ಮೌಢ್ಯದಿಂದ ಹೊರಬಂದು ನೆಮ್ಮದಿಯಿಂದ ಬದುಕಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
- 14 Jan 2024 , 10:35 PM
- Belagavi
- 108
ಯರಗಟ್ಟಿ: "ಮೌಢ್ಯದಿಂದ ಹೊರಬಂದು, ನೆಮ್ಮದಿಯಿಂದ ಬದುಕಿ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಪಟ್ಟಣದ ಶಾಂತಿಧಾಮ ಸ್ಮಶಾನದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಚಿಂತನಗೋಷ್ಠಿ ಹಾಗೂ ನೂತನ ವಾಹನ ಚಾಲನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ದೇಶದಲ್ಲಿ ದೇವರ ಹೆಸರಿನಲ್ಲಿ ಹಲವು ರೀತಿಯಲ್ಲಿ ಮೌಢ್ಯದ ಆಚರಣೆ ನಡೆಯುತ್ತಿದೆ. ಸುಮಾರು 5 ಸಾವಿರ ವರ್ಷಗಳಿಂದಲೂ ಇದು ಗೊತ್ತು, ಗುರಿಯಿಲ್ಲದೇ ನಡೆದುಕೊಂಡು ಬಂದಿದೆ. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರು ಜನರಲ್ಲಿನ ಮೌಢ್ಯಗಳನ್ನು ಹೊಡೆದೋಡಿಸಲು ಅನೇಕ ರೀತಿಯಲ್ಲಿ ಶ್ರಮಿಸಿದ್ದಾರೆ. ಜನರು ಈಗಲಾದರು ಎಚ್ಚೆತ್ತು ಮೌಢ್ಯಗಳಿಂದ ಹೊರಬರಬೇಕು" ಎಂದು ಸಲಹೆ ನೀಡಿದರು.

"ಪೂಜೆ, ಪುನಸ್ಕಾರದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಹಾಗೇನಾದರು ಆಗುವುದಿದ್ದರೇ ಎಲ್ಲರೂ ತಾವು ಮಾಡುವ ಕಾಯಕ ಬಿಟ್ಟು ಅದನ್ನೇ ಮಾಡುತ್ತಾ ಕೂರಬೇಕಾಗಿತ್ತು. ನಂಬಿಕೆಗಳು ಮೂಢನಂಬಿಕೆಗಳಾಗಿ ಪರಿವರ್ತನೆ ಆಗಿವೆ" ಎಂದರು.
ಜ್ಯೋತಿಷ್ಯದಬೆನ್ನುಬೀಳದಿರಿ: "ಮಕ್ಕಳು ತಿನಿಸು ತಿನ್ನಲು ಹಣ ಕೊಡುವುದಕ್ಕೆ ಹಿಂದೇಟು ಹಾಕುವ ನಾವು, ದೇವರ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡುತ್ತೇವೆ. ದೇವರು ಹೀಗೆ ಮಾಡಿ ಎಂದು ನಮಗೆ ಹೇಳುವುದಿಲ್ಲ. ಮಧ್ಯವರ್ತಿಗಳ ಮಾತು ಕೇಳಿ ಜನರು ದಾರಿ ತಪ್ಪುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಚುನಾವಣೆಗೆ ಒಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಎಲ್ಲರೂ ದೇವಸ್ಥಾನ, ಜ್ಯೋತಿಷಿಗಳ ಬಳಿ ಹೋಗುತ್ತಾರೆ. ಎಲ್ಲರಿಗೂ ಗೆಲ್ಲುತ್ತೀರೆಂದೇ ಅವರು ಹೇಳಿರುತ್ತಾರೆ. ಸೋತ ನಂತರ ನೀವು ಮಾಡಿದ ಪೂಜೆಯಲ್ಲಿ ದೋಷವಿದೆ ಎನ್ನುತ್ತಾರೆ. ಪೂಜೆ, ಪುನಸ್ಕಾರ, ಜ್ಯೋತಿಷ್ಯದಿಂದ ಗೆಲುವು ಸಾಧ್ಯವಿಲ್ಲ. ಜನರು ನಮ್ಮನ್ನು, ನಮ್ಮ ಕೆಲಸವನ್ನು ಮೆಚ್ಚಿ ಮತ ನೀಡಿದರೇ ಮಾತ್ರ ಗೆಲ್ಲಲು ಸಾಧ್ಯ" ಎಂದು ಹೇಳಿದರು.
"ಬಸವಣ್ಣನವರು ಮೌಢ್ಯದ ವಿರುದ್ಧ ನಿರಂತರವಾಗಿ ಹೋರಾಡಿದ್ದರು. ಅವರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡುವ ಬದಲು, ಹಾಸ್ಟೆಲ್ ಗಳಲ್ಲಿ ವಾಸಿಸುವ ಅಥವಾ ಬಡ ಮಕ್ಕಳಿಗೆ ಹಾಲು ನೀಡಬೇಕು" ಎಂದು ಕರೆ ನೀಡಿದರು.
ನೂತನಕಾರಿಗೆಚಾಲನೆ: ಇದೇ ಸಂದರ್ಭದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಅವರ ನೂತನ ಕಾರಿಗೆ ಸತೀಶ ಜಾರಕಿಹೊಳಿ ಅವರು ಸ್ಮಶಾನದಲ್ಲಿಯೇ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಸತೀಶ ಅವರನ್ನು ಅವರ ಅಭಿಮಾನಿಗಳು ಸನ್ಮಾನಿಸಿದರು.
ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಚರಂತೇಶ್ವರ ಮಠದ ಶರಣಬಸವ ದೇವರು, ಪಟ್ಟಣದ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಬಿಲಿವರ್ಸ್ ಇಸ್ಟರ್ನ್ ಚರ್ಚ್ ನ ರೆವರೆಂಡ್ ಪಾದರ್ ಚನ್ನಪ್ಪ ಎಲ್.ಜಿ., ಮರಖದ್ ಮಸೀದಿಯ ಹಾಫೀಜ್ ಲಿಯಾಕತ್ ಬಾಗವಾನ್, ಮುನವಳ್ಳಿಯ ಮೊಹತಾಮ್ ಮದರಸಾದ ಹಾಫೀಜ್ ಅಬ್ದುಲ್ ಮಜೀದ್ ಬೈರಕದಾರ್ ಉಪಸ್ಥಿತರಿದ್ದರು.










