಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿರುವುದು ಹೆಮ್ಮೆಯ ಸಂಗತಿ. ಯೋಗ ಸಾಧನೆಗೆ ಜಾತಿ ಮತ ಪಂಥಗಳ ಸೋಂಕಿಲ್ಲ.

ಎಲ್ಲರೂ ಯೋಗ ಸಾಧನೆಯ ಮೂಲಕ ಆರೋಗ್ಯ ಕಾಪಾಡಿಕೊಂಡು ಬರಬೇಕೆಂದ ಜಗದ್ಗುರುಗಳು ತಿಳಿಸಿದರು. ಎಲ್ಲ ಧಾರ್ಮಿಕ ಧರ್ಮ ಪೀಠಗಳಲ್ಲಿ ಮತ್ತು ಮಠಗಳಲ್ಲಿ ಯೋಗ ಕೇಂದ್ರ ಪ್ರಾರಂಭಿಸಲು ಭಾರತ ಸರ್ಕಾರ ಯೋಜನೆ ರೂಪಿಸಿದರೆ ಇದರ ಪರಿಣಾಮ ಜನ ಸಮುದಾಯದ ಮೇಲೆ ಪ್ರಭಾವ ಉಂಟಾಗುವುದರಲ್ಲಿ ಯಾವ ಸಂದೇಹ ಇಲ್ಲವೆಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳ ಆದೇಶದಂತೆ 5 ದಿನಗಳ ಕಾಲ ಉಚಿತ ಯೋಗ ತರಬೇತಿ ಶಿಬಿರ ಹಮ್ಮಿಕೊಂಡಿದ್ದೇವೆ. ಸ್ವತ: ಶ್ರೀ ರಂಭಾಪುರಿ ಜಗದ್ಗುರುಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗದ ಬಗೆಗೆ ಮನವರಿಕೆ ಮಾಡಿಕೊಟ್ಟಿರುವುದು ಈ ಭಾಗದ ಭಕ್ತರ ಸೌಭಾಗ್ಯ ಎಂದರು.

ಸಂಗೊಳ್ಳಿ ಹಿರೇಮಠದಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಚಂದರಗಿ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ರೇಣುಕ ಗಡದೇಶ್ವರ ದೇವರು, ಬೈಲಹೊಂಗಲ ಶಕ್ತಿ ದೇವಾಲಯದ ಮಹಾಂತೇಶ ಶಾಸ್ತ್ರಿಗಳು, ಬೆಳಗಾವಿ ಚಂದ್ರಶೇಖರ ಶಾಸ್ತ್ರಿಗಳು, ಡಾ. ಪದ್ಮನಾಬ್ ಧರ ಬಾರೆ, ಯೋಗಗುರು ಅಮೋಘ ಜೈನ್ ಸೇರಿದಂತೆ ಯೋಗ ಶಿಬಿರಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.