Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವರದಕ್ಷಿಣೆ ಪಿಡುಗು ತೊಲಗುವುದ್ಯಾವಾಗ..?

localview news

 ಭಾರತ: ‘ವರದಕ್ಷಿಣೆ ನಿಷೇಧ ಕಾಯ್ದೆ’ (ಇದು ೧೯೬೧ರ ಕಾಯ್ದೆ) ಜಾರಿಗೆ ಬಂದು ಐದೂವರೆ ದಶಕ ಕಳೆದರೂ ಇನ್ನೂ ನಿಲ್ಲದ ವರದಕ್ಷಿಣೆ ಪಿಡುಗು. ಇದು ಒಂದು ದೊಡ್ಡ ಸಮಾಜಿಕ ಸಮಸ್ಯೆಯಾಗಿ ಭದ್ರವಾಗಿ ನೆಲೆಯೂರಿದೆ ಅಂತಾನೆ ಹೇಳಬಹುದು. ವರದಕ್ಷಿಣೆಗೆ ಸಂಬಂಧಿಸಿದಂತೆ ವಿಶ್ವದಲ್ಲಿ ಇರುವ ಅತ್ಯಂತ ಹಳೆಯ ಕಾಯ್ದೆ ನಮ್ಮದು, ಎಂಬ ಹೆಗ್ಗಳಿಕೆಯೂ ಇದೆ. ೧೯೬೧ ರ ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ಬಂದರೂ ಕಾಣಿಕೆ, ಸೇವೆಗಳ ರೂಪವು ಹೆಚ್ಚು ಬಲಗೊಂಡು ಬಹುರೂಪಿ ವರದಕ್ಷಿಣೆ ಪದ್ಧತಿ ರೂಢಿಗೆ ಹೊಸ ತಿರುವು ಪಡೆದುಕೊಂಡಿದೆ. ವರದಕ್ಷಿಣೆಯು ಅವಕಾಶವನ್ನು ಹೆಚ್ಚಿಸುವಂತೆ ಹೊಸ ಸಂಪ್ರದಾಯಗಳು ರೂಢಿಗೆ ಬಂದವು. ವರದಕ್ಷಿಣೆ ಪಡೆಯದ ಸಂದರ್ಭದಲ್ಲಿ ವರನ ಕುಟುಂಬವು ಸಂಕೋಚವಿಲ್ಲದೆ ಈ ಸೇವೆಯನ್ನು ತಮ್ಮ ಹಕ್ಕೆಂದು ಪಡೆಯತೊಡಗಿದವು. ಪಸ್ತುತ ದಿನದಲ್ಲಿ ಸುಕ್ಷಿತರೇ ಇಂತಹ ಹೇಯ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ವಿವಾಹವನ್ನು ಒಂದು ಜನ್ಮ ಜನ್ಮಾಂತರದ ಪವಿತ್ರ ಬಂಧವೆಂದು ಕರೆಯುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಇದು ವ್ಯಾಪಾರವಾಗಿದೆ ಎನ್ನಬಹುದು. ಪಿತೃಪ್ರಧಾನ ವ್ಯವಸ್ಥೆಯಲ್ಲಿ ವಿವಾಹದ ಸುತ್ತಲೇ ಸುತ್ತುತ್ತಿರುವ ಹೆಣ್ಣು ಅದನ್ನು ನಿರಾಕರಿಸಲಾಗದೆ, ಸುಧಾರಿಸಲಾಗದೆ ಕೊನೆಗೆ ಪ್ರತಿಭಟಿಸಿ ಹೊರಬರಲಾರದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಬಲಿಯಾಗುತ್ತಿದ್ದಾಳೆ. ನಾಲ್ಕು ಗೋಡೆಗಳಿಂದ ಸಿಡಿದು ಆಚೆ ಬಂದು ದಾಖಲಾಗುವ ಕೇಸುಗಳು ಕೂಡ ಇಡೀ ಸಮಾಜದ ಪುರುಷ ಪ್ರಧಾನ ನಿಲುವಿನ ರಾಜಕಾರಣದಿಂದಾಗಿ ನ್ಯಾಯ ಪಡೆಯಲಾರದೆ ಸೋತು ಹೋಗಿವೆ.

