ಕೋವಿಡ-19 ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಉತ್ತಮ ಕೆಲಸ: ಸುರೇಶ ಅಂಗಡಿ

ಬೆಳಗಾವಿ: ನಗರದ ಮಹಾಂತೇಶ ನಗರದಲ್ಲಿಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಹಾಗೂ ಶಾಸಕ ಅನಿಲ್ ಬೆನಕೆ ಇಂದು ಸಸಿ ನೆಡುವುದರ ಮೂಲಕ ವನಮಹೋತ್ಸವ ಆಚರಿಸಿದರು. ಈ ಮೊದಲು ಮಾಳಮಾರುತಿಯಲ್ಲಿರುವ ಗಣೇಶ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು ಸಾರ್ವಜನಿಕರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2.0 ಮೊದಲನೇ ವರ್ಷದ ಸಾಧನೆಗಳನ್ನೊಳಗೊಂಡ ಕರಪತ್ರಗಳನ್ನು ನೀಡಿ, ಮೋದಿ ಕನಸಿನ "ಆತ್ಮನಿರ್ಭರ ಭಾರತ" ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಅಂಗಡಿ ದೇಶದಲ್ಲಿ ಎರಡನೆಯ ಬಾರಿಗೆ ನರೇಂದ್ರ ಮೋದಿ ಸರ್ಕಾರ ಆಡಳಿತದಲ್ಲಿದೆ. ದೇಶದಲ್ಲಿ ಅನಿರೀಕ್ಷಿತವಾಗಿ ಬಂದೆರಗಿದ ಕೋವಿಡ 19 ಮತ್ತು ಅಂಫಾನ್ ಚಂಡಮಾರುತದಂತಹ ಸಂಕಷ್ಟಗಳು ಸವಾಲಾಗಿ ದೇಶವನ್ನು ಕಾಡಿದರೂ ಅವೆಲ್ಲವನ್ನು ಎದುರಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜೊತೆಗೆ ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೋವಿಡ 19 ಸೋಂಕು ತಡೆಗಟ್ಟುವಲ್ಲಿ ಹಲವಾರು ರೀತಿಯ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು, ರೋಗಿಗಳಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ, ಕ್ವಾರಂಟೈನಲ್ಲಿರುವವರ ಮೇಲೆ ನಿಗಾ, ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ 19 ಪ್ರಯೋಗಾಲಯ ಸ್ಥಾಪನೆ ಮಾಡಿ ಲಾಕಡೌನ್ ನಿಂದ ತೊಂದರೆಗಳಾದ ಜನರಿಗೆ ಹಲವು ರೀತಿಯಲ್ಲಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಬಿಜೆಪಿ ನಾಯಕರಾದ ಎಂ.ಬಿ.ಜಿರಲಿ, ಜ್ಯೋತಿ ಭಾವಿಕಟ್ಟಿ , ಸದಾನಂದ ಗುಂಟಪ್ಪನವರ, ಶಶಿಭೂಷಣ್‌ ಪಾಟೀಲ, ಹನುಮಂತ ಕಾಗಲ್ಕರ, ಈರಯ್ಯ ಕೋಟ್, ಸಂಜಯ ಭಂಡಾರಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

promotions

Read More Articles