ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು
- 15 Jan 2024 , 1:05 AM
- Belagavi
- 83
ಯಮಕನಮರಡಿ: ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಇಲ್ಲಿನ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನೂರಾರು ಕಾರ್ಯಕರ್ತರು ವಾಹನಗಳನ್ನು ತಡೆದು ಹೆದ್ದಾರಿಯಲ್ಲೇ ಧರಣಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ್ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, "ಪೆಟ್ರೋಲ್, ಡೀಸೆಲ್ ಬೆಲೆ 100 ಗಡಿ ತಲುಪುತ್ತಿದೆ. ಆದರೆ, ಜನಸಾಮಾನ್ಯರಿಗೆ ಹೊರೆಯಾಗುತ್ತಿರುವುದನ್ನು ಸರ್ಕಾರ ಪರಿಗಣಿಸದೇ ದಿನೇ ದಿನೇ ಬೆಲೆಯನ್ನು ಏರಿಸುತ್ತಲೇ ಸಾಗಿದೆ. ಅಡುಗೆ ಅನಿಲ, ಆಹಾರ ಧಾನ್ಯಗಳು ಸೇರಿ ದಿನಬಳಕೆಯ ವಸ್ತುಗಳ ದರವೂ ಹೆಚ್ಚುತ್ತಿದೆ.

ಸರ್ಕಾರ ಕೂಡಲೇ ಬೆಲೆಯನ್ನು ಇಳಿಕೆ ಮಾಡಬೇಕು" ಎಂದು ಆಗ್ರಹಿಸಿದರು. "ಕೃಷಿ ಮಸೂದಗೆಳನ್ನು ವಾಪಸ್ ಪಡೆಯುವಂತೆ ರೈತರು ಅನೇಕ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ರೈತರ ಹೋರಾಟಕ್ಕೆ ಸರ್ಕಾರ ಬೆಲೆ ನೀಡದೇ ರಾಜಕೀಯ ಮಾಡುತ್ತಿದೆ. ರೈತರಿಗೆ ಮಾರಕವಾಗಿರುವ ನೂತನ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು ಎಚ್ಚರಿಸಿದರು. ಪ್ರತಿಭಟನೆಯಿಂದ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಿರಣ ರಜಪೂತ, ರವಿ ಜಿಂದ್ರಾಳಿ, ಮಂಜು ಕಾಂಬಳೆ, ಸಿದ್ದಿಕ ಅಂಕಲಗಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.










