
ಭಾಗ್ಯಗಳ ಸರದಾರ ಬಾಗಿಲಿನಿಂದ ಮರೆಯಾದಾಗ
ಬೈಲಹೊಂಗಲ : ದಾಖಲೆಯ ಸರ್ದಾರನಾಗಿ, ಅತಿ ಹೆಚ್ಚಿನ ದಿನಗಳ ಅವಧಿಯ ಸಿಎಂ (2,902 ದಿವಸ) ಆರ್ಥಿಕ ತಜ್ಞನಾಗಿ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಇಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಹೊರನಡೆದಿರುವದು ಅತ್ಯಂತ ಕಠಿಣ ಅನಿಸಿದರೂ ಸಹ ಒಪ್ಪಲೆಬೇಕಾದ ಸಂಗತಿ.

ರಾಜ್ಯ ಕಂಡ ಒಬ್ಬ ಅಸಾಧಾರಣ ರಾಜಕಾರಣಿ, ರಾಜ್ಯವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಿ ಇಂದು ಪದತ್ಯಾಗ ಮಾಡಿದ್ದು, ಅವರ ಅಭಿಮಾನಿಗಳ ಬಳಗವನ್ನು ಕಂಗೆಡಿಸಿದೆ.

ತನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ, ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಆಶಯದೊಂದಿಗೆ ಹಲವಾರು ರೀತಿ ಪ್ರಯತ್ನ ಮಾಡಿ ಎರಡು ಸಲ ಪೂರ್ಣ ಪ್ರಮಾಣದ ಸರ್ಕಾರ ನಡೆಸಿದ ಕೀರ್ತಿ ಇವರಿಗೆ ಸಲ್ಲಬೇಕು.
ರಾಜ್ಯದ ಪ್ರಜೆಗಳಿಗೆ ನೀಡಿದ ಆಶೋತ್ತರಗಳ ಈಡೇರಿಕೆಗಾಗಿ ಹಗಲಿರುಳು ಶ್ರಮಿಸಿ ತನ್ನ ಸ್ಥಾನದಿಂದ ನಿರ್ಗಮನದ ಹಾದಿ ಹಿಡಿದ ಸಿದ್ದರಾಮಯ್ಯನವರ ಸೇವೆ ರಾಜ್ಯದ ಜನತೆ ಮರೆಯುವ ಹಾಗಿಲ್ಲ. ನಿನ್ನೆ ನಡೆದ ಘಟನೆ ಇದಕ್ಕೆ ಪೂರಕ ಎನ್ನುವಂತೆ,ವಿಧಾನಸೌಧದ ಕೊಠಡಿಯಿಂದ ಕೊನೆಯ ಬಾರಿಗೆ ನಿರ್ಗಮಿಸುವಾಗ ಸಿಬ್ಬಂದಿಯ ಕಣ್ಣಲ್ಲಿ ನೀರು ಬಂದಿರುವದಂತು, ಇವರ ಸೇವಾ ಮನೋಭಾವವನ್ನು ಎತ್ತಿ ತೋರಿಸುತ್ತದೆ.
ಸಿಕ್ಕಿರುವ ಅವಕಾಶ, ಅಧಿಕಾರವನ್ನು ಅನುಭವಿಸಿ ತನ್ನೊಂದಿಗೆ ಇರುವ ವ್ಯಕ್ತಿಗಳು ಸಹ ಬೆಳೆಯಬೇಕು, ಅವರಿಗೂ ಕೂಡಾ ಸಮಾನ ಅವಕಾಶ ಸಿಗಲಿ ಎಂದು ಉತ್ತೇಜನ ನೀಡಿ ಗೌರವಯುತವಾಗಿ ಪದತ್ಯಾಗ ಮಾಡಿದ್ದಾರೆ. ಇತಿಹಾಸದ ಪುಟಗಳಲ್ಲಿ ಇವರು ಬರೆದಿರುವ ದಾಖಲೆಗಳು ಬಹುಶಃ ಯಾರ ಕೈಯಿಂದಲೂ ಅಳಿಸಲು ಸಾಧ್ಯವಾಗದಷ್ಟು ಇವರು ಜನಮಾನಸದಲ್ಲಿ ಉಳಿದಿದ್ದಾರೆ.
ಸರಿಸುಮಾರು ಕಳೆದ 50 ವರ್ಷಗಳ ಕಾಲ ನಿರಂತರವಾಗಿ ಜನಸೇವೆಯಲ್ಲಿ ಮಗ್ನರಾಗಿ ಮುಂದಿನ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಇಂತಹ ರಾಜಕಾರಣಿಗಳು ಸಿಗುವದು ಅಪರೂಪ. ಸಿದ್ದರಾಮಯ್ಯನವರೇ ಸಾಕಷ್ಟು ವರ್ಷ ರಾಜಕಾರಣದಲ್ಲಿ ಶ್ರಮಿಸಿದ್ದೀರಿ, ಜನಸೇವೆ ಮಾಡಿದ್ದೀರಿ, ತಮ್ಮ ಅನುಭವ ಮುಂದಿನ ಪೀಳಿಗೆಗೆ ಮೀಸಲಾಗಿಡಿ ಸದಾ ಅವರಿಗೆ ಮಾರ್ಗದರ್ಶನ ನೀಡಿ, ತಮ್ಮ ವಿಶ್ರಾಂತಿ ಜೀವನಕ್ಕೆ ಶುಭವಾಗಲೀ ಅಂತ ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ವರದಿಗಾರ : ರವಿಕಿರಣ್ ಯಾತಗೇರಿ










