ಡಿ.20 ರಂದು ಬೆಳಗಾವಿಯಲ್ಲಿ ಬೃಹತ್ ರೈತ ಸಮಾವೇಶ
- 13 Jan 2024 , 5:36 PM
- Belagavi
- 168
ಬೆಳಗಾವಿ :ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ.20 ರಂದು ಸುವರ್ಣ ವಿಧಾನಸೌಧದ ಎದುರು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಬ್ಬಿಗೆ ಎಫ್ ಆರ್ ಪಿ ಮೊಸದ ಬೆಲೆ ನಿಗದಿ ಮಾಡಿದೆ. ರೈತರು ಕೊಳ್ಳುವ ಬೀಜ, ಗೊಬ್ಬರ, ಕೂಲಿ, ಸಾಗಣಿಕೆ ಮೂರು ಪಟ್ಟು ಹೆಚ್ಚಾಗಿದೆ. ಆದರೂ ಸರಕಾರ 5 ವರ್ಷದ ಹಿಂದಿನ ಬೆಲೆಯನ್ನೇ ನಿಗದಿ ಮಾಡಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಪ್ರತಿ ಟನ್ 3,500 ರೂ.ಬೆಲೆ ಕೊಡಬೇಕು ಮತ್ತು ರೈತರು ಸರಕಾರಕ್ಕೆ ಒಂದು ಟನ್ ಕಬ್ಜಿಗೆ 4,500 ರೂ. ತೆರಿಗೆ ಕೊಡುತ್ತಿದ್ದಾರೆ. ಅದರಲ್ಲಿ 2,000 ರೂ. ಸಹಾಯ ಧನ ನೀಡಬೇಕು ಎಂದರು.

ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಬ್ಯಾಂಕ್ ಅಧಿಕಾರಿಗಳು ರೈತರ ಆಸ್ತಿ ಜಪ್ತಿ, ಹರಾಜು, ಆನ್ ಲೈನ್ ಹರಾಜು ಮಾಡುತ್ತಿರುವುದರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಕೂಡಲೇ ಅವರು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾನೂನು ತರಬೇಕೆಂದು ಒತ್ತಾಯಿಸಿದರು.