ಹೆಣ್ಣಿನ ಮನೆಯವರ ಆಕ್ರೋಶವು ಅತ್ಯಂತ ಭಾವುಕ ನೆಲೆಯದಾಗುತ್ತಿವೆ ಅದೆಷ್ಟೋ ಜನರು ವರದಕ್ಷಿಣೆ ಪಿಡುಗಿನಿಂದ ಸಾವು ನೋವು ಕಂಡಿದ್ದಾರೆ.  ಸತ್ತವಳು ತಿರುಗಿ ಬರುವಳೆ ಎಂಬ ದಾರ್ಶನಿಕತೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ನಿರ್ಲಕ್ಷ್ಯಗಳು ತವರಿನ ಇಚ್ಛಾಶಕ್ತಿಯನ್ನು ಕರಗಿಸುತ್ತದೆ. ಒಟ್ಟಾರೆಯಾಗಿ ಪುರುಷನ ಶ್ರೇಷ್ಟತೆಯನ್ನು, ಅಧಿಕಾರವನ್ನು ಒಟ್ಟು ಸಮಾಜವೇ ಸಮ್ಮತಿಸಿರುವಾಗ ಹೆಣ್ಣು ಬಾಳಿ ಬದುಕುವ ಹಕ್ಕು ಆತನ ಗಂಡನ ಕೃಪೆಗೆ ಪಾತ್ರವಾಗಿದೆ. ವರದಕ್ಷಿಣೆಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಹೆಣ್ಣು ಶಿಶುಹತ್ಯೆ, ಭ್ರೂಣಹತ್ಯೆಗಳಂತಹ ಅಮಾನವೀಯ ಪದ್ಧತಿಗಳು ರೂಡಿಗತಿಯಲ್ಲಿ ನಡೆದಿವೆ. ಒಟ್ಟಾರೆಯಾಗಿ ಹೆಣ್ಣಿನ ಪಾಡು ಕೇಳದಂತಾಗಿದೆ.

ಈ ನಿಟ್ಟಿನಲ್ಲಿ, ವರದಕ್ಷಿಣೆ ನಿಷೇಧ ಕಾಯ್ದೆಗೆ ಇನ್ನಷ್ಟು ಬಲಕೊಡಬೇಕಿದೆ, ಅದಕ್ಕೆ ಸ್ಪಷ್ಟ ರೂಪ ಬರಬೇಕಿದೆ. ಕೆಲವು ಹೆಣ್ಣುಮಕ್ಕಳ ಪೋಷಕರು ವರದಕ್ಷಿಣೆ ರೂಪದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಳಿಯನಿಗೆ ಕಾಣಿಕೆ ರೂಪದಲ್ಲೋ, ‘ಮದುವೆಯ ಖರ್ಚು’ ಎಂದು ಹೇಳಿಯೋ ಒಂದಿಷ್ಟು ಹಣ, ಒಡವೆ, ವಾಹನ ಇತ್ಯಾದಿಗಳನ್ನು ನೀಡುವುದಿದೆ. ಈ ಪ್ರತ್ಯಕ್ಷ, ಪರೋಕ್ಷ ರೂಪದ ಉಪಚಾರಗಳನ್ನು ಕಾನೂನು ಬದ್ಧಗೊಳಿಸಬೇಕಿದೆ.

ಮದುವೆಯ ನೋಂದಣಿ ಮಾಡಿಸುವುದು ಈಗ ಕಡ್ಡಾಯ ಹಾಗೂ ನೋಂದಣಿಯ ವೇಳೆ ಹೆಣ್ಣಿನ ಮನೆಯವರಿಂದ ಗಂಡಿನ ಮನೆಯವರು ಏನೇನು ಪಡೆದುಕೊಂಡಿದ್ದಾರೆ (ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ) ಎಂಬುದನ್ನು ಅದರಲ್ಲಿಯೇ ನಮೂದಿಸುವುದನ್ನು ಕೂಡ ಕಡ್ಡಾಯ ಮಾಡಬೇಕಿದೆ.

ಮದುವೆಯ ಮಾತುಕತೆ ಸಂದರ್ಭದಲ್ಲಿ ದಕ್ಷಿಣೆಯ ನೋಂದಣಿಗೆ ಗಂಡಿನ ಕಡೆಯವರು ಒಪ್ಪಿದರೆ ಅವರ ಮೇಲೆ ಸಂಪೂರ್ಣ ವಿಶ್ವಾಸ ಮೂಡಲು ಹೆಣ್ಣಿನ ಕಡೆಯವರಿಗೆ ಸಾಧ್ಯವಾದೀತು. ಇದರ ಜೊತೆಗೆ, ಮುಂದೆ ಅನಾಹುತ ಸಂಭವಿಸಿದರೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ತಪ್ಪಿಸಬಹುದು. ಇನ್ನೊಂದೆಡೆ, ಗಂಡಿನ ಮನೆಯವರು ಹಣ ಪಡೆದಿರುವ ಸಾಕ್ಷ್ಯ ಈ ದಾಖಲೆಯಲ್ಲೇ ಸಿಕ್ಕರೆ ವರದಕ್ಷಿಣೆಯ ಹೆಸರಿನಲ್ಲಿ ಗಂಡಿನ ಮನೆಯವರ ಮೇಲೆ ಸುಳ್ಳು ಮೊಕದ್ದಮೆ ಹೂಡುವ ಪ್ರಮೇಯವೂ ತಪ್ಪಲು ಸಾಧ್ಯವಾಗುತ್ತದೆ.

ಮಲಿಕ್ ಎಲ್ ಜಮಾದಾರ

ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ,

ರಾಣಿ ಚನ್ನಮ್ಮ ವಿವಿ ಬೆಳಗಾವಿ

ಮೋ. 9743129744