ಬೆಳಗಾವಿ: ಮುಂಬೈ ಕರ್ನಾಟಕದ ಒಬ್ಬರು, ಹೈದರಾಬಾದ್ ಕರ್ನಾಟಕದ ಇನ್ನೊಬ್ಬರು ಹೀಗೆ ರಾಜ್ಯದ ಇಬ್ಬರು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ರಾಜ್ಯಸಭೆ ಚುನಾವಣೆ ಟಿಕೆಟ್ ನೀಡಿದ್ದು ಸಂತಸವಾಗಿದೆ. ಬಿಜೆಪಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕುತಿದೆ ಎಂಬುದು ಸಾಬೀತಾಗಿದೆ. ಈ ಇಬ್ಬರು ನಾಯಕರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. ಅವರಿಗೆ ಅಭಿನಂದನೆಗಳು ಎಂದು ರಾಜ್ಯಸಭೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ರಮೇಶ ಕತ್ತಿ ಹುಕ್ಕೇರಿಯಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ನನಗೆ ಟಿಕೆಟ್ ತಪ್ಪಿದ್ದಕ್ಕೆ ಬೇಸರವಿಲ್ಲ. ಆದರೆ ಇಬ್ಬರು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಒಬ್ಬರು ಮುಂಬೈ ಕರ್ನಾಟಕ, ಇನ್ನೊಬ್ಬರು ಹೈದರಾಬಾದ್ ಕರ್ನಾಟಕ ಪ್ರದೇಶದವರಾದರೂ ಇಡೀ ಕರ್ನಾಟಕವನ್ನು ಪ್ರತಿನಿಧಿಸಿ ಅವರು ರಾಜ್ಯಸಭೆಗೆ ಹೋಗಿ ರಾಜ್ಯದ ಹಿತ ಕಾಯುತ್ತಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.